ಸಂಚಾರಿ ಸೂರು

ಸಂಚಾರಿ ಸೂರು
Updated on: 

ನೋಡಲು ಇದು ಐಷಾರಾಮಿ ವಾಹನದಂತೆ ಕಾಣಿಸುತ್ತದೆ. ಆದರೆ, ಈ ವಾಹನದ ಹೊರಗಿನ ಭಾಗ ಮಾತ್ರ ಲಕ್ಷುರಿಯಾಗಿಲ್ಲ. ಒಳಗಡೆ ಕಾಲಿಟ್ಟರೆ ಸಾಕು. ಊಹಿಸಲಾರದಷ್ಟು ಅತ್ಯಾಧುನಿಕ ಸೌಕರ್ಯ ಅಲ್ಲಿ ಮನೆ ಮಾಡಿದೆ.
ಹೌದು. ಈ ವಾಹನದೊಳಗಡೆ ಒಂದು ಸುಂದರ ಸೂರು ಅವಿತಿದೆ. ಅಂದಹಾಗೆ ಇದನ್ನು ಇತ್ತೀಚೆಗೆ ದುಬೈನಲ್ಲಿ ಮಾರಾಟ ಮಾಡಲಾಯಿತು. ಈ ಸಂಚಾರಿ ಸೂರಿನ (ಮೊಬೈಲ್ ಹೋಮ್) ಬೆಲೆ ಎಷ್ಟು ಗೊತ್ತೆ 2 ಮಿಲಿಯನ್ ಡಾಲರ್. ಅಂದರೆ ಬರೋಬ್ಬರಿ 17 ಕೋಟಿ ರುಪಾಯಿ!
ಅಬ್ಬಾ! ಈ ಸಂಚಾರಿ ಸೂರಿಗೆ ಅಷ್ಟೊಂದು ಬೆಲೆ ಕೊಡಬಹುದಾ? ಅಂಥದ್ದು ಏನಿದೆ ಇದರಲ್ಲಿ ಎಂಬ ಪ್ರಶ್ನೆಗಳು ನಿಮ್ಮಲ್ಲಿ ಮೂಡದೇ ಇರದು. ಇದರೊಳಗಡೆ ಹೋಗಿ ಒಮ್ಮೆ ನೋಡಿದರೆ ಅದರ ಮೌಲ್ಯ ರು. 17 ಕೋಟಿ ಆಗದಿರದು ಎಂದು ಲೆಕ್ಕ ಹಾಕದೆ ಇರಲಾರಿರಿ.
ಒಟ್ಟು 40 ಅಡಿ ಇರುವ ಈ ಮೊಬೈಲ್ ಹೋಮ್‌ನಲ್ಲಿ ಅತ್ಯಾಧುನಿಕ ಪೀಠೋಪಕರಣ, 40 ಇಂಚಿನ ಫ್ಲಾಟ್ ಟಿವಿ ಪರದೆ, ಮಾಸ್ಟರ್ ಬೆಡ್‌ರೂಂಗಳು, ಗುಂಡು ನಿರೋಧಕ ಗ್ಲಾಸುಗಳು, ಹರಟೆ ಹೊಡೆಯಲು ಅಥವಾ ಅತಿಥಿಗಳೊಂದಿಗೆ ಮಾತುಕತೆ ನಡೆಸಲು ಮನೆಯ ವರಾಂಡ ಇರುವಂತೆ ವ್ಯಾನ್‌ನ ಮೇಲೆ ವರಾಂಡ ನಿರ್ಮಿಸಲಾಗಿದೆ. ಆದರೆ, ಅಲ್ಲಿ ಹಸಿರು ಬಗೆಯ ಉದ್ಯಾನ ಇರುವುದಿಲ್ಲ. ಬದಲಾಗಿ ನಾಲ್ಕೈದು ಮಂದಿ ಕೂತು ಹರಟೆ ಹೊಡೆಯುವಷ್ಟು ವ್ಯವಸ್ಥೆ ಕಲ್ಪಿಸಲಾಗಿದೆ.
ಇವಿಷ್ಟೇ ಅಲ್ಲ... ಕ್ಯಾಮೆರಾ, ಅಡುಗೆಮನೆ, ಬೆಚ್ಚಗಿನ ಬೆಡ್‌ರೂಂಗಳೂ ಇಲ್ಲಿವೆ. ಅಷ್ಟೇ ಅಲ್ಲ, ಚಾಲನೆ ಮಾಡುವ ಜಾಗದಲ್ಲೂ ಮೂರ್ನಾಲ್ಕು ಜನ ಕೂತು ಮಾತನಾಡುವಷ್ಟು ಚೇರ್‌ಗಳ ವ್ಯವಸ್ಥೆ ಇದೆ. ಒಂದು ಮಿನಿ ಕಚೇರಿಯೂ ಇಲ್ಲುಂಟು. ಕಂಪ್ಯೂಟರ್ ಇದೆ, ಇಂಟರ್‌ನೆಟ್ ಸೌಲಭ್ಯದ ಜತೆಗೆ.
ಸಣ್ಣದಾದ ಹಾಲ್ ಕೂಡ ಇದರಲ್ಲಿದ್ದು, ಅಲ್ಲಿ ಹೋಂ ಥಿಯೇಟರ್ ಇದೆ. ದುಬಾರಿ ತಂತ್ರಜ್ಞಾನದ ಹೋಂ ಥಿಯೇಟರ್ ಇದು. ಒಟ್ಟಿನಲ್ಲಿ ಒಂದು ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಕಳೆದಂಥ ಅನುಭವ ಇಲ್ಲಾಗುತ್ತದೆ. ಅಂದಹಾಗೆ ಈ ಸಂಚಾರಿ ಸೂರಿನ ವಾಹನವನ್ನು ರೂಪಿಸಿದ್ದು ಆಸ್ಟ್ರಿಯಾದ ಕಂಪನಿ ಮಾರ್ಚಿ ಮೊಬೈಲ್. ಈ ಸಂಚಾರಿ ಸೂರನ್ನು ತೈಲ ಉತ್ಪನ್ನ ದೇಶವಾದ ಅರಬ್ ದೇಶಕ್ಕೆಂದೇ ನಿರ್ಮಿಸಲಾಗಿದೆಯಂತೆ. ಸದ್ಯ ಈ ಕಂಪನಿಯು ಬಿಳಿ ಬಣ್ಣದಲ್ಲಿ ಮಾತ್ರ ಸಂಚಾರಿ ಸೂರನ್ನು ಬಿಡುಗಡೆ ಮಾಡಿದೆ.

- ಎಚ್.ಎನ್. ಬ್ರಹ್ಮಾನಂದ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com