

ನವದೆಹಲಿ: ಬ್ಯಾಂಕ್ ಸಾಲ ವಸೂಲಾತಿ ಪ್ರಕ್ರಿಯೆಯಲ್ಲಿ ಬ್ಯಾಂಕ್ ಗಳಿಗೆ ಹೆಚ್ಚಿನ ಅಧಿಕಾರ ನೀಡಬಲ್ಲ ಬ್ಯಾಂಕ್ ಸಾಲ ವಸೂಲಾತಿ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶುಕ್ರವಾರ ಅಂಕಿತ ಹಾಕಿದ್ದಾರೆ.
ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಆದೇಶ 2017ರಿಂದಾಗಿ ಅನುತ್ಪಾದಕ ಸಾಲಗಳ ವಸೂಲಾತಿ ಪ್ರಕ್ರಿಯೆ ವೇಳೆ ಬ್ಯಾಂಕ್ ಗಳಿಗೆ ಹೆಚ್ಚಿನ ಅಧಿಕಾರ ನೀಡಲಿದ್ದು, ಸಾಲಪಡೆದ ಸಂಸ್ಥೆಗಳು ಸಾಲ ಮರುಪಾವತಿ ಮಾಡದೇ ಇದ್ದ ಪಕ್ಷದಲ್ಲಿ ಸಂಸ್ಥೆಗೆ ಸಂಬಂಧಿಸಿದ ಆಸ್ತಿಗಳ ಮುಟ್ಟುಗೋಲು ಅಥವಾ ಮಾರಾಟ ಮಾಡಿ ಸಾಲ ವಸೂಲಿ ಮಾಡುವ ಆಧಿಕಾರ ನೀಡಲಿದೆ. ಸ್ವೀಕಾರಾರ್ಹವಲ್ಲದ ಅಂಶಗಳ ಅಡಿಯಲ್ಲಿ ಬ್ಯಾಂಕುಗಳು ಸಾಲ ಪಡೆದ ಸಂಸ್ಥೆಗಳ ಆಸ್ತಿಗಳನ್ನು ಮುಟ್ಟುಗೋಲು ಅಥವಾ ಮಾರಾಟ ಮಾಡುವ ಅಧಿಕಾರವನ್ನು ಬ್ಯಾಂಕ್ ಗಳಿಗೆ ನೀಡಲಿದೆ.
ಇನ್ನು ಮರುಪಾವತಿಯಾಗದ ಸಾಲದ ಪ್ರಮಾಣ ದೇಶದಲ್ಲಿ ಸುಮಾರು 6 ಲಕ್ಷ ಕೋಟಿ ದಾಟಿದ್ದು, ಸಾಲ ಮರುಪಾವತಿಗಾಗಿ ಕಠಿಣ ಕಾನೂನು ರಚನೆ ಮಾಡುವಂತೆ ಬ್ಯಾಂಕ್ ಗಳ ಸರ್ಕಾರದ ಮೊರೆ ಹೋಗಿದ್ದವು. ಈ ಹಿನ್ನಲೆಯಲ್ಲಿ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ ಇಂದು ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಆದೇಶ 2017 ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅನುಮೋದನೆ ಪಡೆದಿದೆ. ಆ ಮೂಲಕ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಗೆ ತಿದ್ದುಪಡಿ ತರುವುದಕ್ಕೆ ಈ ಸುಗ್ರೀವಾಜ್ಞೆ ಅವಕಾಶ ಕಲ್ಪಿಸುತ್ತದೆ.