ಬೆಂಗಳೂರಲ್ಲಿ ವಿದೇಶಿ ಯುವತಿಯ ಬಟ್ಟೆ ಬಿಚ್ಚಿ ಮನಸೋ ಇಚ್ಛೆ ಥಳಿತ

ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ಮಾನವೀಯತೆ ಮರೆತ ಬೆಂಗಳೂರಿಗರು ವಿದೇಶಿ ಮಹಿಳೆಯ ಬಟ್ಟೆ ಬಿಚ್ಚಿ, ಮನಸೋ ಇಚ್ಛೆ ಥಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ...
ಸುಟ್ಟು ಹೋಗಿರುವ ಟಾಂಜೇನಿಯನ್ ಯುವತಿಯ ಕಾರು
ಸುಟ್ಟು ಹೋಗಿರುವ ಟಾಂಜೇನಿಯನ್ ಯುವತಿಯ ಕಾರು
Updated on: 

ಬೆಂಗಳೂರು: ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ಮಾನವೀಯತೆ ಮರೆತ ಬೆಂಗಳೂರಿಗರು ವಿದೇಶಿ ಮಹಿಳೆಯ ಬಟ್ಟೆ ಬಿಚ್ಚಿ, ಮನಸೋ ಇಚ್ಛೆ ಥಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೂಲತಃ ಆಫ್ರಿಕಾದ ಟಾಂಜೇನಿಯಾ ದೇಶದ ಮೂಲದ ಸುಮಾರು 21 ವರ್ಷ ವಯಸ್ಸಿನ ಯುವತಿ ಮೇಲೆ ಬೆಂಗಳೂರಿನ ಹೆಸರುಘಟ್ಟ ಸಮೀಪ ಸಾರ್ವಜನಿಕರು ತಮ್ಮ ಆಕ್ರೋಶ  ವ್ಯಕ್ತಪಡಿಸಿದ್ದು, ಆಕೆಯ ಬಟ್ಟೆ ಬಿಚ್ಚಿ ಸಾರ್ವಜನಿಕವಾಗಿಯೇ ಮನಸೋ ಇಚ್ಛೆ ಥಳಿಸಿದ್ದಾರೆ. ಆಕೆಯ ರಕ್ಷಣೆಗೆ ಬಂದ ಆಕೆಯ ಸ್ನೇಹಿತರನ್ನೂ ಆಕ್ರೋಶಿತ ಸಾರ್ವಜನಿಕರು ತೀವ್ರವಾಗಿ ಥಳಿಸಿದ್ದಾರೆ.  ಅವರಿಂದ ತಪ್ಪಿಸಿಕೊಳ್ಳಲು ಯುವತಿ ನಿಧಾನವಾಗಿ ಚಲಿಸುತ್ತಿದ್ದ ಬಿಎಂಟಿಸಿ ಬಸ್ ಹತ್ತಲು ಪ್ರಯತ್ನಿಸಿದಳಾದರೂ, ಬಸ್ ನಲ್ಲಿದ್ದ ಪ್ರಯಾಣಿಕರೂ ಕೂಡ ಆಕೆಯನ್ನು ಬಸ್ ನಿಂದ ಹೊರದಬ್ಬುವ  ಮೂಲಕ ಅಮಾನವೀಯತೆ ಪ್ರದರ್ಶಿಸಿದ್ದಾರೆ.

ಇನ್ನೂ ಆಘಾತಕಾರಿ ವಿಚಾರವೆಂದರೆ ಸಾರ್ವಜನಿಕವಾಗಿ ಮತ್ತು ರಸ್ತೆ ಮಧ್ಯೆಯಲ್ಲಿಯೇ ಒಂದಷ್ಟು ಗುಂಪು ಯುವತಿ ಮೇಲೆ ಹಲ್ಲೆ ಮಾಡುತ್ತಿದ್ದರೆ, ಅಲ್ಲೇ ಸ್ಥಳದಲ್ಲಿದ್ದ ಪೊಲೀಸರು ಮೂಕ  ಪ್ರೇಕ್ಷಕರಾಗಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ ಘಟನೆ ಬಳಿಕ ಯುವತಿ ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ನಿಜವಾದ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸುವಂತೆ ಸೂಚನೆ  ನೀಡಿ ತಮ್ಮ ಬೇಜವಾಬ್ದಾರಿ ಪ್ರದರ್ಶಿಸಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ವಿವರ
ಮೂಲತಃ ಟಾಂಜೇನಿಯಾ ದೇಶಕ್ಕೆ ಸೇರಿದ 21 ವರ್ಷದ ಯುವತಿ ಬೆಂಗಳೂರಿನ ಆಚಾರ್ಯ ಕಾಲೇಜಿನಲ್ಲಿ  ಬಿಬಿಎ ಪದವಿಯ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದು, ಕಳೆದ ಭಾನುವಾರ  ರಾತ್ರಿ ಸುಂದರೇಶನ್ ಎಂಬ ತಮ್ಮ ಕಾರು ಚಾಲಕನೊಂದಿಗೆ ಹೆಸರುಘಟ್ಟದತ್ತ ಪ್ರಯಾಣಿಸಿದ್ದಾರೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಓರ್ವ ಪಾದಚಾರಿ ಮಹಿಳೆಗೆ ಢಿಕ್ಕಿ ಹೊಡೆದಿದೆ.  ಘಟನೆಯಲ್ಲಿ ಸುಮಾರು 35 ವರ್ಷದ ಸ್ಥಳೀಯ ಮಹಿಳೆ ಮೃತಪಟ್ಟಿದ್ದು, ಕಾರು ಚಾಲಕ ಸುಂದರೇಶನ್ ಕೂಡಲೇ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಅಪಘಾತವಾಗುತ್ತಿದ್ದಂತೆಯೇ ಓಡಿಬಂದ ಸಾರ್ವಜನಿಕರು ಕಾರಿನ ಹಿಂಬದಿಯಲ್ಲಿದ್ದ ಯುವತಿಯನ್ನು ಹೊರಗೆಳೆದು ಮನಸೋ ಇಚ್ಚೆ ಥಳಿಸಿದ್ದಾರೆ. ಅಲ್ಲದೆ ಕೆಲ ದುಷ್ಕರ್ಮಿಗಳು ಆಕೆಯ ಬಟ್ಟೆಯನ್ನು ಹರಿದು ಹಾಕಿದ್ದು, ಈ ವೇಳೆ ಸ್ಥಳೀಯ  ಯುವಕನೊಬ್ಬ ಟೀ-ಶರ್ಟ್ ನೀಡಲು ಮುದಾದಾಗ ಆತನಿಗೂ ಮನಸೋ ಇಚ್ಚೆ ಥಳಿಸಿದ್ದಾರೆ.

ಕೆಲವೇ ಕ್ಷಣಗಳಲ್ಲಿ ಈ ವಿಚಾರ ವಿದ್ಯಾರ್ಥಿನಿಯ ಆಫ್ರಿಕಾ ಮೂಲದ ಸ್ನೇಹಿತರಿಗೆ ತಿಳಿದಿದ್ದು, ಘಟನಾ ಸ್ಥಳಕ್ಕೆ ಧಾವಿಸಿದ ಆಕೆಯ ಐದು ಸ್ನೇಹಿತರು ರಕ್ಷಣೆಗೆ ಮುದಾಗಿದ್ದಾರೆ. ಆದರೆ ಆಕ್ರೋಶಿತ  ಸಾರ್ವಜನಿಕರು ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಈ ನಡುವೆ ಆಕ್ರೋಶಿತ ಸಾರ್ವಜನಿಕರಿಂದ ತಪ್ಪಿಸಿಕೊಳ್ಳಲು ಯುವತಿ ಬಿಎಂಟಿಸಿ ಬಸ್ ಹತ್ತಲು ಪ್ರಯತ್ನಿಸಿದಾಗ ಬಸ್ ನಲ್ಲಿದ್ದ  ಪ್ರಯಾಣಿಕರು ಆಕೆಯನ್ನು ಹೊರದಬ್ಬಿದ್ದಾರೆ. ಬಳಿಕ ಆಕ್ರೋಶಿತ ಸಾರ್ವಜನಿಕರು ಅಪಘಾತಕ್ಕೆ ಕಾರಣವಾದ ಯುವತಿಯ ಕಾರು ಮತ್ತು ಆಕೆಯನ್ನು ರಕ್ಷಿಸಲು ಬಂದ ಸ್ನೇಹಿತರ ಕಾರಿಗೆ ಬೆಂಕಿ  ಹಚ್ಚಿದ್ದಾರೆ.

ಘಟನೆಯ ಬಳಿಕ ಯುವತಿ ಮತ್ತು ಆಕೆಯ ಸ್ನೇಹಿತರು ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದು, ಠಾಣೆಯಲ್ಲಿದ್ದ ಪೊಲೀಸರು ಇವರ ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ. ಅಲ್ಲದೆ  ಅಪಘಾತಕ್ಕೆ ಕಾರಣವಾದ ಡ್ರೈವರ್ ನನ್ನು ಒಪ್ಪಿಸುವಂತೆಯೂ ಆ ಬಳಿಕ ದೂರು ಸ್ವೀಕರಿಸುವುದಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಹಲ್ಲೆಗೊಳಗಾದ ವಿದ್ಯಾರ್ಥಿಗಳು "ಆಲ್  ಆಫ್ರಿಕಾ ಸ್ಟೂಡೆಂಟ್ಸ್ ಇನ್ ಬೆಂಗಳೂರು" ಸಂಸ್ಥೆಯ ನೆರವಿನೊಂದಿಗೆ ಆಫ್ರಿಕಾ ರಾಯಭಾರ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com