

ಬೆಂಗಳೂರು: ಕೇಂದ್ರ ವಿತ್ತ ಸಟಿವ ಅರುಣ್ ಜೇಟ್ಲಿ ಅವರು ತಮ್ಮ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ಘೋಷಿಸಿ ಇನ್ನು ಸರಿಯಾಗಿ 48 ಗಂಟೆಗಳು ಆಗಿಲ್ಲ. ಆಗಲೇ ನಮ್ಮ ರಾಜ್ಯದ ರಾಜಕೀಯ ನಾಯಕರು ಐಐಟಿಯನ್ನು ತಮ್ಮ ಜಿಲ್ಲೆಗಳಲ್ಲೇ ಸ್ಥಾಪಿಸಬೇಕು ಎಂದು ಲಾಬಿ ನಡೆಸಲು ಶುರು ಮಾಡಿದ್ದಾರೆ.
ಉತ್ತರ ಕರ್ನಾಟಕದ ನಾಯಕರು ಐಐಟಿಯನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಅಥವಾ ರಾಯಚೂರಿನಲ್ಲಿ ಸ್ಥಾಪಿಸಬೇಕು ಎನ್ನುತ್ತಿದ್ದರೆ, ಕರಾವಳಿ ಕರ್ನಾಟಕದ ನಾಯಕರು ತಮ್ಮ ಪ್ರದೇಶದಲ್ಲಿ ಐಐಟಿ ಸ್ಥಾಪನೆಯಾಗಬೇಕು ಎಂದು ಲಾಬಿ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರದ ಕೆಲವು ಕಾಂಗ್ರೆಸ್ ನಾಯಕರು ತಮ್ಮ ಜಿಲ್ಲೆಗೇ ಐಐಟಿ ಬೇಕು ಎನ್ನುತ್ತಿದ್ದಾರೆ.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಐಐಟಿಯನ್ನು ಮೈಸೂರಿನಲ್ಲೇ ಸ್ಥಾಪಿಸುವ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ. ಈ ಕುರಿತು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜತೆ ಮಾತನಾಡಿರುವ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರು, ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದರೆ, ಉತ್ತರ ಕನ್ನಡಕ್ಕೆ ಐಐಟಿ ಕೊಂಡೊಯ್ಯಲು ತಮಗೆ ಸಂತೋಷವಾಗುತ್ತದೆ ಎಂದಿದ್ದಾರೆ.
ಐಐಟಿ ಸ್ಥಾಪನೆಗೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಕಡೆಯಿಂದ ಹಲವು ಮನವಿಗಳು ಮತ್ತು ಸಲಹೆಗಳು ಬಂದಿವೆ. ಸಚಿವ ಸಂಪುಟ ಒಪ್ಪಿಗೆ ನೀಡಿದ್ದೆಯಾದರೆ, ಅದನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಥಾಪಿಸಬೇಕು ಎಂಬುದು ನನ್ನ ವೈಯಕ್ತಿಕ ಆಸಕ್ತಿ ಎಂದಿದ್ದಾರೆ.
ಮಂಗಳೂರು, ಮೈಸೂರು, ರಾಯಚೂರು, ಚಿಕ್ಕಬಳ್ಳಾಪುರ, ಹುಬ್ಬಳ್ಳಿ-ಧಾರವಾಡ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಐಐಟಿ ಸ್ಥಾಪಿಸಬೇಕು ಎಂಬ ಪ್ರಸ್ತಾವಗಳು ಬಂದಿವೆ. ಆದರೆ ಈ ಕುರಿತು ನಾವು ಸಚಿವ ಸಂಪುಟ ಸಭೆಯಲ್ಲಿ ಹಾಗೂ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ದೇಶಪಾಂಡೆ ತಿಳಿಸಿದ್ದಾರೆ.