

ಬೆಂಗಳೂರು: ರಾಘವೇಶ್ವರ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಎರಡನೇ ಅತ್ಯಾಚಾರ ಪ್ರಕರಣದ ಎರಡನೇ ಆರೋಪಿ ಹೈಕೋರ್ಟ್ ವಕೀಲ ಅರುಣ್ ಶ್ಯಾಂಗೆ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಸರ್ಕಾರದ ಹೆಚ್ಚುವರಿ ಅಭಿಯೋಜಕರೇ ಜಾಮೀನು ನೀಡಬಹುದೆಂದು ಹೇಳಿದ ಹಿನ್ನೆಲೆಯಲ್ಲಿ ಹೈ ಜಾಮೀನು ನೀಡಿದೆ. ಶ್ರೀ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅವರ ಸುತ್ತಲಿರುವ ವಕೀಲ ಅರುಣ್ ಶ್ಯಾಂ ಸೇರಿ ನಾಲ್ವರು ಅಪಹರಿಸಿ ಈ ಘಟನೆ ಕುರಿತು ಎಲ್ಲಿಯೂ ಬಾಯಿಬಿಡದಂತೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಅತ್ಯಾಚಾರ ಸಂತ್ರಸ್ತೆ
ಗಿರಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ವಕೀಲ ಅರುಣ್ ಶ್ಯಾಂ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದರ ವಿಚಾರಣೆ ನಡೆಸಿದ ನ್ಯಾ.ಎಲ್.ನಾರಾಯಣ ಸ್ವಾಮಿ ಅವರಿದ್ದ ಏಕಸದಸ್ಯ ಪೀಠ, ಆರೋಪಿಗೆ ಹತ್ತು ದಿನಗಳ ಕಾಲ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ಕೆ.ಆರ್.ಕೇಶವಮೂರ್ತಿ ವಾದ ಮಂಡಿಸಿ, ಆರೋಪಿಯು ವಕೀಲಿ ವೃತ್ತಿ ನಡೆಸುತ್ತಿದ್ದಾರೆ. ಎರಡು ದಿನಗಳ ಹಿಂದಷ್ಟೇ (ಆ.29) ದೂರು ದಾಖಲಾಗಿದೆ. ಆದ್ದರಿಂದ ದೂರುದಾರರು ದಾಖಲಿಸಿರುವ ದೂರನ್ನು ಪರಿಶೀಲಿಸಬೇಕಿದೆ. ಈ ನಿಟ್ಟಿನಲ್ಲಿ ಆರೋಪಿಯು ದೂರುದಾರರಿಗೆ ಮಾಡಿರುವ ಕರೆಗಳು ಮತ್ತು ಸ್ಥಳಗಳನ್ನು ಪರಿಶೀಲಿಸಬೇಕು. ಈ ನಿಟ್ಟಿನಲ್ಲಿ ಆರೋಪಿಗೂ ಒಂದು ಅವಕಾಶ ಕಲ್ಪಿಸಬೇಕಾಗಿರುವುದರಿಂದ ಆರೋಪಿ ಕೇಳಿರುವ ಮಧ್ಯಂತರ ಮನವಿಯನ್ನು ಕೆಲವು ಷರತ್ತುಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದು ಎಂದು ಸರ್ಕಾರಿ ವಕೀಲರೇ ಪೀಠದ ಮುಂದೆ ಈ ರೀತಿ ವಾದ ಮಂಡಿಸಿದರು.
ಇದಕ್ಕೂ ಮುನ್ನ ಆರೋಪಿ ಪರ ಹಿರಿಯ ವಕೀಲ ಸಿ.ಎಚ್. ಜಾಧವ್ ವಾದ ಮಂಡಿಸಿ, ದೂರುದಾರರು ದೂರಿನಲ್ಲಿ 2012ರ ಸೆ.13ರಂದು ಆರೋಪಿಯು ತನ್ನನ್ನು ಅಪಹರಿಸಿ ಜೀವ ಬೆದರಿಕೆ ಒಡ್ಡಿದ್ದಾರೆಂದು ದೂರು ದಾಖಲಿಸಿದ್ದಾರೆ. ಘಟನೆ ನಡೆದು 3 ವರ್ಷ ಕಳೆದ ನಂತರ ದೂರು ದಾಖಲಿಸಿದ್ದು, ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ದೂರಿನಲ್ಲಿ 3 ವರ್ಷ ವಿಳಂಬವಾಗಿದೆ ಎಂಬ ಕಾರಣವನ್ನು ಪರಿಗಣಿಸಬೇಕು. ಅಷ್ಟೇ ಅರ್ಜಿ ಪರಿಗಣಿಸಬಹುದು ವಿನಃ ಆತ ವಕೀಲಿ ವೃತ್ತಿ ಮಾಡುತ್ತಿ ದ್ದಾನೆಂಬ ಹೇಳಿಕೆ ಒಪ್ಪಲು ಸಾಧ್ಯವಿಲ್ಲ. ದೂರುದಾರರು ಮಾಡಿರುವ ದೂರು ಗಂಭೀರವಾಗಿದೆ. ಇದೆಲ್ಲದಕ್ಕಿಂತ ಮಿಗಿಲಾಗಿ ಆಕೆಯ ಜೀವನ ಇದರಿಂದ ಹಾಳಾಗಿರುವುದನ್ನು ಇಲ್ಲಿ ಗಮನಿಸಬೇಕಿದೆ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ವಕೀಲರು ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿದೆ.
ಎಸ್‍ಪಿಪಿ ಅನುಮಾನದ ನಡೆ
ಸಾಮಾನ್ಯವಾಗಿ ಅತ್ಯಾಚಾರ ಹಾಗೂ ಜೀವ ಬೆದರಿಕೆ ಯಂತಹ ಗಂಭೀರ ಪ್ರಕರಣದಲ್ಲಿ ಪ್ರತಿವಾದಿ ಸ್ಥಾನದಲ್ಲಿದ್ದು ಪೊಲೀಸರನ್ನು ಸಮರ್ಥಿಸಿಕೊಳ್ಳಲಾಗುತ್ತದೆ. ಈ ನಿಟ್ಟನಲ್ಲಿ ಯಾವುದೇ ಕಾರಣಕ್ಕೂ ಆರೋಪಿಗೆ ಜಾಮೀನು ನೀಡದಂತೆ ವಾದ ಮಂಡಿಸುವ ಜವಾಬ್ದಾರಿ ಸರ್ಕಾರವನ್ನು ಪ್ರತಿನಿಧಿಸುವವರದ್ದು. ಆದರೆ ಈ ಪ್ರಕರಣದಲ್ಲಿ ಸರ್ಕಾರಿ ವಕೀಲ ಕೆ.ಆರ್. ಕೇಶವ ಮೂರ್ತಿ ಅವರು ಆರೋಪಿಗೆ ನಿರೀಕ್ಷಣ ಜಾಮೀನು ನೀಡಬಹುದೆಂದು ಆರೋಪಿ ಪರವಾಗಿ ನಿಲ್ಲುವ ಮೂಲಕ ಅನುಮಾನಸ್ಪದ ನಡೆದುಕೊಂಡಿದ್ದಾರೆ ಎಂದು ಮಾತುಗಳು ಕೇಳಿಬಂದಿವೆ.