ಸೆ.30ರ ಆದೇಶ ಮಾರ್ಪಾಡಿಗೆ "ಸುಪ್ರೀಂ"ಗೆ ಅರ್ಜಿ; ಮಂಡಳಿ ರಚನೆ ಸಂಸತ್ತಿನ ಜವಾಬ್ದಾರಿ ಎಂದ ಕೇಂದ್ರ ಸರ್ಕಾರ

ಕಾವೇರಿ ವಿವಾದ ಸಂಬಂಧ ಈ ಹಿಂದೆ ಸೆಪ್ಟೆಂಬರ್ 30ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಮಾರ್ಪಡಿಸುವಂತೆ ಕೋರಿ ಸ್ವತಃ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ ಎಂದು ತಿಳಿದುಬಂದಿದೆ.
ಸುಪ್ರೀಂ ಕೋರ್ಟ್ ಮತ್ತು ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
ಸುಪ್ರೀಂ ಕೋರ್ಟ್ ಮತ್ತು ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
Updated on: 

ನವದೆಹಲಿ: ಕಾವೇರಿ ವಿವಾದ ಸಂಬಂಧ ಅಂತಿಮ ಹಂತದಲ್ಲಿ ಕರ್ನಾಟಕಕ್ಕೆ ಕೆಲ ಆಶಾದಾಯಕ ಬೆಳವಣಿಗೆಗಳು ನಡೆಯುತ್ತಿದ್ದು, ಕೊನೆಗೂ ಕೇಂದ್ರ ಸರ್ಕಾರ ಕರ್ನಾಟಕದ ನೆರವಿಗೆ  ಧಾವಿಸಿದಂತಿದೆ. ಈ ಹಿಂದೆ ಸೆಪ್ಟೆಂಬರ್ 30ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಮಾರ್ಪಡಿಸುವಂತೆ ಕೋರಿ ಸ್ವತಃ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ ಎಂದು ತಿಳಿದುಬಂದಿದೆ.

ಈ ಹಿಂದಿನ ಅಂದರೆ ಸೆಪ್ಟೆಂಬರ್ 30ರಂದು ನಡೆದ ವಿಚಾರಣೆಯಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚಿಸುವುದಾಗಿ ಹೇಳಿದ್ದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರೇ ಇಂದು ಕಾವೇರಿ  ನಿರ್ವಹಣಾ ಮಂಡಳಿ ರಚನೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಅರ್ಜಿಯಲ್ಲಿ ಕೆಲ ಅಂಶಗಳನ್ನು ಉಲ್ಲೇಖ ಮಾಡಿರುವ ಅವರು, ಸುಪ್ರೀಂ ಕೋರ್ಟ್ ಯಾವುದೇ  ಕಾರಣಕ್ಕೂ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಆದೇಶಿಸುವಂತಿಲ್ಲ. ಮಂಡಳಿ ರಚನೆ ಏನಿದ್ದರೂ ಸಂಸತ್ತಿನ ಜವಾಬ್ದಾರಿಯಾಗಿದ್ದು, ಉಭಯ ಸದನಗಳ ಅನುಮೋದನೆ ಪಡೆದು  ಮಂಡಳಿ ರಚಿಸಬೇಕಿದೆ ಎಂದು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿಂದೆ ಸೆಪ್ಟೆಬಂರ್ 30ರಂದು ನಡೆದ ವಿಚಾರಣೆಯಲ್ಲಿ ಕರ್ನಾಟಕ ರಾಷ್ಟ್ರೀಯ ಜಲನೀತಿ-2012 ಅನ್ನು ಉಲ್ಲಂಘಿಸಿದೆ. ಹೀಗಾಗಿ ಕಾವೇರಿ ನಿರ್ವಹಣಾ ಮಂಡಳಿ ರಚನೆ ಅವಶ್ಯಕತೆ ಇದ್ದು, 3  ದಿನದಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಾಧ್ಯವೇ ಎಂದು ಕೇಳಿದ್ದ ಸುಪ್ರೀಂ ಕೋರ್ಟ್ ಪ್ರಶ್ನೆಗೆ ಉತ್ತರಿಸಿದ್ದ ಮುಕುಲ್ ರೋಹ್ಟಗಿ ಅವರು, ಕಾವೇರಿ ನದಿ ನೀರಿನ ಸದಸ್ಯ ರಾಜ್ಯಗಳಾದ  ಕರ್ನಾಟಕ, ತಮಿಳುನಾಡು, ಪುದುಚೇರಿ ಹಾಗೂ ಕೇರಳ ರಾಜ್ಯಗಳು ಸದಸ್ಯರ ಹೆಸರನ್ನು ಸೂಚಿಸಿದರೆ ಖಂಡಿತಾ ಮಂಡಳಿ ರಚಿಸುವುದಾಗಿ ಹೇಳಿದ್ದರು. ಅಲ್ಲದೇ ಅಕ್ಟೋಬರ್ 4 ರಂದು ಮಂಡಳಿ  ಸದ್ಯಸರ ಪಟ್ಟಿ ಕೂಡ ನೀಡುವುದಾಗಿಯೂ ಮತ್ತು ಅಕ್ಟೋಬರ್ 6ರಂದು ಜಲಾಶಯಗಳ ಸ್ಥಿತಿಗತಿ ವರದಿ ನೀಡುವುದಾಗಿ ಹೇಳಿದ್ದರು.

ಇದು ಕರ್ನಾಟಕದ ಕಾವೇರಿ ಭವಿಷ್ಯಕ್ಕೆ ಶಾಶ್ವತ ಕುತ್ತು ಅಥವಾ ಮರಣ ಶಾಸನವಾಗಲಿದೆ ಎಂದೇ ಹೇಳಲಾಗುತ್ತಿತ್ತು. ಇದಕ್ಕೆ ಕರ್ನಾಟಕದ ವತಿಯಿಂದ ತೀವ್ರ ವಿರೋಧ ಕೂಡ ವ್ಯಕ್ತವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com