ಮುಟ್ಟಿದರೆ ಮನಿ

ಮುಟ್ಟಿದರೆ ಮನಿ
Updated on: 

ಹವ್ಯಾಸ ಎನ್ನುವುದು ಗ್ರಾಮೀಣ ಹೆಣ್ಣುಮಕ್ಕಳ ಮುಡಿಯಲ್ಲೂ ಇರುತ್ತದೆ. ಕೆಲವರು ಹೂ ಗಿಡ ಬೆಳೆಸುತ್ತಾರೆ, ಮಾಲೆ ಕಟ್ಟುತ್ತಾರೆ, ತರಕಾರಿ ಬೆಳೆಯುತ್ತಾರೆ... ಹೀಗೆ ಒಬ್ಬೊಬ್ಬರಿಗೆ ಒಂದೊಂದರ ಮೇಲೆ ಆಸಕ್ತಿ. ಶಿರಸಿ ತಾಲೂಕಿನ ಹುಣಸೆಕೊಪ್ಪ ಸಮೀಪದ ಹೂತನ ಜಾನ್ಮನೆಯ ಎನ್.ಕೆ. ಬಾನುಮತಿ ಅವರಿಗಿರುವುದು ಕಸೂತಿ ಹವ್ಯಾಸ.
ಇವರಿಗೆ 67 ವರುಷ. ತಾಯಿ ಸತ್ಯಭಾಮೆ ಕಸೂತಿಯಲ್ಲಿ ಸಕ್ರಿಯರಾಗಿದ್ದರು. ತಾಯಿಯಿಂದ ಸ್ಫೂರ್ತಿ ಪಡೆದ ಬಾನುಮತಿ, 10ನೇ ವಯಸ್ಸಿನಲ್ಲೇ ಉಲ್ಲನ್, ಪ್ಲಾಸ್ಟಿಕ್ ವೈರ್... ಇತ್ಯಾದಿಗಳಿಂದ ಬಗೆಬಗೆಯ ಅಲಂಕಾರಿಕ ವಸ್ತುಗಳನ್ನು ಸಿದ್ಧಪಡಿಸತೊಡಗಿದರು. ಪ್ರಾರಂಭದ ದಿನಗಳಲ್ಲಿ ಪ್ಲೇಟ್, ಟೋಪಿ, ಬಾಗಿಲ ತೋರಣ... ಹೀಗೆ ನಾನಾ ವಸ್ತುಗಳನ್ನು ಸಿದ್ಧಪಡಿಸಿ ಸೈ ಎನ್ನಿಸಿಕೊಂಡರು. ವಿವಾಹದ ನಂತರ ಪತಿ ಕೃಷ್ಣಮೂರ್ತಿ ಅವರು ಪ್ರೋತ್ಸಾಹಿಸಿದ್ದರಿಂದ ತಮ್ಮ ಕರಕುಶಲ ಕಲೆಯನ್ನು ವಿಸ್ತರಿಸಿಕೊಂಡಿದ್ದೇನೆಂದು ಬಾನುಮತಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ವೇಸ್ಟ್ ಬಟ್ಟೆಯಿಂದ ಮ್ಯಾಟ್, ಬ್ಯಾಗ್, ಮಾಲೆ; ಅಡಕೆ ಹಾಳೆಯಿಂದ ಹೂವು, ಬೀಜದಿಂದ ಮಣಿ; ವೈರ್‌ನಿಂದ ಆಕರ್ಷಕ ಆರತಿಕಟ್ಟು, ಬಿತ್ತಕ್ಕಿ ಬಟ್ಟಲು; ಉಲ್ಲನ್ ದಾರದಿಂದ ಅಲಂಕಾರಿಕ ವಸ್ತುಗಳನ್ನು ಸಿದ್ಧಪಡಿಸುವುದರಲ್ಲಿ ಬಾನುಮತಿ ಸಿದ್ಧಹಸ್ತರು. ತರಕಾರಿಯ ಬೀಜ, ಧಾನ್ಯಗಳಿಂದಲೂ ವಿವಿಧ ಕಲಾಕೃತಿಗಳನ್ನು ಸಿದ್ಧಪಡಿಸುತ್ತಾರೆ.
ವಿವಿಧ ತರಕಾರಿ ಬೀಜಗಳನ್ನು ಸಂಗ್ರಹಿಸುವ ಇವರು, ಶಿರಸಿಯ ವನಸ್ತ್ರೀ ಸಂಸ್ಥೆಯ ಮೂಲಕ ಮಾರಾಟ ಮಾಡಿ ಹಣ ಸಂಪಾದಿಸುತ್ತಾರೆ. ನಾನಾ ಬಗೆಯ ತಿಂಡಿ-ತಿನಿಸು, ಮಾವಿನ ಹಣ್ಣಿನ ಹಪ್ಪಳ, ಬಾಳೆ ಹಣ್ಣಿನ ಸುಕೇಳಿ... ಹೀಗೆ ಹತ್ತಾರು ಬಗೆಯ ತಿಂಡಿಗಳನ್ನು ಸಿದ್ಧಪಡಿಸಿ ಮಾರಿ ಸ್ವಾವಲಂಬಿಯಾಗಿದ್ದಾರೆ. ನಿತ್ಯ ಅಡುಗೆ ಕೆಲಸಗಳನ್ನು ಪೂರೈಸಿಯೂ ಇಂಥ ಹವ್ಯಾಸಗಳಿಂದ ಸಂತೃಪ್ತ ಜೀವನ ಸಾಗಿಸುತ್ತಿದ್ದಾರೆ.
ಶಿರಸಿಯ ಡಾ. ಮಾಲಾ ಗಿರಿಧರ ಅವರ ಸಾರಥ್ಯದಲ್ಲಿ ನಡೆದ ಪ್ರಶಾಂತಿ ಪ್ರತಿಷ್ಠಾನದಲ್ಲಿ ಬಾಳೆ ನಾರಿನಿಂದ ಸಿದ್ಧ ಮಾಡಬಹುದಾದ ವಸ್ತುಗಳ ಬಗ್ಗೆ ತರಬೇತಿ ಪಡೆದುಕೊಂಡಿರುವ ಭಾನುಮತಿ, ಬಾಳೆ ನಾರಿನಿಂದ ಪೆನ್, ಬ್ಯಾಗು, ಫೈಲ್... ಇತ್ಯಾದಿಗಳನ್ನು ಸಿದ್ಧಪಡಿಸಿ ಪ್ರತಿಷ್ಠಾನಕ್ಕೆ ಮಾರುತ್ತಾರೆ. 'ನನ್ನ ಖರ್ಚಿಗೆ ಸಾಕಾಗುವಷ್ಟು ಹಣವನ್ನು ನನ್ನ ಕಲೆಯಿಂದಲೇ ಗಳಿಸಲು ಸಾಧ್ಯವಾಗಿದೆ' ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ ಬಾನುಮತಿ (ಮೊ. 9972045756).

16 ಬಾರಿ ಶಸ್ತ್ರ ಚಿಕಿತ್ಸೆಗೊಳಗಾದರೂ ತಮ್ಮ ಹವ್ಯಾಸದಲ್ಲಿ ಈಗಲೂ ಸಕ್ರಿಯವಾಗಿ ತೊಡಗಿಕೊಂಡಿರುವ ಅವರು ರಂಗೋಲಿಯಲ್ಲಿ ಸ್ಪರ್ಧೆ, ಮಲೆನಾಡು ಮೇಳದಲ್ಲಿ ಮಾವಿನ ವಿವಿಧ ಖಾದ್ಯ ಸ್ಪರ್ಧೆ, ಉತ್ತಮ ಬೀಜ ಸಂರಕ್ಷಣೆಗಾಗಿ, ತಟ್ಟೆ ರಂಗೋಲಿ ಸ್ಪರ್ಧೆಯೂ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಶಿರಸಿಯಲ್ಲಿ ನಡೆದ ಕುಟುಂಬ ಮೇಳದಲ್ಲಿ ಇವರನ್ನು ಸನ್ಮಾನಿಸಲಾಗಿದೆ. 

- ಗಣಪತಿ ಹಾಸ್ಪುರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com