ಬದುಕು ನಿನಗಾಗಿ...

ಬದುಕು ನಿನಗಾಗಿ...
Updated on: 

ಆತ ನಿಮ್ಮನ್ನು ಬಿಟ್ಟು ಹೋಗಿದ್ದಾನೆ. ಎಷ್ಟು ವರ್ಷಗಳಿಂದ ಜತನದಿಂದ ಕಟ್ಟಿಕೊಂಡು ಬಂದ ಸಂಬಂಧವೊಂದು ಇದ್ದಕ್ಕಿದ್ದಂತೆ ಹೇಳಹೆಸರಿಲ್ಲದೆ ಹೆಸರು ಕಳೆದುಕೊಂಡಿದೆ. ನೆನೆಸಿರದ ಘಟನೆಯಿಂದ ಆಘಾತ ಒಂದು ಕಡೆಯಾದರೆ ದೂರ ಓಡುವ ಪ್ರಯತ್ನ ಮಾಡಿದ ಹಾಗೂ ಬೆನ್ನತ್ತಿ ಬರುವ ಒಂಟಿತನ ಇನ್ನೊಂದೆಡೆ. ಸಂಬಂಧವೊಂದು ಕೊನೆಯಾದ ಕೆಲವು ತಿಂಗಳು ಖಿನ್ನತೆ ಹಾಗೂ ಒತ್ತಡಗಳನ್ನು ನಿಭಾಯಿಸುವುದು ಕಷ್ಟವೇ. ನೀವು ಕೇವಲ ದುಃಖ ಅನುಭವಿಸುವುದಿಲ್ಲ, ಜೊತೆಗೆ ಬದುಕೇ ವ್ಯರ್ಥ ಎನಿಸುತ್ತದೆ. ಈ ದುಃಖದಿಂದ ಎಂದಿಗೂ ಹೊರಬರಲಾರೆ ಎಂದೂ ಅನಿಸುತ್ತದೆ. ಆತ್ಮಹತ್ಯೆಯ ಯೋಚನೆಗಳು ನಿದ್ದೆಗೆಡಿಸುತ್ತಿವೆ. ಇಂಥ ಸಂದರ್ಭದಲ್ಲಿ ಏನು ಮಾಡಬೇಕು? ಹೇಗೆ ಪಡೆಯುವುದು ಮರಳಿ ಬದುಕನ್ನು?
    ಎಂಥ ಕಷ್ಟದ ಸಂದರ್ಭದಲ್ಲೂ ಹೇಳಿಕೊಳ್ಳಿ, ಬದುಕು ಮುಗಿದಿಲ್ಲ. ಸಮಯ ಸರಿದಂತೆ ಎಲ್ಲವೂ ಸರಿಯಾಗುತ್ತದೆ. ಹೀಗೆ ಹೇಳಿಕೊಳ್ಳುವಾಗ ನಿಮಗೆ ನಿಮ್ಮ ಮಾತಿನ ಮೇಲೇ ನಂಬಿಕೆ ಇರುವುದಿಲ್ಲ. ಆದರೂ ಹಾಗೆಂದೇ ಪದೇ ಪದೇ ಹೇಳಿಕೊಳ್ಳಿ. ಭವಿಷ್ಯದಲ್ಲಿ ಅದೇನೇನು ಅಚ್ಚರಿಗಳನ್ನು ಭಗವಂತ ತಿಜೋರಿಯಲ್ಲಿಟ್ಟಿದ್ದಾನೋ ಬಲ್ಲವರಾರು? ಈ ಕೊಂಚ ಕುತೂಹಲವೇ ಭರವಸೆಯ ಹೊಳಹು ನೀಡುತ್ತದೆ. ಭರವಸೆಯೊಂದಿದ್ದರೆ ಬದುಕು ಬಹುಬೇಗ ಹಾದಿಗೆ ಬರುತ್ತದೆ.
    ನಿಮ್ಮ ಮನಸ್ಸನ್ನು ನಿಮ್ಮಷ್ಟು ಚೆನ್ನಾಗಿ ಅರಿತವರು ಇನ್ನೊಬ್ಬರಿಲ್ಲ. ಹಾಗಾಗಿ ಅದಕ್ಕೆ ನಿಮಗಿಂತಾ ಉತ್ತಮ ಕೌನ್ಸೆಲರ್ ಬೇರೊಬ್ಬರು ಸಿಗಲಾರರು. ಎಲ್ಲಕ್ಕಿಂತ ಹೆಚ್ಚಾಗಿ ನಾನು ಮಾನಸಿಕವಾಗಿ ಗಟ್ಟಿಯಾಗಬೇಕು ಎಂಬ ಸಂಕಲ್ಪ ಇರಲಿ. ಸಮಯ ಸಿಕ್ಕಾಗಲೆಲ್ಲ ಮನಸ್ಸಿಗೆ ಬುದ್ಧಿ ಹೇಳಿ. ಮನಸೆಂಬುದು ಯಾರು ನಿಮ್ಮ ಜೀವನದಲ್ಲಿದ್ದರೂ ಇಲ್ಲದಿದ್ದರೂ ನಿಮ್ಮೊಂದಿಗೇ ಇರುತ್ತದೆ. ಹಾಗಾಗಿ ಅದನ್ನು ಪ್ರೀತಿಸಿ. ನಿಮ್ಮನ್ನು ನೀವು ಪ್ರೀತಿಸಿಕೊಳ್ಳಿ.
    ಖಿನ್ನತೆ ಯಾರೊಂದಿಗೂ ಮಾತು ಬೇಡ ಎಂಬ ಯೋಚನೆ ತಂದೊಡ್ಡುತ್ತದೆ. ಆದರೂ ನಿಮ್ಮ ಮಾನಸಿಕ ಸಮತೋಲನ ಕಾಪಾಡುವ ಸಲುವಾಗಿ ಹೆಚ್ಚು ಹೆಚ್ಚು ಜನರೊಂದಿಗೆ ಮಾತನಾಡಿ. ಅವರ ಕಷ್ಟಸುಖ ಆಲಿಸಿ. ನಿಮ್ಮ ದುಃಖವನ್ನೂ ಹೇಳಿಕೊಳ್ಳಿ. ಈ ಸಂದರ್ಭದಲ್ಲಿ ನಿಮಗಿಂತಲೂ ಹೆಚ್ಚು ಆಘಾತ ಅನುಭವಿಸಿದವರು ಎದುರಾಗಬಹುದು. ಅದು ನಿಮಗೆ ಕೊಂಚ ಸಮಾಧಾನವನ್ನೂ, ಸಮಸ್ಯೆಯ ಬಗ್ಗೆ ಇದೇನು ಮಹಾ ಎಂಬ ಅಸಡ್ಡೆಯನ್ನೂ ತರುತ್ತದೆ.
    ಸಮಯವನ್ನು ಅನುಪಯುಕ್ತವಾಗಿ ನೀವು ಕೊಂದರೆ ಸಮಯ ನಿಮ್ಮನ್ನೂ ಕೊಲ್ಲುತ್ತದೆ. ಸಮಯಕ್ಕೆ ನೀವು ಬೆಲೆ ಕೊಟ್ಟಷ್ಟೂ ನಿಮ್ಮ ಬೆಲೆ ಹೆಚ್ಚುತ್ತದೆ. ಇಡೀ ದಿನ ಕುಳಿತಲ್ಲೇ ದುಃಖಿಸುವುದನ್ನು ಬಿಟ್ಟು ಮನೆಯಿಂದ ಹೊರ ಹೋಗಿ. ಹೊಸ ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ಒಂದಿಷ್ಟು ಕಮ್ಯುನಿಟಿಗಳಿಗೆ ವಾಲಂಟೀರ್ ಆಗಿ ಸೇರಿಕೊಳ್ಳಿ. ನಿಮ್ಮ ಹಳೆಯ ಹವ್ಯಾಸಗಳದ್ದೂ ಬಲೆ ಗುಡಿಸಿ.
    ಒಂಟಿತನಕ್ಕೆ ಮತ್ತೊಂದು ಪರಿಹಾರವೆಂದರೆ ಪ್ರಾಣಿಗಳನ್ನು ಸಾಕುವುದು. ಅದರಲ್ಲೂ ನಾಯಿಗಳು ಬಹುಬೇಗ ಭಾವನಾತ್ಮಕವಾಗಿ ಒಳ್ಳೆಯ ಸಾಂಗತ್ಯ ನೀಡುತ್ತವೆ.
    ಒಂದಿಷ್ಟು ಪ್ರವಾಸಿ ತಾಣಗಳಿಗೆ ಹೋಗಬೇಕೆಂದು ಅಂದುಕೊಂಡಿದ್ದು, ಒಂದಿಷ್ಟು ಪುಸ್ತಕ ಓದಬೇಕೆಂದುಕೊಂಡಿದ್ದು ಇದುವರೆಗೂ ಆಗಿರುವುದಿಲ್ಲ. ಅಂಥ ಕೆಲಸಗಳನ್ನು ಮಾಡಲು ಇದು ಸಕಾಲ.
    ನಿಮ್ಮ ಬದುಕಿನಲ್ಲಿ ಯಾವುದೋ ಒಂದು ಸಂಬಂಧ ಮುಗಿಯಿತೆಂಬ ಕಾರಣಕ್ಕೆ ಇನ್ನಾವ ಹೊಸ ಸಂಬಂಧಗಳೂ ಹುಟ್ಟುವುದಿಲ್ಲ ಎಂದರ್ಥವಲ್ಲ. ಬದುಕಿನಲ್ಲಿ ಯಾರೂ ಶಾಶ್ವತವಲ್ಲ. ಕೆಲವರು ಹೆಚ್ಚು ಕಾಲ ನಿಲ್ಲಬಹುದಷ್ಟೇ. ಇದುವರೆಗೂ ಎಷ್ಟೋ ಜನ ಬಂದು ಹೋಗಿದ್ದಾರೆ. ಹಾಗೆಯೇ ಮುಂದೂ ಬಂದು ಹೋಗುತ್ತಾರೆ. ಮನೆಯಲ್ಲೇ ಸುಮ್ಮನೆ ಕುಳಿತರೆ ಹೊಸ ಪರಿಚಯಗಳು ಆಗುವುದಾದರೂ ಹೇಗೆ?

-ರೇಶ್ಮಾ ರಾವ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com