ಬರ ನಿರ್ವಹಣೆಗೆ ರು.160 ಕೋಟಿ, ಕೇಂದ್ರದ ವಿರುದ್ಧ ಸಿದ್ದು ಗರಂ

ರಾಜ್ಯಕ್ಕೆ ಎದುರಾಗಿರುವ ಬರ ಪರಿಸ್ಥಿತಿ ನಿರ್ವಹಣೆಗಾಗಿ ರು.160 ಕೋಟಿ ಅನುದಾನವನ್ನು ಬುಧವಾರ ಸರ್ಕಾರ ಬಿಡುಗಡೆ ಮಾಡುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ...
ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ
ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ
Updated on: 

ಬೆಂಗಳೂರು: ರಾಜ್ಯಕ್ಕೆ ಎದುರಾಗಿರುವ ಬರ ಪರಿಸ್ಥಿತಿ ನಿರ್ವಹಣೆಗಾಗಿ ರು.160 ಕೋಟಿ ಅನುದಾನವನ್ನು ಬುಧವಾರ ಸರ್ಕಾರ ಬಿಡುಗಡೆ ಮಾಡುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸೌಧದಲ್ಲಿ ಅಧಿಕಾರಿಗಳ ಜತೆ ನಡೆಸಿದ ಮ್ಯಾರಥಾನ್ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ಈ ವಿಷಯ ತಿಳಿಸಿದ್ದು, ಬರ ಪರಿಹಾರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ರಾಜ್ಯ ಸರ್ವಪಕ್ಷ ನಿಯೋಗ ಮಾಡಿದ್ದ ಮನವಿಗೆ ಪ್ರಧಾನಿ ನರೇಂದ್ರ ಮೋದಿ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಕೇಂದ್ರ ಪರಿಶೀಲನಾ ತಂಡವನ್ನು ಇದುವರೆಗೆ ರಾಜ್ಯಕ್ಕೆ ಕಳುಹಿಸಿಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬರ ನಿರ್ವಹಣೆಗಾಗಿ ರಾಜ್ಯ ಸರ್ಕಾರ ಈಗಾಗಲೇ ರು.235 ಕೋಟಿ ಬಿಡುಗಡೆ ಮಾಡಿದೆ. ಜಿಲ್ಲಾಧಿಕಾರಿಗಳ ಪಿಡಿ ಅಕೌಂಟ್‍ನಲ್ಲಿ  ರು.135 ಕೋಟಿ ಹಣವಿದೆ. ಹೆಚ್ಚುವರಿಯಾಗಿ ರು.160 ಕೋಟಿಯನ್ನು ಬುಧವಾರ ಬಿಡುಗಡೆ ಮಾಡಲಾಗುತ್ತದೆ ಎಂದರು.

ನಿಯಮ ಸಡಿಲಿಕೆ
ರಾಜ್ಯದ 835 ಹಳ್ಳಿಗಳಿಗೆ ಈಗಾಗಲೇ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿ ದೆ. 90 ದಿನ ಮಾತ್ರ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕೆಂಬ ನಿಯಮವಿದೆ. ಆದರೆ ಬರ  ತೀವ್ರವಾಗಿರುವುದರಿಂದ ಎಷ್ಟು ದಿನ ಅಗತ್ಯವೋ ಅಷ್ಟು ದಿನ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ನಿಯಮ ಸಡಿಲಿಕೆ ಮಾಡಲಾಗಿದೆ ಎಂದು ಹೇಳಿದರು. ಅದೇ ರೀತಿ ಅಗತ್ಯ  ಇರುವ ಕಡೆಗಳಲ್ಲಿ ಮೇವಿನ ಬ್ಯಾಂಕ್ ಸ್ಥಾಪನೆ ಮಾಡುವಂತೆ ಸೂಚನೆ ನೀಡಿದ್ದೇನೆ. ರಾಜ್ಯದಿಂದ ಮೇವು ಹೊರ ರಾಜ್ಯಕ್ಕೆ ಸಾಗಣೆಯಾಗದಂತೆ ತಡೆಯಲು ಗಡಿಭಾಗದಲ್ಲಿ ಚೆಕ್ ಪೋಸ್ಟ್ ಸ್ಥಾಪನೆ  ಮಾಡಲು ಸೂಚನೆ ನೀಡಿದ್ದೇವೆ. ಅಗತ್ಯ ಇರುವ ಕಡೆ ಮೇವು ಬ್ಯಾಂಕ್ ಸ್ಥಾಪನೆ ಮಾಡಲು ಸೂಚನೆ ನೀಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡದೇ  ಇದ್ದರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜನ ಸಂಪರ್ಕ ಸಭೆ
ಜನರು ತಮ್ಮ ಸಮಸ್ಯೆಯನ್ನು ಹೊತ್ತು ಯಾವುದೇ ಕಾರಣಕ್ಕೂ ಬೆಂಗಳೂರಿಗೆ ಬರುವಂತಾಗಬಾರದು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲಾಮಟ್ಟದಲ್ಲಿ ಹಾಗೂ  ಶಾಸಕರ ನೇತೃತ್ವದಲ್ಲಿ ತಾಲೂಕು ಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸುವಂತೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಕಡ್ಡಾಯವಾಗಿ ಈ ಸಭೆಯಲ್ಲಿ ಭಾಗವಹಿಸುವಂತೆ ಮುಖ್ಯ  ಕಾರ್ಯದರ್ಶಿಗಳ ಮೂಲಕ ಬುಧವಾರ ಸುತ್ತೋಲೆ ಹೊರಡಿಸುತ್ತೇನೆ ಎಂದರು.

ಸಾಲ ವಸೂಲಿ ಬೇಡ
ರೈತರಿಂದ ಅಧಿಕ ಬಡ್ಡಿ ವಸೂಲಿ ಮಾಡುತ್ತಿದ್ದ ವ್ಯಕ್ತಿಗಳ ವಿರುದ್ಧ ಈಗಾಗಲೇ 1000 ಪ್ರಕರಣ ದಾಖಲಿಸಿ 600 ಜನರನ್ನು ಬಂಧಿಸಲಾಗಿದೆ. ರೈತರಿಂದ ಬಲಾತ್ಕಾರವಾಗಿ ಅಧಿಕ ಬಡ್ಡಿ ಮತ್ತು ಸಾಲ  ವಸೂಲಿ ಮಾಡುವುದು, ರೈತರಿಗೆ ಅಪಮಾನ ಮಾಡುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಸಹಕಾರ ಬ್ಯಾಂಕ್ ಹಾಗೂ ರಾಷ್ಟ್ರೀಕತ ಬ್ಯಾಂಕ್ ಗಳಿಗೂ ರೈತರಿಂದ ಸಾಲ ವಸೂಲಿ ಮಾಡದಂತೆ ಸೂಚನೆ ನೀಡಲಾಗಿದೆ ಎಂದರು.

ನೇಮಕ
ಹೈದರಾಬಾದ್ ಕರ್ನಾಟಕ ಭಾಗದಲ್ಲಿ 371 ಜೆ ಅನುಷ್ಠಾನ ಸಂಬಂಧ ಸಭೆಯಲ್ಲಿ ಚರ್ಚೆ ನಡೆದಿದೆ. ಈ ಬಾರಿ ರು.1000 ಕೋಟಿ ಖರ್ಚು ಮಾಡುತ್ತೇವೆ. 31 ಸಾವಿರ ಹುದ್ದೆ ಭರ್ತಿ ಮಾಡುವ ಭರವಸೆ ನೀಡಲಾಗಿತ್ತು. 7000 ಹುದ್ದೆ ಭರ್ತಿಯಾಗಿದೆ. ಉಳಿದ ಸ್ಥಾನಗಳ ನೇಮಕಕ್ಕೆ ಸೆಪ್ಟಂಬರ್ 17ರೊಳಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಭರವಸೆ ನೀಡಿದರು.

ಮೊಸಳೆ ಕಣ್ಣೀರು
ರಾಜ್ಯದಲ್ಲಿ ಭೀಕರ ಬರ ಇದ್ದರೂ ಬಿಜೆಪಿ ಮುಖಂಡರು ಚೈತನ್ಯ ಯಾತ್ರೆ ಹೆಸರಿನಲ್ಲಿ ಸಾಂತ್ವನದ  ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಈ ರೀತಿ ರಾಜಕಾರಣ ಮಾಡುವ ಬದಲು ಕೇಂದ್ರ  ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನ ಬಿಡುಗಡೆ ಮಾಡಬಹುದಿತ್ತು. ಮಹದಾಯಿ ವಿಚಾರದಲ್ಲೂ ಅವರಕು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com