

ಚೀಸ್ ರಕ್ಷಣೆಗೆ
ಕತ್ತರಿಸಿಟ್ಟ ಚೀಸ್ನ ಬದಿಗಳಲ್ಲಿ ಬೂಷ್ಟು ಬಂದಂತಾಗಿ ಗಟ್ಟಿಯಾಗಿದೆಯೇ? ಹಾಗಿದ್ದರೆ ಪ್ರತಿ ಸಲ ಚೀಸ್ ಕತ್ತರಿಸಿದಾಗ ಅದರ ಬದಿಗೆ ಸ್ವಲ್ಪ ಬೆಣ್ಣೆ ಉಜ್ಜಿರಿ. ನಂತರ ಅದನ್ನು ಪ್ಯಾಕ್ನೊಳಗಿಟ್ಟು ಫ್ರಿಡ್ಜ್ನಲ್ಲಿಡಿ. ಆಗ ಬೂಷ್ಟು ಬರುವುದಿಲ್ಲ ಹಾಗೂ ಚೀಸ್ ಫ್ರೆಶ್ ಆಗಿರುತ್ತದೆ.
ಈರುಳ್ಳಿ ಫ್ರೆಶ್
ಕತ್ತರಿಸಿದ ಈರುಳ್ಳಿಯ ಅರ್ಧ ಭಾಗ ತುಂಬಾ ದಿನ ಹಾಳಾಗಬಾರದು ಎಂದರೆ ತುಂಡರಿಸಿದ ಭಾಗಕ್ಕೆ ಸ್ವಲ್ಪ ಬೆಣ್ಣೆ ಹಚ್ಚಿರಿ. ನಂತರ ಆ ಈರುಳ್ಳಿಯನ್ನು ಅಲ್ಯೂಮಿನಿಯಂ ಫಾಯಿಲ್ನಲ್ಲಿ ಸುತ್ತಿ ಫ್ರಿಡ್ಜ್ನಲ್ಲಿಡಿ.
ಕುದಿಯುವಾಗ
ಪಾಸ್ತಾವನ್ನು ಬೇಯಲು ಇಟ್ಟಿದ್ದೀರಿ. ಸ್ವಲ್ಪ ಆ ಕಡೆ ತಿರುಗಿ ಮತ್ತೆ ನೋಡುವಾಗ ನೀರು ಕುದಿದು ಎಲ್ಲವೂ ಸ್ಟವ್ ಮೇಲೆ ಬಿದ್ದಿರುತ್ತದೆ. ಇದನ್ನು ತಪ್ಪಿಸಬೇಕೆಂದರೆ, ಪಾಸ್ತಾ ಕುದಿಯಲು ಇಟ್ಟಾಗ ಅದಕ್ಕೆ ಒಂದು ಅಥವಾ ಎರಡು ಟೀ ಚಮಚ ಬೆಣ್ಣೆ ಹಾಕಿ. ಈಗ ನೋಡಿ ಅದು ಕುದಿದು ಕೆಳಗೆ ಬೀಳುವುದಿಲ್ಲ.
ಸುಲಭವಾಗಿ ಕತ್ತರಿಸಲು
ಅಂಜೂರ, ಖರ್ಜೂರದಂತಹ ಅಂಟಂಟಾದ ಅಥವಾ ಗಟ್ಟಿಯಿರುವ ಪದಾರ್ಥಗಳನ್ನು ತುಂಡರಿಸುವಾಗ ಚಾಕುವಿಗೆ ಸ್ವಲ್ಪ ಬೆಣ್ಣೆ ಹಚ್ಚಿ. ಇಲ್ಲಿ ಬೆಣ್ಣೆಯು ಕೀಲೆಣ್ಣೆಯಂತೆ ವರ್ತಿಸುತ್ತದೆ. ಚಾಕುವಿನ ಬ್ಲೇಡ್ಗೆ ಆಹಾರ ವಸ್ತು ಅಂಟುವುದನ್ನು ಇದು ತಡೆಯುತ್ತದೆ.