

ನವದೆಹಲಿ: ಪಾಕಿಸ್ತಾನ ಮೂಲದ ಹ್ಯಾಕರ್ ಗಳು ತಿರುವನಂತಪುರಂ ವಿಮಾನ ನಿಲ್ದಾಣದ ವೆಬ್ ಸೈಟ್ ಹ್ಯಾಕ್ ಮಾಡಿದ ಬೆನ್ನಲ್ಲೇ ಕೇರಳ ಮೂಲದ ಕೆಲ ಹ್ಯಾಕರ್ ಗಳು ಪಾಕಿಸ್ತಾನದ ವಿಮಾನ ನಿಲ್ದಾಣವೊಂದರ ವೆಬ್ ಸೈಟಿಗೆ ಕನ್ನಹಾಕಿದ್ದಾರೆ ಎಂದು ತಿಳಿದುಬಂದಿದೆ.
ಮಲಯಾಳಿ ದೈನಿಕವೊಂದು ವರದಿ ಮಾಡಿರುವಂತೆ ಕೇರಳ ಮೂಲದ ಸೈಬರ್ ಸೋಲ್ಡ್ಜರ್ಸ್ ತಂಡ ಪಾಕಿಸ್ತಾನ ಪಂಜಾಬ್ ನ ಸಿಯಾಲ್ ಕೋಟ್ ವಿಮಾನ ನಿಲ್ದಾಣದ ವೆಬ್ ಸೈಟಿಗೆ ಕನ್ನ ಹಾಕಿ ಮಾಹಿತಿಗಳನ್ನು ಕದ್ದಿದ್ದಾರೆ ಎಂದು ಹೇಳಲಾಗಿದೆ. ಕೇವಲ ವೆಬ್ ಸೈಟ್ ಹ್ಯಾಕ್ ಮಾಡಿರುವುದಷ್ಟೇ ಅಲ್ಲದೇ ನೀವು ಕೂಡ ವೆಬ್ ಸೈಟಿಗೆ ಲಾಗಿನ್ ಆಗಿ ಎಂದು ಹ್ಯಾಕರ್ ಗಳು ವೀಕ್ಷಕರಿಗೆ ಆಹ್ವಾನ ನೀಡಿದ್ದಾರೆ. ಸಿಯಾಲ್ ಕೋಟ್ ವಿಮಾನ ನಿಲ್ದಾಣದ ವೆಬ್ ಸೈಟಿನ ಪಾಸ್ವರ್ಡ್ ಅನ್ನು ಮಲ್ಯಾಳೀಸ್ (malayalees)ಗೆ ಬದಲಾಯಿಸಿದ್ದಾರೆ.
ಇತ್ತೀಚೆಗಷ್ಟೇ ಪಾಕಿಸ್ತಾನ ಮೂಲದ ಕೆಲ ಹ್ಯಾಕರ್ ಗಳು ತಿರುವನಂತಪುರಂನ ವಿಮಾನ ನಿಲ್ದಾಣದ ವೆಬ್ ಸೈಟ್ ಅನ್ನು ಹ್ಯಾಕ್ ಮಾಡಿ ಅದರೊಳಗಿದ್ದ ಮಹತ್ವದ ದಾಖಲೆಗಳನ್ನು ಕದ್ದಿದ್ದರು. ಈ ದಾಳಿಗೆ ಪ್ರತಿಯಾಗಿ ತಾವು ಪಾಕಿಸ್ತಾನದ ಸಿಯಾಲ್ ಕೋಟ್ ವಿಮಾನ ನಿಲ್ದಾಣದ ವೆಬ್ ಸೈಟ್ ಮೇಲೆ ದಾಳಿ ನಡೆಸಿರುವುದಾಗಿ ಹ್ಯಾಕರ್ ಗಳು ಹೇಳಿದ್ದಾರೆ.