ಕಾಂಗ್ರೆಸ್ ಆಡಳಿತಕ್ಕಿಂತಲೂ ಪರಿಸ್ಥಿತಿ ಹದಗೆಟ್ಟಿದೆ; ಪ್ರಧಾನಿ ಮೇಲೆ ಶಿವಸೇನೆ ವಾಗ್ದಾಳಿ

ಉರಿ ಭಯೋತ್ಪಾದನಾ ದಾಳಿ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ ಮೈತ್ರಿ ಪಕ್ಷ ಶಿವಸೇನೆ, ಹಿಂದಿನ ಕಾಂಗ್ರೆಸ್ ಆಡಳಿತಕ್ಕಿಂತಲೂ ಪರಿಸ್ಥಿತಿ ಹದಗೆಟ್ಟಿದೆ
ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ
ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ
Updated on: 
ಮುಂಬೈ: ಉರಿ ಭಯೋತ್ಪಾದನಾ ದಾಳಿ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ ಮೈತ್ರಿ ಪಕ್ಷ ಶಿವಸೇನೆ, ಹಿಂದಿನ ಕಾಂಗ್ರೆಸ್ ಆಡಳಿತಕ್ಕಿಂತಲೂ ಪರಿಸ್ಥಿತಿ ಹದಗೆಟ್ಟಿದೆ ಮತ್ತು ಈಗಲಾದರೂ ಪಾಕಿಸ್ತಾನದ ಮೇಲೆ ದಾಳಿ ಮಾಡಿ ಭಯೋತ್ಪಾದಕರನ್ನು ಕೊನೆಗಾಣಿಸದಿದ್ದರೆ ಜಾಗತಿಕ ಇಮೇಜ್ ಕಟ್ಟಿಕೊಳ್ಳುವ ನಿಮ್ಮ ಕೆಲಸ ವಿಫಲವಾಗಲಿದೆ ಎಂದಿದೆ. 
ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರವನ್ನು ವಿಸರ್ಜಿಸಿ, ರಾಷ್ಟ್ರಪತಿ ಆಡಳಿತ ಹೇರಿ ಭಯೋತ್ಪಾದಕರು ಮತ್ತು ಪಾಕಿಸ್ತಾನ ಪರ ಇರುವವರಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಕೂಡ ಸೇನೆ ಆಗ್ರಹಿಸಿದೆ. ಪಾಕಿಸ್ತಾನ ಮುಕ್ತವಾಗಿ ಭಾರತದ ಮೇಲೆ ಯುದ್ಧ ಸಾರಿದೆ ಮತ್ತು ಈಗ ಈ ದಾಳಿಯಲ್ಲಿ ಪಾಕಿಸ್ತಾನದ ಕೈವಾಡಕ್ಕಾಗಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಾ ಕೂತರೆ ಜಾಗತಿಕವಾಗಿ ಇದು ಯಾವುದೇ ಪ್ರತಿಫಲ ನೀಡುವುದಿಲ್ಲ ಎಂದು ಕೂಡ ಸೇನೆ ಹೇಳಿದೆ. 
"ಕಾಂಗ್ರೆಸ್ ಆಡಳಿತಕ್ಕಿಂತಲೂ ಪರಿಸ್ಥಿತಿ ಬಿಗಡಾಯಿಸಿದೆ ಎಂದು ಒಪ್ಪಿಕೊಳ್ಳಲೇಬೇಕಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನಿ ಧ್ವಜಗಳನ್ನು ಹಾರಿಸುತ್ತಿರುವಾಗ, ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗುತ್ತಿರುವಾಗ, ಕೇಂದ್ರ ರಾಜ್ಯ ಸರ್ಕಾರವನ್ನು ವಿಸರ್ಜಿಸಿ ರಾಷ್ಟ್ರಪತಿ ಆಡಳಿತ ಹೇರಬೇಕು" ಎಂದು ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಹೇಳಿದೆ. 
"ಪಾಕಿಸ್ತಾನ ಈಗ ಭಾರತದ ವಿರುದ್ಧ ಮುಖ್ಯಮುಕ್ತ ಯುದ್ಧ ಸಾರಿದೆ ಮತ್ತು ನಾವು ಎಚ್ಚರಿಕೆ ನೀಡುವುದನ್ನು ಬಿಟ್ಟು ಬೇರೇನೂ ಮಾಡದ ಸ್ಥಿತಿಯಲ್ಲಿದ್ದೇವೆ. ಪಠಾಣ್ ಕೋಟ್ ಭಯೋತ್ಪಾದಕ ದಾಳಿಯ ನಂತರವೂ ಆ ದೇಶದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ" ಎಂದಿರುವ ಪತ್ರಿಕೆ "ಈ ಭಯೋತ್ಪಾದಕ ದಾಳಿಯಲ್ಲಿಯೂ ಪಾಕಿಸ್ತಾನದ ಕೈವಾಡಕ್ಕೆ ಸಾಕ್ಷ್ಯ ಏಕೆ ಹುಡುಕುತ್ತಿದ್ದೀರಿ? ಆ ಸಾಕ್ಷ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಬೆಲೆ ಇಲ್ಲ. ಅಮೆರಿಕಾ ಒಸಾಮಾ ಬಿನ್ ಲ್ಯಾಡೆನ್ ನನ್ನು ಮಟ್ಟ ಹಾಕಿದಂತೆ ನಿಮಗೆ (ಮೋದಿ) ಪಾಕಿಸ್ತಾನವನ್ನು ಹತ್ತಿಕ್ಕಲು ಧೈರ್ಯ ಇಲ್ಲದೆ ಹೋದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಮೇಜ್ ಕಟ್ಟುವ ನಿಮ್ಮ ಪ್ರಕ್ರಿಯೆಯಿಂದ ಯಾವುದೇ ಪ್ರಯೋಜನ ಇಲ್ಲ" ಎಂದು ಕೂಡ ವಾಗ್ದಾಳಿ ಮಾಡಲಾಗಿದೆ. 
ಅನ್ಯ ದೇಶಗಳು ಈ ಪ್ರಕರಣದಲ್ಲಿ ಭಾರತಕ್ಕೆ ಸಹಾಯ ಮಾಡಲು ಮುಂದೆ ಬರುವುದಿಲ್ಲ ಎಂದಿರುವ ಶಿವಸೇನೆ ನಾಲ್ಕು ಭಯೋತ್ಪಾದಕರನ್ನು ಇಟ್ಟುಕೊಂಡು ಪಾಕಿಸ್ತಾನ ಭಾರತಕ್ಕೆ ಈ ಮಟ್ಟದ ಹಾನಿ ಮಾಡಬಹುದ್ದಾದರೆ, ಪಾಕಿಸ್ತಾನದ ಮೇಲೆ ಪ್ರತಿ ದಾಳಿ ಮಾಡಲು ನಮ್ಮ ಭದ್ರತಾ ಪಡೆಗಳನ್ನು ಬಳಸಿಕೊಳ್ಳುವುದಕ್ಕೆ ಏನು ಕಷ್ಟ? ಹುತಾತ್ಮರಾದ ಯೋಧರ ಶವಪೆಟ್ಟಿಗೆಗಳನ್ನು ಅಲಂಕರಿಸಿ, ವಿದೇಶಗಳಿಂದ ವಿಷಾದದ ಸಂದೇಶಗಳನ್ನು ಸ್ವೀಕರಿಸಿಬಿಟ್ಟರೆ ಯಾವುದೇ ಪ್ರಯೋಜನವಿಲ್ಲ. ಅದು ಬಿಟ್ಟು ಭದ್ರತಾ ಪಡೆಗಳೆಗೆ ಜವಾಬ್ದಾರಿ ವಹಿಸಿಕೊಡುವ ಸಮಯ ಬಂದಿದೆ. "ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳು ಸಾಮಾನ್ಯವಾಗಿಬಿಟ್ಟಿವೆ" ಎಂದು ಕೂಡ ಸೇನೆ ಹೇಳಿದೆ. 
ಇದು ಯಾರ ವಿಫಲತೆ? ಮೋದಿ ಅವರು ಇನ್ನೂ ಎಚ್ಚರಿಕೆಗಳನ್ನು ನೀಡುತ್ತಾ ಕೂರಬಹುದು ಆದರೆ ಪಾಕಿಸ್ತಾನ ಅದಕ್ಕೆ ಬೆಲೆ ಕೊಡುವ ಸಮಯ ಬರುವುದು ಯಾವಾಗ? ಎಂದು ಸೇನೆ ಖಾರವಾಗಿ ಪ್ರಶ್ನಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com