

ಬೆಂಗಳೂರು: ಬೆಂಗಳೂರಿನ ಚರ್ಚ್ ರಸ್ತೆಯಲ್ಲಿ ಡಿಸೆಂಬರ್ 28ರಂದು ನಡೆದ ಬಾಂಬ್ ಸ್ಫೋಟದ ಬಗ್ಗೆ ತನಿಖೆ ನಡೆಸುತ್ತಿರುವ ವೇಳೆ 3 ಶಂಕಿತ ಆರೋಪಿಗಳನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳದಲ್ಲಿ ದಾಳಿ ನಡೆಸಿದ ಎನ್‌ಐಎ ತಂಡಕ್ಕೆ ಸ್ಫೋಟಕ ವಸ್ತುಗಳನ್ನು ಹೊಂದಿರುವ ಅಬ್ದುಲ್ ಸುಬೂರ್ (24) ಎಂಬಾತ ಸಿಕ್ಕಿ ಬಿದ್ದಿದ್ದಾನೆ. ಈತ ಎಂಬಿಎ ವಿದ್ಯಾರ್ಥಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಅದೇ ವೇಳೆ ಬೆಂಗಳೂರಿನಲ್ಲಿ ಸದ್ದಾಂ ಹುಸೇನ್ (35), ಸೈಯದ್ ಇಸ್ಮಾಯಿಲ್ ಅಫಕ್ (35) ಎಂಬ ಶಂಕಿತ ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇದೀಗ ಬಂಧನಕ್ಕೊಳಗಾಗಿರುವ ಮೂವರು ಆರೋಪಿಗಳು ಭಟ್ಕಳದವರಾಗಿದ್ದಾರೆ. ಇವರು ಪುಲಿಕೇಶಿನಗರದ ಮನೆಯಲ್ಲಿ ವಾಸವಾಗಿದ್ದು, ಅಲ್ಲಿಂದ ಮಹತ್ವದ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಗುರುವಾರ ಸಂಜೆ ಬೆಂಗಳೂರು ಪೊಲೀಸ್ ಆಯುಕ್ತ ಎಂ.ಎನ್ ರೆಡ್ಡಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೆಡ್ಡಿ ಬಂಧಿತರು ನಿಷೇಧಿತ ಉಗ್ರ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಜತೆ ಸಂಪರ್ಕದಲ್ಲಿದ್ದರು ಎಂದು ಹೇಳಿದ್ದಾರೆ. ದಾಳಿ ವೇಳೆ ಪೊಲೀಸರಿಗೆ ಭಟ್ಕಳದ ಮನೆಯಲ್ಲಿ ಜಿಲೆಟಿನ್, ಅಮೋನಿಯಂ ನೈಟ್ರೇಟ್, ಟೈಮರ್, ಲ್ಯಾಪ್‌ಟಾಪ್ ಹಾಗೂ ಸಂವಹನ ಸಾಮಗ್ರಿಗಳು ಸಿಕ್ಕಿವೆ. ಈ ಮೂವರು ಬೆಂಗಳೂರಿನಲ್ಲಿ ವಾಸವಿದ್ದು, ಬೇರೆಯವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದರು ಎಂದು ರೆಡ್ಡಿ ಹೇಳಿದ್ದಾರೆ. ಆದಾಗ್ಯೂ, ಬಂಧಿತ ಆರೋಪಿಗಳಿಗೂ ಚರ್ಚ್ ರಸ್ತೆಯಲ್ಲಿ ಸಂಭವಿಸಿದ ಸ್ಫೋಟಕ್ಕೆ ಮೇಲ್ನೋಟಕ್ಕೆ ಯಾವುದೇ ಸಂಬಂಧವಿಲ್ಲ ಅನಿಸುತ್ತಿದೆ. ಸ್ಫೋಟಕ್ಕೆ ಸಂಬಂಧವಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ ರೆಡ್ಡಿ ಬಂಧಿತ ಆರೋಪಿಗಳ ವಿರುದ್ಧ ಪುಲಿಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.