

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ನಮ್ಮ ನಿರೀಕ್ಷೆಯನ್ನು ಹುಸಿಯಾಗಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಿನ್ನಡೆ ಅನುಭವಿಸಿದ್ದು, ಪ್ರತಿಪಕ್ಷ ಬಿಜೆಪಿ ಸರಳ ಬಹುಮತ ಪಡೆದಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಚುನಾವಣೆಯಲ್ಲಿ ತಾವು ನಿರೀಕ್ಷಿಸಿದ ಫಲಿತಾಂಶ ಬಂದಿಲ್ಲ. ಚುನಾವಣೆಯಲ್ಲಿ ನಾವು ಸರಳ ಬಹುಮತ ನಿರೀಕ್ಷಿಸಿದ್ದೆವು. ಆದರೆ ಪ್ರಸ್ತುತ ಫಲಿತಾಂಶ ನಮ್ಮ ನಿರೀಕ್ಷೆಯನ್ನು ಹುಸಿಗೊಳಿಸಿದೆ ಎಂದು ಹೇಳಿದರು.
"ಬಿಬಿಎಂಪಿ ಚುನಾವಣಾ ಫಲಿತಾಂಶ ರಾಜ್ಯ ಸರ್ಕಾರದ ವಿರುದ್ಧವಾಗಿಲ್ಲ. ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿತ್ತು. ಹೀಗಾಗಿ ಪ್ರಸ್ತುತ ಚುನಾವಣೆ ಕಾಂಗ್ರೆಸ್ ಸರ್ಕಾರದ ವಿರುದ್ಧವಲ್ಲ. ಅಧಿಕಾರಕ್ಕೆ ಬಂದ 2 ವರ್ಷದಲ್ಲಿ ಬಿಬಿಎಂಪಿ ಕಾರ್ಯಕ್ರಮಗಳನ್ನು ಮಾಡಿದ್ದೆವು. ಬೆಂಗಳೂರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದ ಕಸ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಂಡಿದ್ದೆವು. ತೆರಿಗೆ ವಸೂಲಿ ಕುರಿತು ಸಾಕಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದ್ದೆವು. ಅಲ್ಲದೆ ಬೆಂಗಳೂರಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದೆವು".
ಆದರೆ ಬಿಬಿಎಂಪಿಯಲ್ಲಿ ಕಳೆದ 5 ವರ್ಷದಿಂದ ಅಧಿಕಾರದಲ್ಲಿದ್ದ ಬಿಜೆಪಿಯ ಅಧಿಕಾರಾವಧಿಯಲ್ಲಿ ಯಾವುದೇ ಕೆಲಸಗಳಾಗಿರಲಿಲ್ಲ. ಹೀಗಾಗಿ ಪ್ರಸ್ತುತ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಹುಮತ ಲಭಿಸಲಿದೆ ಎಂದು ನಿರೀಕ್ಷಿಸಿದ್ದೆವು. ಮಾಧ್ಯಮಗಳ ಸಮೀಕ್ಷೆಗಳು ಕೂಡ ಕಾಂಗ್ರೆಸ್ ಪಕ್ಷದ ಪರವಾಗಿದ್ದವು. ಆದರೆ ಫಲಿತಾಂಶ ನಮ್ಮ ನಿರೀಕ್ಷೆ ಹುಸಿಗೊಳಿಸಿದೆ. ಆದರೂ ಜನರ ತೀರ್ಪಿಗೆ ತಲೆ ಬಾಗುತ್ತೇವೆ. ಫಲಿತಾಂಶದ ಸಂಪೂರ್ಣ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.