

ಹುಬ್ಬಳ್ಳಿ: ಅಸಹಿಷ್ಣುತೆ ಬಗ್ಗೆ ನಟ ಅಮಿರ್ ಖಾನ್ ನೀಡಿದ್ದ ಹೇಳಿಕೆ ಕುರಿತಂತೆ ಹಾಗೂ ಇಸ್ಲಾಂ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಂತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಬೆದರಿಕೆ ಕರೆ ಬಂದಿದೆ ಎಂದು ಗುರುವಾರ ತಿಳಿದುಬಂದಿದೆ.
ಬೆದರಿಕೆ ಕರೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಮೋದ್ ಮುತಾಲಿಕ್ ಅವರು, ನಟಿ ಅಮಿರ್ ಖಾನ್ ಹಾಗೂ ಇಸ್ಲಾಂ ಬಗ್ಗೆ ಮಾತನಾಡದಂತೆ ನನಗೆ ಬೆದರಿಕೆ ಕರೆಯೊಂದು ಬಂದಿತ್ತು. ಆದರೆ. ಈ ಬೆದರಿಕೆ ಕರೆಗಳಿಗೆ ನಾನು ಹೆದರುವುದಿಲ್ಲ. ಹಿಂದುತ್ವದ ಕುರಿತಾಗಿರುವ ನನ್ನ ಕೆಲಸ ಎಂದಿಗೂ ನಿಲ್ಲುವುದಿಲ್ಲ. ಈ ಹಿಂದಿನಿಂದಲೂ ನಾನು ಬೆದರಿಕೆಗಳನ್ನು ಹೆದರಿಸಿದ್ದೇನೆ ಎಂದು ಹೇಳಿದ್ದಾರೆ.
ಕಳೆದೆರಡು ದಿನಗಳ ಹಿಂದಷ್ಟೇ ರಾಮನಾಥ ಗೋಯೆಂಕಾ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ್ದ ನಟ ಅಮಿರ್ ಖಾನ್ ಅವರು, ಅಸಹಿಷ್ಣುತೆಯನ್ನು ವಿರೋಧಿಸಿ ಸಾಹಿತಿಗಳು ಪ್ರಶಸ್ತಿಗಳನ್ನು ವಾಪಸ್ಸು ನೀಡುತ್ತಿರುವುದನ್ನು ಸಮರ್ಥಿಸಿಕೊಂಡಿದ್ದರು. ಅಲ್ಲದೆ, ಕಳೆದ ಹಲವು ತಿಂಗಳುಗಳಿಂದ ತಾನೂ ಕೂಡ ಅಭದ್ರತೆಯನ್ನು ಅನುಭವಿಸುತ್ತಿದ್ದೇನೆ.
ದಿನನಿತ್ಯ ಪತ್ರಿಕೆಗಳಲ್ಲಿ ನೋಡುತ್ತಿರುವ ಸಂಗತಿಗಳು ನನ್ನನ್ನು ಆತಂಕ್ಕೀಡು ಮಾಡುತ್ತಿವೆ. ಇದನ್ನು ನಿರಾಕರಿಸಲು ಸಾಧ್ಯವಿಲ್ಲ. ಈ ಬಗ್ಗೆ ಪತ್ನಿ ಜತೆ ಮಾತನಾಡುತ್ತಿರುವಾಗ, ನಾವು ದೇಶ ತೊರೆದು ಹೋಗೋಣವೇ ಎಂದು ಆಕೆ ನನ್ನನ್ನು ಕೇಳಿದ್ದಳು. ನನ್ನ ಪತ್ನಿ ಮಕ್ಕಳು ಹಾಗೂ ಅವರ ಭವಿಷ್ಯದ ಬಗ್ಗೆ ಹೆದರಿದ್ದಳು ಮತ್ತು ದಿನಪತ್ರಿಕೆಯನ್ನು ಓದಲು ಹೆದರುತ್ತಿದ್ದಳು ಎಂದು ಹೇಳಿದ್ದರು.
ಅಮಿರ್ ಖಾನ್ ಅವರ ಈ ಹೇಳಿಕೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಅಮಿರ್ ಖಾನ್ ವಿರುದ್ಧ ಸಾಮಾಜಿಕ ಜಾಲತಾಣದಾದ್ಯಂತ ಹಲವು ವಿರೋಧಗಳು ವ್ಯಕ್ತವಾಗುತ್ತಿವೆ.