20 ಸಾವಿರ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿ; ಕೇಂದ್ರದಿಂದ ಮತ್ತೊಂದು ಸೀಮಿತ ದಾಳಿಗೆ ಸಿದ್ಧತೆ!

ಉರಿ ಉಗ್ರ ದಾಳಿ ಮತ್ತು ಗಡಿಯಲ್ಲಿ ಹೆಚ್ಚಾಗುತ್ತಿರುವ ಉಗ್ರಾಂತಕ ನಿವಾರಣೆಗೆ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು, ಸುಮಾರು 20 ಸಾವಿರ ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳನ್ನು ತುರ್ತಾಗಿ ಖರೀದಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ಉರಿ ಉಗ್ರ ದಾಳಿ ಮತ್ತು ಗಡಿಯಲ್ಲಿ ಹೆಚ್ಚಾಗುತ್ತಿರುವ ಉಗ್ರಾಂತಕ ನಿವಾರಣೆಗೆ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು, ಸುಮಾರು 20 ಸಾವಿರ ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳನ್ನು ತುರ್ತಾಗಿ ಖರೀದಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಆಂಗ್ಲ ಪತ್ರಿಕೆಯೊಂದು ಈ ಬಗ್ಗೆ ವರದಿ ಮಾಡಿದ್ದು, ಭಾರತೀಯ ಸೇನೆಯನ್ನು ಸರ್ವಸನ್ನದ್ಧ ಸ್ಥಿತಿಯಲ್ಲಿ ಇಡುವ ಸಲುವಾಗಿ ಹಾಗೂ ಯಾವುದೇ ಕ್ಷಣದಲ್ಲಿ ಯುದ್ಧಕ್ಕೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಸರ್ಕಾರ 20 ಸಾವಿರ ಕೋಟಿ ರುಪಾಯಿ  ವೆಚ್ಚದಲ್ಲಿ ಶಸ್ತ್ರಾಸ್ತ್ರ ಖರೀದಿ ಮಾಡಲು ಕಳೆದ ಮೂರು ತಿಂಗಳಲ್ಲಿ ಒಪ್ಪಂದ ಮಾಡಿಕೊಂಡಿದೆ ಎಂದು ವರದಿ ಮಾಡಿದೆ.

ವರದಿಯಲ್ಲಿ ತಿಳಿಸಿರುವಂತೆ ಈ 20 ಸಾವಿರ ಕೋಟಿ ರು. ಗಳಲ್ಲಿ ಕೇಂದ್ರ ಸರ್ಕಾರ ಅತ್ಯಾಧುನಿಕ ಟ್ಯಾಂಕರ್ ಗಳು, ಪದಾತಿ ದಳ (ಕಾಲ್ದಳದ ಸೈನಿಕರ)ದ ಸೈನಿಕರ ಶಸ್ತ್ರಾಸ್ತ್ರಗಳು ಮತ್ತು ಪರಿಕರಗಳು, ಸಮರ ನೌಕೆಗಳು ಮತ್ತು ಕೆಲ  ಸಮರ ವಿಮಾನಗಳು ಖರೀದಿಸಿದೆ. ಒಂದು ವೇಳೆ ಯುದ್ಧ ಸಂಭವಿಸಿದರೆ ನಿರಂತರ 10 ದಿನಗಳ ಯಾವುದೇ ಶಸ್ತ್ರಾಸ್ತ್ರ ಅಥವಾ ಇತರ ಪೂರಕ ಸೌಲಭ್ಯಗಳ ಕೊರತೆ ಇಲ್ಲದೇ, ಯುದ್ಧ ಮುಂದುವರಿಸಲು ಭಾರತೀಯ ಪಡೆಗಳಿಗೆ  ಸಾಧ್ಯವಾಗುವ ರೀತಿಯಲ್ಲಿ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಹಿಂದೆ ಸೆಪ್ಟೆಂಬರ್ 18ರ ಉರಿ ದಾಳಿಯ ಬಳಿಕ ಕೇಂದ್ರ ಸರ್ಕಾರ ಶಸ್ತ್ರಾಸ್ತ್ರ ಖರೀದಿಸುವ ನಿರ್ಧಾರಕ್ಕೆ ಬಂದಿತ್ತಾದರೂ, ಸೆಪ್ಟೆಂಬರ್ 29ರಂದು ಗಡಿ ನಿಯಂತ್ರಣ ರೇಖೆಯಾಚೆ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ದಾಳಿ  ನಡೆಸಿದ ಭಾರತೀಯ ಸೇನಾ ಪಡೆಯನ್ನು ಸಬಲಗೊಳಿಸುವ ಸಲುವಾಗಿ ಹೊಸದಾಗಿ ಶಸ್ತ್ರಾಸ್ತ್ರ ಖರೀದಿ ಮಾಡಿದೆ. ಉರಿ ದಾಳಿಯ ಬಳಿಕ ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆಯ ಉಪ ಮುಖ್ಯಸ್ಥರಿಗೆ ಹಣಕಾಸು  ಅಧಿಕಾರವನ್ನು ನೀಡಿ ತುರ್ತು ಅಗತ್ಯದ ಶಸ್ತ್ರಾಸ್ತ್ರ ಖರೀದಿಗೆ ಅನುಮತಿ ನೀಡಲಾಗಿತ್ತು.

ಅದರಂತೆ ರಷ್ಯಾ, ಇಸ್ರೇಲ್ ಹಾಗೂ ಫ್ರಾನ್ಸ್‌ನಿಂದ ಶಸ್ತ್ರಾಸ್ತ್ರಗಳನ್ನ ಖರೀದಿಸಲು ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಭಾರತೀಯ ವಾಯುಪಡೆ ಒಟ್ಟು 9,200 ಕೋಟಿ ರುಪಾಯಿ ಮೌಲ್ಯದ 43 ಒಪ್ಪಂದಗಳನ್ನು  ಮಾಡಿಕೊಂಡಿದ್ದು, ಇದರಲ್ಲಿ ಸುಕೋಯ್- 30ಎಂಕೆಐ, ಮೀರಜ್-2000 ಹಾಗೂ ಎಂಐಜಿ-29 ಯುದ್ಧವಿಮಾನಗಳು, ಸಾಗಣೆ ವಿಮಾನಗಳಾದ ಐಎಲ್-76, ಮಿಡ್ ಏರ್ ರಿಫಿಲ್ಲರ್ ಐಎಲ್-78 ಗಳ ಖರೀದಿ ಮತ್ತು ವಾಯು ದಾಳಿ ಎಚ್ಚರಿಕೆ  ನೀಡುವ ಫಾಲ್ಕನ್ ಎಡಬಲ್ಯೂಎಸಿಎಸ್ ವ್ಯವಸ್ಥೆ ಕೂಡ ಸೇರಿವೆ. ಇನ್ನು ಭಾರತೀಯ ಭೂಸೇನೆ 5,800 ಕೋಟಿ ರುಪಾಯಿ ಮೌಲ್ಯದ 10 ಒಪ್ಪಂದಗಳನ್ನು ಮಾಡಿಕೊಂಡಿದ್ದು, ರಷ್ಯಾದ ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆಯೊಂದಿಗೆ  ಟಿ-90ಎಸ್ ಮತ್ತು  ಟಿ-72 ಟ್ಯಾಂಕರ್ ಗಳಿಗೆ ಅಳವಡಿಸುವ 125 ಎಂಎಂಎಪಿಎಫ್ ಡಿಎಸ್ ಕಾಂಕುರ್ಸ್ ಟ್ಯಾಂಕರ್ ನಿರೋಧಕ ಕ್ಷಿಪಣಿ, ಸ್ಮರ್ಚ್ ರಾಕೆಟ್ ಗಳನ್ನು ಖರೀದಿ ಮಾಡಿದೆ.

ಇನ್ನು ನೌಕಾದಳಕ್ಕಾಗಿ ಅತ್ಯಾಧುನಿಕ ಸಮರ ನೌಕೆಗಳು, ಕ್ಷಿಪಣಿಗಳು ಮತ್ತು ಆರ್ಟಿಲರಿ ಗನ್ ಗಳನ್ನು ಖರೀದಿಸಲಾಗಿದೆ.

ಪ್ರಸ್ತುತ ಬಜೆಟ್‌'ನಲ್ಲಿ ರಕ್ಷಣಾ ಕ್ಷೇತ್ರದ ಹಿಂದಿನ ಬೇಡಿಕೆಗಳನ್ನು ಪೂರೈಸಲು ಕೇವಲ 86,488 ಕೋಟಿ ರುಪಾಯಿಗಳನ್ನು ನೀಡಿದ್ದರೂ, ಸೇನೆ ಸಬಲಗೊಳಿಸುವ ಸಲುವಾಗಿ ಈ ತುರ್ತು ಖರೀದಿಗೆ ಅವಕಾಶ ನೀಡಲಾಗಿದೆ.  ಇದರಿಂದಾಗಿ ಸೇನೆ 10 ದಿನಗಳ ಕಾಲ ನಿರಂತರವಾಗಿ ಯಾವುದೇ ಅಡೆತಡೆ ಇಲ್ಲದೇ ಯುದ್ಧದಲ್ಲಿ ಪಾಲ್ಗೊಳ್ಳುವ ಸಾಮರ್ಥ್ಯವನ್ನು ಪಡೆದಿದೆ.

ಇನ್ನು ಈ ಹಿಂದೆ ಭಾರತೀಯ ಸೇನೆ ಸಾಮರ್ಥಕ್ಕೆ ಕುರಿತಂತೆ ವರದಿ ನೀಡಿದ್ದ ಸಿಎಜಿ, ತತ್ ಕ್ಷಣ ಯುದ್ಧವಾದರೆ ಅದನ್ನು ತಡೆದುಕೊಳ್ಳುವ ಸಾಮರ್ಥ್ಯ ಭಾರತಕ್ಕಿಲ್ಲ ಎಂಬ ಸ್ಫೋಟಕ ಮಾಹಿತಿ ನೀಡಿತ್ತು. ಭಾರತೀಯ ಸೇನೆಯ  ಕಾರ್ಯಾಚರಣಾ ನೀತಿಯ ಅನ್ವಯ ಸೇನೆ ಬಳಿ ನಿರಂತರ 30 ದಿನಗಳ ಕಾಲ ಭಾರಿ ಪ್ರಮಾಣದ ದಾಳಿ ಮತ್ತು ನಿರಂತರ 30 ದಿನಗಳ ಕಾಲ ಸಾಮಾನ್ಯ ದಾಳಿ ನಡೆಸುವಷ್ಟು ಶಸ್ತ್ರಾಸ್ತ್ರಗಳ ದಾಸ್ತಾನಿರಬೇಕು. ಇದನ್ನು ಸೇನಾ  ಭಾಷೆಯಲ್ಲಿ ಯುದ್ಧ ಪೋಲು ಮೀಸಲು (war wastage reserves) ಎಂದು ಕರೆಯುತ್ತಾರೆ. ಆದರೆ ಸೇನೆಯ ಹಳಿ ಬಳಿ ಪ್ರಸ್ತುತ ಅಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳಿಲ್ಲ ಎಂದು ಹೇಳಿತ್ತು.

ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ತುರ್ತು ಶಸ್ತ್ರಾಸ್ತ್ರ ಖರೀದಿ ಒಪ್ಪಂದ ಮಾಡಿಕೊಂಡಿದೆ ಎಂದು ಕೆಲವು ತಜ್ಞರು ವಾದಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com