

ಬೇಸಿಗೆ ಬಿಸಿಯನ್ನು ಹೊಡೆದೋಡಿಸಲು ಎಲ್ಲರೂ ತಂಪಿಗೆ ಮೊರೆ ಹೋಗುತ್ತಾರೆ. ಹಾಗಾದರೆ ಬೇಸಿಗೆ ಸಂದರ್ಭ ಬಂದಾಗ ಮನೆಯನ್ನು ಹೇಗಿಟ್ಟುಕೊಳ್ಳಬೇಕು? ಮಲಗುವ ಕೋಣೆ ಸೆಖೆಯಾಗದಂತೆ ಹೇಗೆ ಸಂರಕ್ಷಿಸಿಕೊಳ್ಳಬೇಕು? ಬೇಸಿಗೆ ಬಿಸಿಯ ನಡುವೆ ಸೊಳ್ಳೆಗಳ ಪ್ರತಾಪವನ್ನು ಹೇಗೆ ತಡೆಯಬಹುದು ಎಂಬ ಹಲವಾರು ಪ್ರಶ್ನೆಗಳು ಇಂದು ಪ್ರಖರದಂತೆಯೇ ಕಾಡುತ್ತವೆ.
ಸಾಮಾನ್ಯವಾಗಿ ಈ ಟೈಮಲ್ಲಿ ಮನೆಯಲ್ಲಿರುವ ಫ್ಯಾನ್‌ಗೆ ವಿಶ್ರಾಂತಿಯೇ ಇರುವುದಿಲ್ಲ. ನಿತ್ಯ ಅದು ಭೂಮಿಯಂತೆ ತಿರುಗುತ್ತಲೇ ಇರಬೇಕು. ಇದರೊಟ್ಟಿಗೆ ತಂಪಾದ ಪಾನೀಯ ಕುಡಿದು ದೇಹವನ್ನು ತಣ್ಣಗಾಗಿಸಲು ಫ್ರಿಡ್ಜ್ ಕೂಡ ಯಾವಾಗಲೂ ಆನ್ ಆಗಿರಬೇಕು. ಆದರೆ, ಸೆಖೆಯನ್ನು ತಡೆಯಲು ಸಾಧ್ಯವಾಗದಿದ್ದಾಗ ಇನ್ನೇನು ಮಾಡಲು ಸಾಧ್ಯ? ಬಂದದ್ದನ್ನು ಅನುಭವಿಸುವುದೊಂದೇ ದಾರಿ. ಶ್ರೀಮಂತರೋ ಕೋಣೆಗಳಲ್ಲಿ ಎಸಿ ಅಳವಡಿಸಿ ತಂಪಾಗಿರುತ್ತಾರೆ. ಬಡವರು ಬಿಸಿಲು ಬಡಿಸಿಕೊಳ್ಳಲೇಬೇಕು. ಹೀಗಾಗಿ ದೇಹದ ಜೊತೆಗೆ ಮನಸ್ಸನ್ನೂ, ಮನೆಯೊಂದಿಗೆ ಮಲಗುವ ಕೋಣೆಯನ್ನೂ ಬೇಸಿಗೆಯಿಂದ ರಕ್ಷಿಸಿಕೊಳ್ಳಲು ಏನೆಲ್ಲ ಮಾಡಬಹುದು?
ಇಲ್ಲಿವೆ ಕೆಲವು ಉಪಾಯಗಳು..
* ಮನೆಯ ಹೊರಗೆ ಹಾಗೂ ಚಾವಣಿಗೆ ಬಿಳಿ ಬಣ್ಣವನ್ನು ಬಳಿಯಿರಿ. ಬಿಳಿ ಬಣ್ಣ ಸೂರ್ಯನ ತಾಪವನ್ನು ಹೀರುವುದಿಲ್ಲ. ಕಪ್ಪು ಬಣ್ಣವಾದರೆ ಅವು ಸೂರ್ಯನ ಕಿರಣಗಳನ್ನು ಹೀರಿ ಮನೆಯೊಳಗೆ ಮತ್ತಷ್ಟು ಬಿಸಿ ತಾಪವನ್ನು ಒದಗಿಸುತ್ತದೆ.
* ಹೆಂಚಿನ ಮನೆಗಳಿದ್ದರೆ, ಹೆಂಚಿನ ಕೆಳಗೆ ಮರದ ಚಾವಣಿಯನ್ನು ಮೊದಲು ಅಳವಡಿಸಿರಿ. ನಂತರ ಹೆಂಚನ್ನು ಆ ಮರದ ಚಾವಣಿ ಮೇಲೆ ಹಾಕಿ. ಹೆಂಚು ಹೆಚ್ಚು ಶಾಖವನ್ನು ಹೀರುತ್ತದೆ. ಆದರೆ, ಮರ ಅದನ್ನು ತಡೆಯುತ್ತದೆ. ಹೀಗಾಗಿ ಮಲಗುವ ಕೋಣೆಗೆ ಇದು ಹೆಚ್ಚು ಸೂಕ್ತ.
* ಚಾವಣಿ ಮಾತ್ರವಲ್ಲ. ಕೋಣೆಯ ಆಜುಬಾಜು ಕೂಡ ಮರದ ನಿರ್ಮಾಣವನ್ನು ಅಳವಡಿಸಿದರೆ ರಾತ್ರಿ ಹೊತ್ತು ತಂಪಿನ ಅನುಭವವಾಗುತ್ತದೆ. ಜಾಸ್ತಿ ಸೆಖೆ ಆಗದು. ನೆಮ್ಮದಿಯಿಂದ ನಿದ್ರೆ ಮಾಡಬಹುದು.
* ಮಲಗುವ ಕೋಣೆಯಲ್ಲಿ ಕಿಟಕಿಗಳಿದ್ದರೆ, ಕಿಟಕಿಗಳಿಗೂ ಸೊಳ್ಳೆ ಪರದೆಯನ್ನು ಹಾಕಿ!
* ಫ್ಯಾನ್‌ಗಿಂತ ಕಿಟಕಿಯನ್ನು ತೆರೆದಿಡಿ. ಕಿಟಕಿಗೆ ತೆಳುವಾದ, ಗಾಳಿ ಸೂಸುವ ಒದ್ದೆಯಾದ ಬಟ್ಟೆ ಕಟ್ಟಿ. ಇದರಿಂದ ತಂಪಾದ ಗಾಳಿಯೂ ಬೀಸುತ್ತದೆ.
* ಕಿಟಕಿ ಇಲ್ಲದಿದ್ದಲ್ಲಿ ಫ್ಯಾನ್‌ಗೆ ಒದ್ದೆಯಾದ (ವಿದ್ಯುತ್ ಬಗ್ಗೆ ಎಚ್ಚರವಹಿಸಿ) ಬಟ್ಟೆ ಕಟ್ಟಿ. ಅದು ಕೂಡ ತಂಪು ಸೂಸುತ್ತದೆ.
* ಸಾಧ್ಯವಾದಲ್ಲಿ ಬೆಡ್‌ರೂಂನಲ್ಲಿ ನೇತಾಡುವ (ಜೋಕಾಲಿಯಂತೆ) ಮಂಚ ಹಾಕಿ. ಇದರಿಂದ ನಿಮಗೆ ಗಾಳಿ ಸೋಕಿ, ಸೆಖೆ ದೂರವಾಗುತ್ತದೆ.
* ಮನೆಯ ಹೊರಗೆ ಸಾಧ್ಯವಾದರೆ ಸಸಿಗಳನ್ನು, ಹೂವಿನ ಗಿಡಗಳನ್ನು ನೆಡಿ. ಅದು ನಿಮ್ಮ ರೂಮಿನ ಹತ್ತಿರದಲ್ಲೇ ಇದ್ದಲ್ಲಿ ತಂಪಾದ ಗಾಳಿ ಸೂಸುತ್ತದೆ.
-ಬ್ರಹ್ಮಾನಂದ ಎನ್. ಹಡಗಲಿ