

ಬೆಂಗಳೂರು: ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್‌ಕುಮಾರ್ ಅವರು ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಬೆಳಗ್ಗೆ ಜಿಮ್ ಮಾಡುವ ಸಂದರ್ಭದಲ್ಲಿ ಅಸ್ವಸ್ಥಗೊಂಡ ಶಿವಣ್ಣ ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಆಂಜಿಯೋಗ್ರಾಂ ಪರೀಕ್ಷೆ ಮಾಡುವ ಅಗತ್ಯ ಇದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಆಂಜಿಯೋಗ್ರಾಂ ಪರೀಕ್ಷೆಯಲ್ಲಿ ಶಿವಣ್ಣನ ಹೃದಯದ ರಕ್ತನಾಳದಲ್ಲಿ ಯಾವುದೇ ಬ್ಲಾಕ್ ಪತ್ತೆಯಾಗಿಲ್ಲ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಮಲ್ಯ ಆಸ್ಪತ್ರೆಯ ಡಾ.ಶ್ರೀನಿವಾಸ್ ನೇತೃತ್ವದ ವೈದ್ಯರ ತಂಡ ಶಿವಣ್ಣನಿಗೆ ಚಿಕಿತ್ಸೆ ನೀಡುತ್ತಿದ್ದು, ಎರಡ್ಮೂರು ದಿನಗಳಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ.
ಇನ್ನು ನಟ ಶಿವರಾಜ್‌ಕುಮಾರ್ ಅವರ ಆರೋಗ್ಯ ಸ್ಥಿರವಾಗಿದೆ. ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದು ಜೆಡಿಎಸ್ ಶಾಸಕ ಹಾಗೂ ಶಿವರಾಜ್‌ಕುಮಾರ್ ಅವರ ಬಾಮೈದ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್ ಕುಮಾರ್ ಅವರ ಸಹೋದರ ರಾಘವೇಂದ್ರ ರಾಜ್ ಕುಮಾರ್ ಅವರು, ಶಿವಣ್ಣ ಚೆನ್ನಾಗಿದ್ದಾರೆ. ಅವರಿಗೆ ಹೃದಯದ ಯಾವುದೇ ಸಮಸ್ಯೆ ಇಲ್ಲ. ಅಭಿಮಾನಿಗಳು ಆತಂಕ ಪಡುವ ಅಗತ್ಯ ಇಲ್ಲ. ಗಣ್ಯರು ಆಸ್ಪತ್ರೆಗೆ ದಾಖಲಾದರೆ ಬೇಗ ಡಿಸ್ಚಾರ್ಜ್ ಮಾಡಲ್ಲ. ಸಂಪೂರ್ಣ ತಪಾಸಣೆಯ ಬಳಿಕವೇ ಡಿಸ್ಚಾರ್ಜ್ ಮಾಡುತ್ತಾರೆ. ಹೀಗಾಗಿ ಯಾರೂ ಕೂಡ ಸುಳ್ಳು ವದಂತಿಗಳನ್ನು ಹಬ್ಬಿಸಬಾರದು ಎಂದು ಮನವಿ ಮಾಡಿದರು.