

ಬೀಜಿಂಗ್: ಪದೇ ಪದೇ ಭಾರತ ದಲೈಲಾಮಾರನ್ನು ಚೀನಾವನ್ನು ಬೆದರಿಸುವ ರೀತಿಯಲ್ಲಿ ಬಳಸಿಕೊಳ್ಳಬಾರದು ಎಂದು ಚೀನಾದ ಸ್ವಾಮ್ಯದ ಮಾಧ್ಯಮ ಎಚ್ಚರಿಕೆ ನೀಡಿದೆ.
ಇತ್ತೀಚೆಗೆ ಬೌದ್ಧ ಧರ್ಮಗುರು ದಲೈಲಾಮಾ ಅವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಚೀನಾ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಪತ್ರಿಕೆ, ಭಾರತದ ವಿರುದ್ಧ ತನ್ನ ಆಕ್ರೋಶ ಹೊರ ಹಾಕಿದೆ. ದಲೈಲಾಮಾರನ್ನು ಭಾರತಕ್ಕೆ ಆಹ್ವಾನಿಸುವ ಮೂಲಕ ಭಾರತ ಮತ್ತೆ ತನ್ನ ಹಠಮಾರಿ ಧೋರಣೆಯನ್ನು ತೋರುತ್ತಿದೆ. ಭಾರತ ನಡೆ ಪುಟ್ಟ ಹಠಮಾರಿ ಮಕ್ಕಳಂತೆ ಕಂಡುಬರುತ್ತಿದೆ. ಒನ್ ಚೈನಾ ನೀತಿಯನ್ನು ಪ್ರಶ್ನಿಸಿದ್ದ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹೇಗೆ ಚೀನಾ ಮೆತ್ತಗಾಗಿಸಿತು ಎಂಬುದನ್ನು ಭಾರತ ಮರೆಯಬಾರದು. ಟ್ರಂಪ್ ವಿಚಾರದಿಂದಾದರೂ ಭಾರತ ಪಾಠ ಕಲಿಯಬೇಕು ಎಂದು ಪತ್ರಿಕೆ ಹೇಳಿದೆ.
"ಭಾರತ ಕೆಲವೊಮ್ಮೆ ಪುಟ್ಟ ಹಠಮಾರಿ ಮಕ್ಕಳಂತೆ ವರ್ತಿಸುತ್ತದೆ. ವಿಶ್ವದ ಅತೀ ದೊಡ್ಡ ಪ್ರಜಾಸತ್ತಾತ್ಮಕ ದೇಶವೆಂಬ ಕಿರೀಟವನ್ನು ಭಾರತ ಹೊತ್ತುಕೊಂಡಿದೆಯಾದರೂ ಅದರ ದೂರದೃಷ್ಟಿ ಮಾತ್ರ ಬಹಳ ಕಿರಿದಾಗಿದೆ" ಎಂದು ಗ್ಲೋಬಲ್ ಟೈಮ್ಸ್ ತನ್ನ ಲೇಖನದಲ್ಲಿ ಟೀಕಿಸಿದೆ.
1959ರಲ್ಲಿ ಭಾರತದ ಧರ್ಮಶಾಲಾಕ್ಕೆ ಬಂದು ನೆಲೆಸಿರುವ ಖ್ಯಾತ ಬೌದ್ಧ ಧಾರ್ಮಿಕ ಗುರು ದಲೈಲಾಮಾ ಅವರು ಕಳೆದ ಭಾನುವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿದ್ದರು. ಈ ವಿಚಾರ ಇದೀಗ ಚೀನಾದ ಕೆಂಗಣ್ಣಿಗೆ ಗುರಿಯಾಗಿದ್ದು, ಭಾರತ ದಲೈಲಾಮಾರನ್ನು ಬ್ಲಾಕ್ ಮೇಲ್ ನಡೆಯಾಗಿ ತನ್ನ ವಿರುದ್ಧ ಬಳಸಿಕೊಳ್ಳಬಾರದು ಎಂದು ಎಚ್ಚರಿಸಿದೆ.