ನವದೆಹಲಿ: ನಗದುರಹಿತ ಬ್ಯಾಂಕಿಂಗ್ ವ್ಯವಹಾರ ನಡೆಸುವಂತೆ ಕರೆ ಕೊಟ್ಟಿರುವ ಪ್ರಧಾನಮಂತ್ರಿಯವರ ಮಾತಿಗೆ ಬದ್ಧರಾಗಿರುವ ಅವರ ಕಾರ್ಯಾಲಯ ತಮ್ಮ ಸಿಬ್ಬಂದಿಗಳಿಗೆ ಸೋಮವಾರ ಮೊಬೈಲ್ ಬ್ಯಾಂಕಿಂಗ್ ಬಗ್ಗೆ ಕಾರ್ಯಾಗಾರ ನಡೆಸಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
"ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಶರ್ಮ, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಪಿ ಕೆ ಮಿಶ್ರಾ ಅವರುಗಳನ್ನು ಒಳಗೊಂಡಂತೆ ಲೋಕ ಕಲ್ಯಾಣ ಮಾರ್ಗದಲ್ಲಿ ಇರುವ ಪ್ರಧಾನ ಮಂತ್ರಿಯವರ ಕಾರ್ಯಾಲಯದಲ್ಲಿ ಅಧಿಕಾರಿಗಳಿಗೆ ಕಾರ್ಯಾಗಾರ ಆಯೋಜಿಸಲಾಯಿತು" ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
"ಯುಪಿಐ, ಇ-ವಾಲೆಟ್ ಗಳ ಮೂಲಕ ದಿನನಿತ್ಯದ ವ್ಯವಹಾರಗಳನ್ನು ಮೊಬೈಲ್ ಬ್ಯಾಂಕಿಂಗ್ ಮೂಲಕ ನಡೆಸುವ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಾಗಾರ ನಡೆಸಲಾಯಿತು" ಎಂದು ಹೇಳಿಕೆ ತಿಳಿಸಿದೆ.
ಸಿಬ್ಬಂದಿಗಳ ಮೊಬೈಲ್ ಫೋನ್ ಗಳಲ್ಲಿ ಅಗತ್ಯವಾದ ಆಪ್ ಗಳನ್ನು ಇಳಿಸಿಕೊಂಡು ನಗದುರಹಿತ ವ್ಯವಹಾರಗಳನ್ನು ನಡೆಸುವುದರ ಬಗ್ಗೆ ಅಧಿಕಾರಿಗಳಿಗೆ ತಿಳಿಹೇಳಲಾಯಿತು ಎಂದು ಕೂಡ ಹೇಳಿಕೆ ತಿಳಿಸಿದೆ.
ಪ್ರತಿ ತಿಂಗಳು ಪ್ರಧಾನಮಂತ್ರಿ ರೇಡಿಯೋ ಮೂಲಕ ನೀಡುವ 'ಮನ್ ಕಿ ಬಾತ್' ಭಾಷಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಭಾರತವನ್ನು ನಗದುರಹಿತ ಆರ್ಥಿಕ ವ್ಯವಸ್ಥೆಯನ್ನಾಗಿ ಪರಿವರ್ತಿಸುವ ಕರೆ ನೀಡಿದ್ದಲ್ಲದೆ ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಬಳಸುವಂತೆ ಕರೆ ನೀಡಿದ್ದರು.
ಈ ಸಂದರ್ಭದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಮೈಗವ್ ಅಧಿಕಾರಿಗಳು ಕೂಡ ಹಾಜರಿದ್ದರು.