

ಮುಂಬಯಿ: ಮದ್ಯದ ದೊರೆ ವಿಜಯ್ ಮಲ್ಯಗೆ ಸೇರಿದ ಗೋವಾದಲ್ಲಿರುವ ಕಿಂಗ್‌ಫಿಶರ್ ವಿಲ್ಲಾವನ್ನ ಇಂದು ಹರಾಜು ಹಾಕಲಾಗುತ್ತಿದೆ.
ಸಾವಿರಾರು ಕೋಟಿ ರೂ. ಸಾಲ ಮಾಡಿ ವಿದೇಶಕ್ಕೆ ಪಲಾಯನ ಮಾಡಿರುವ ಉದ್ಯಮಿ ವಿಜಯ್ ಮಲ್ಯ ಅವರಿಗೆ ಸೇರಿದ ಐಷಾರಾಮಿ ಕಿಂಗ್ ಫಿಶರ್ ವಿಲ್ಲಾವನ್ನು ಸ್ಟೇಟ್ ಬ್ಯಾಂಕ್ ನೇತೃತ್ವದ 17 ಬ್ಯಾಂಕ್‌ಗಳ ಒಕ್ಕೂಟ ಮಾರಾಟಕ್ಕೆ ಇಟ್ಟಿದ್ದು, 85.3ಕೋಟಿ ರೂ. ಮೀಸಲು ಬೆಲೆಯನ್ನು ನಿಗದಿ ಪಡಿಸಿವೆ.
12,350 ಚದರ ಮೀಟರ್ ವಿಸ್ತೀರ್ಣದ ಬಂಗಲೆಯನ್ನು ಸುದೀರ್ಘ ಕಾನೂನು ಸಮರ ಬಳಿಕ ಬ್ಯಾಂಕ್‌ಗಳು ಯುನೈಟೆಡ್ ಬ್ರಿವರೀಸ್ ಹೋಲ್ಡಿಂಗ್ (ಯುಬಿಎಚ್‌ಎಲ್)ನಿಂದ ಕಳೆದ ಮೇ ತಿಂಗಳಲ್ಲಿ ತಮ್ಮ ತೆಕ್ಕೆಗೆ ಪಡೆದುಕೊಂಡಿದ್ದವು. ಈ ಸ್ವತ್ತನ್ನು ಮಾರಾಟ ಮಾಡಿ ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಸಾಲವನ್ನು ತುಂಬುವ ಇರಾದೆಯನ್ನು ಬ್ಯಾಂಕ್‌ಗಳು ಹೊಂದಿವೆ.
17 ಬ್ಯಾಂಕ್ ಗಳಿಂದ ಕಿಂಗ್ ಫಿಶರ್ ಏರ್ ಲೈನ್ಸ್ 9 ಸಾವಿರ ಕೋಟಿ ರು ಸಾಲ ಪಡೆದು, ಈ ವರ್ಷದ ಮಾರ್ಚ್ ತಿಂಗಳಲ್ಲಿ ವಿಜಯ್ ಮಲ್ಯ ದೇಶ ಬಿಟ್ಟು ಪರಾರಿಯಾಗಿ ಲಂಡನ್ ನಲ್ಲಿ ನೆಲೆಸಿದ್ದಾರೆ.