

ನವದೆಹಲಿ: ಗಡಿಯಲ್ಲಿ ತನ್ನ ತಂಟೆ ಮುಂದುವರೆಸಿರುವ ಪಾಕಿಸ್ತಾನ ಸೇನೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಭಾರತೀಯ ಯೋಧರ ಮೇಲೆ ಪೈಶಾಚಿಕ ಕೃತ್ಯ ನಡೆಸಿದೆ.
ಗಡಿ ದಾಟಿ ಭಾರತೀಯ ಗಡಿಯೊಳಗೆ ನುಸುಳಿದ ಪಾಕಿಸ್ತಾನ ಸೇನೆಯ ಯೋಧರು ಗುಂಡಿನ ದಾಳಿ ವೇಳೆ ಸಾವನ್ನಪ್ಪಿದ್ದ ಯೋಧರಿಬ್ಬರ ದೇಹವನ್ನು ಛಿದ್ರಗೊಳಿಸಿ ಅಮಾನವೀಯತೆ ಮೆರೆದಿದ್ದಾರೆ. ಇಂದು ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಕೃಷ್ಣಾಘಾಟಿ ಸೆಕ್ಟರ್ ನಲ್ಲಿ ಈ ಘಟನೆ ನಡೆದಿದ್ದು, ಮೃತ ಯೋಧರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.
ಇಂದು ಬೆಳಗ್ಗಿನಿಂದಲೇ ಗಡಿಯಲ್ಲಿ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಮಾರ್ಟರ್, ಶೆಲ್ ಮತ್ತು ಮಷಿನ್ ಗನ್ ಗಳ ಮೂಲಕ ಭಾರತೀಯ ಯೋಧರ ಕ್ಯಾಂಪ್ ಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ಇಬ್ಬರು ಯೋಧರು ಮೃತರಾಗಿದ್ದು, ಮೃತ ಯೋಧರ ಶವಗಳನ್ನು ಪಾಕಿಸ್ತಾನ ಸೇನಾಪಡೆಯ ಯೋಧರು ಛಿದ್ರಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಇದೀಗ ಈ ವಿಚಾರ ಗಡಿಯಲ್ಲಿ ಪ್ರಕ್ಷುಬ್ದವಾತಾವರಣಕ್ಕೆ ಕಾರಣವಾಗಿದ್ದು, ಗಡಿಯುದ್ದಕ್ಕೂ ತೀವ್ರ ಕಟ್ಟೆಚ್ಚರವಹಿಸಲಾಗಿದೆ. ಇನ್ನು ಘಟನೆಯನ್ನು ಕಟು ಶಬ್ದಗಳಿಂದ ಖಂಡಿಸಿರುವ ಭಾರತೀಯ ಸೇನೆ ಪಾಕ್ ಸೈನಿಕರ ಪೈಶಾಚಿಕ ಕೃತ್ಯಕ್ಕೆ ಅವರದೇ ಹಾದಿಯಲ್ಲಿ ತಿರುಗೇಟು ನೀಡುತ್ತೇವೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದೆ.