

ಮೊದಲೆಲ್ಲಾ ಮನೆ ಎಂದರೆ 'ವಾಸಿಸಲು ಮಾತ್ರ' ಎಂಬ ಭಾವನೆ ಇತ್ತು. ಬರುಬರುತ್ತಾ ಅದು ಮಾಲೀಕನ ಅಭಿರುಚಿಗೆ ತಕ್ಕಂತೆ ಬದಲಾಗುತ್ತಿದೆ. ಪ್ರತಿಯೊಬ್ಬರೂ ತಮ್ಮ ಅಗತ್ಯಗಳಿಗೆ ತಕ್ಕಂತೆ ಮನೆಯನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ ಹಾಗೂ ಪರಿವರ್ತಿಸಿಕೊಳ್ಳುತ್ತಿದ್ದಾರೆ.
ದೊಡ್ಡದೊಡ್ಡ ನಗರಗಳಿಗೆ ಸೀಮಿತವಾಗಿದ್ದ ಗೇಟೆಡ್ ಕಮ್ಯೂನಿಟಿ ಪರಿಕಲ್ಪನೆ ಮೈಸೂರಿನಲ್ಲೂ ಕಾಣಿಸಿಕೊಂಡಿದೆ. ಇಂಥದೊಂದು ಬಡಾವಣೆಯೇ ಕಾರಂಜಿ ಕೆರೆಗೆ ಹೊಂದಿಕೊಂಡಂತೆ ತಲೆ ಎತ್ತಿರುವ ಸೆಂಚುರಿ ಪಾರ್ಕ್ ಬಡಾವಣೆ. ಇಲ್ಲಿ ಸುಮಾರು 82 ದೊಡ್ಡ ನಿವೇಶನಗಳಿವೆ. ಈಗಾಗಲೇ 35 ಮನೆಗಳು ತಲೆ ಎತ್ತಿವೆ. ಕಳೆದ ವರ್ಷ ನಿಧನರಾದ ಆರ್‌ಎಸ್‌ಎಸ್ ಮಾಜಿ ಮುಖ್ಯಸ್ಥ ಕೆ.ಎಸ್. ಸುದರ್ಶನ್ ಅವರು ನಾಪತ್ತೆಯಾಗಿದ್ದು ಇದೇ ಬಡಾವಣೆಯಿಂದ. ಇಲ್ಲಿ ಅವರ ಸೋದರನ ಮನೆ ಇದೆ. ಆಗ ಸೆಂಚುರಿ ಪಾರ್ಕ್ ಬಡಾವಣೆ ಎಲ್ಲರ ಗಮನ ಸೆಳೆದಿತ್ತು.
ಇದೇ ಬಡಾವಣೆಯಲ್ಲಿ ಡಾ.ವೆಂಕಟರಾಮ್ ಹಾಗೂ ಸುಭದ್ರ ವೆಂಕಟರಾಮ್ ಅವರ ಮನೆ ಇದೆ. ವೆಂಕಟರಾಮ್ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಅವರು ಇಂಗ್ಲೆಂಡ್‌ನಲ್ಲಿ ಸುಮಾರು 35 ವರ್ಷ ಕಾಲ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು.
ಡಾ. ವೆಂಕಟರಾಮ್ ಹಾಗೂ ಅವರ ಪತ್ನಿ ಸುಭದ್ರಾ ವೆಂಕಟರಾಮ್ ಅವರಿಗೆ ಇಂಗ್ಲೆಂಡ್‌ನಲ್ಲಿದ್ದಾಗಿನಿಂದಲೂ ಪಿಂಗಾಣಿ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸ. ಹೀಗಾಗಿ ಕಳೆದ 20 ವರ್ಷಗಳಿಂದ ಇಂಗ್ಲೆಂಡ್, ಅಮೆರಿಕ, ಯುರೋಪ್ ರಾಷ್ಟ್ರಗಳಲ್ಲಿ ಪ್ರವಾಸ ಮಾಡುವಾಗ ಇಂಥ ವಸ್ತುಗಳನ್ನು ಸಂಗ್ರಹಿಸತೊಡಗಿದರು. ಸ್ವದೇಶಕ್ಕೆ ವಾಪಸಾದ ನಂತರವೂ ಇದು ಮುಂದುವರಿಯಿತು.
ಇಂಗ್ಲೆಂಡ್‌ನಿಂದ ಅವರು ಭಾರತಕ್ಕೆ ವಾಪಸಾದ ನಂತರ ಮೈಸೂರಿನಲ್ಲಿ ನೆಲೆ ನಿಂತರು. ಮೊದಲಿಗೆ ಅವರ ಮನೆ ಕುವೆಂಪುನಗರದ ಗಗನಚುಂಬಿ ಜೋಡಿ ರಸ್ತೆಯಲ್ಲಿತ್ತು. ಆದರೆ ಅಲ್ಲಿ ವಸ್ತು ಸಂಗ್ರಹಾಲಯಕ್ಕೆ ಸ್ಥಳ ಚಿಕ್ಕದು ಎನಿಸಿತು. ಹೀಗಾಗಿ ಅವರು ಆ ಮನೆಯನ್ನು ಮಾರಾಟ ಮಾಡಿ, ಸೆಂಚುರಿ ಪಾರ್ಕ್‌ನಲ್ಲಿ 80್ಢ120 ಅಡಿ ಅಳತೆಯ ನಿವೇಶನ ಖರೀದಿಸಿದರು. ಅಲ್ಲಿ 55 ಚದರಡಿಯಲ್ಲಿ ಮನೆ ನಿರ್ಮಿಸಲಾಗಿದೆ. ಉಳಿದಂತೆ ಹಸಿರುಹುಲ್ಲಿನ ಲಾನ್ ಬೆಳೆಸಲಾಗಿದೆ.
ನೆಲ ಅಂತಸ್ತಿನಲ್ಲಿ ಎರಡು ಹಾಲ್, ಎರಡು ಬೆಡ್ ರೂಂ, ಡೈನಿಂಗ್ ಹಾಲ್, ದೇವರಮನೆ, ಅಡುಗೆ ಮನೆ, ಶೌಚಾಲಯ, ಅದೇ ರೀತಿ ಮೊದಲ ಅಂತಸ್ತಿನಲ್ಲೂ ಎರಡು ಬೆಡ್ ರೂಂ, ಶೌಚಾಲಯ. ಅಡುಗೆ ಮನೆ ಹಾಗೂ ಒಂದು ಬೃಹತ್ ಹಾಲ್ ನಿರ್ಮಿಸಿದರು. ಈ ಬೃಹತ್ ಹಾಲ್ ಅನ್ನು ಈಗ ಮ್ಯೂಸಿಯಂ ಆಗಿ ಪರಿವರ್ತಿಸಿದ್ದಾರೆ. ಅಲ್ಲಿ ಪಿಂಗಾಣಿಯಿಂದ ಮಾಡಲಾದ ವಸ್ತುಗಳನ್ನು ಸಂಗ್ರಹಿಸಿದ್ದಾರೆ.
ಕ್ವೀನ್ ಎಲಿಜಬೆತ್, ಲೇಡಿ ಡಯಾನ ಮತ್ತು ಚಾರ್ಲ್ಸ್ ದೊರೆ, ಪಾಲ್ ಮ್ಯಾಕಾರ್ಟ್ನಿ, ಡಿಕ್ಕಿ ಬರ್ಡ್ ಸೇರಿದಂತೆ ಹಲವಾರು ಖ್ಯಾತನಾಮರು, ಹಲವು ಬಗೆಯ ಗೂಬೆಗಳು ಸೇರಿದಂತೆ ವಿವಿಧ ಪ್ರಾಣಿ, ಪಕ್ಷಿಗಳು, ಪಾಶ್ಚಾತ್ಯ ಸಂಗೀತ ಪರಿಕರಗಳು, ಗಡಿಯಾರಗಳು, ಕಪ್ ಮತ್ತು ಸಾಸರ್‌ಗಳು, ಕ್ರಿಸ್ಮಸ್ ಥೀಮ್‌ಗಳು, ಆಂಗ್ಲೋ ಇಂಡಿಯನ್ ಯುದ್ಧ ಮಾದರಿಗಳು, ಫಿರಂಗಿಗಳು ಗಮನ ಸೆಳೆಯುತ್ತವೆ.
- ಅಂಶಿ ಪ್ರಸನ್ನಕುಮಾರ್ / ಚಿತ್ರ- ಎಸ್. ಮಂಜನಾಥ್