ಮಾನಿನಿ ಹೆಚ್ಚು ಹೊತ್ತು ಕಳೆಯುವುದು ಅಡುಗೆಮನೆಯಲ್ಲಿ. ಇಂಥ ಸಂದರ್ಭದಲ್ಲಿ ಕೆಲವು ಅವಘಡಗಳೂ ಸಂಭವಿಸಬಹುದು. ಆದರೆ, ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ, ಸಣ್ಣ ಪ್ರಮಾಣದಲ್ಲಾದರೂ ಸಂಭವಿಸುತ್ತವೆ. ಹೀಗಾಗಿ ಎಚ್ಚರಿಕೆಯಿಂದಲೇ ಇರಬೇಕು.
ಯಾವುದೇ ಪಾತ್ರೆಯ ಹಿಡಿಕೆಯು ಪ್ಲಾಸ್ಟಿಕ್ ಅಥವಾ ಕುಕ್ಕರಿನ ಹಿಡಿಯಂತಿದ್ದರೆ ದೊಡ್ಡ ಉರಿಯಲ್ಲಿ ಕಾಯಿಸುವ ಬದಲು ಸ್ವಲ್ಪ ಕಡಿಮೆ ಬೆಂಕಿಯಲ್ಲಿ ಇಡಿ. ಯಾಕೆಂದರೆ ಪ್ರಾರಂಭದ ದೊಡ್ಡ ಬೆಂಕಿಯಲ್ಲಿ ಬೇಗ ಹಾಳಾಗಿ ಹೋಗುತ್ತದೆ.
ಪಾತ್ರೆಯ ಹಿಡಿ ಪಾತ್ರೆಗಿಂತ ಭಾರವಿದ್ದರೆ ಗ್ಯಾಸ್ ಮೇಲಿಟ್ಟಾಗ ತಕ್ಷಣ ಬಿದ್ದು ಒಳಗಿದ್ದ ಪದಾರ್ಥ ಚೆಲ್ಲಿ ಹೋಗುತ್ತದೆ. ಹಿಡಿಯ ಭಾಗ ಪಾತ್ರೆಗಿಂತ ಕಡಿಮೆ ಭಾರದ್ದಾಗಿರಲಿ.
ಆದಷ್ಟು ಹಲ್ವಾ, ಕಡುಬು ಮಾಡುವಾಗ ಮರದ ಹಿಡಿಯ ಸೌಟನ್ನು ಬಳಸಿ. ಇದರಿಂದ ಕೈಗೆ ಹಿತ.
ಪಾತ್ರೆಗೆ ಹಿಡಿ ಇದ್ದ ಪ್ಲೇಟನ್ನು ಮುಚ್ಚಿದರೆ ಬಿಸಿಯಿರುವಾಗ ತೆಗೆಯಲು ಸುಲಭ. ಸ್ಟೀಲ್ ಹಿಡಿಯಾಗಿದ್ದರೆ ಚಿಕ್ಕ ಕರವಸ್ತ್ರವನ್ನು ಸಣ್ಣದಾಗಿ ಮಡಿಚಿ, ಹಿಡಿಯ ಮೇಲಿಟ್ಟರೆ ಮುಚ್ಚಳ ತೆಗೆಯಲು ಸುಲಭ.
ಕೈಗೆ ಬೆಂಕಿ ತಗುಲಿದರೆ, ಹಚ್ಚಲು ಜೇನು ತುಪ್ಪ, ಬರ್ನೊಲ್ ಇದ್ದರೆ ಒಳ್ಳೆಯದು. ಚಾಕು ತಗುಲಿ ರಕ್ತ ಬಂದರೆ ಒರೆಸಲು ಕಾಟನ್, ಬ್ಯಾಂಡೇಜ್ ಇರಬೇಕು.
ಪದಾರ್ಥಗಳನ್ನು ಕುಟ್ಟಿ ಪುಡಿಮಾಡಲು ಗಟ್ಟಿಯಾದ ಕಲ್ಲು ಇರಲಿ. ಹರಿತ ಚಾಕು, ಕತ್ತರಿ, ಎಲ್ಲಾ ಅದರ ಅದರ ಜಾಗದಲ್ಲಿ ಕೈಗೆಟಕುವಂತೆ ಇರಲಿ.
ಚಪಾತಿ ಮಾಡಿದ ಲಟ್ಟಣಿಗೆಯನ್ನು ಕೂಡಲೇ ಶುಚಿಗೊಳಿಸಿಡಿ. ಅದರ ಮೇಲೆ ಜಿರಳೆ ಹರಿಯುವ ಸಾಧ್ಯತೆ ಇರುತ್ತದೆ.
ಮಿಕ್ಸಿ, ಗ್ರೈಂಡರ್, ಓವನ್, ಫ್ರಿಡ್ಜ್, ಟೋಸ್ಟರ್, ಮಥನ, ಬೀಟರ್ ಈ ಥರದ ಉಪಕರಣಗಳನ್ನು ಆದಷ್ಟು ಅಡುಗೆ ಕೋಣೆಯಲ್ಲಿದ್ದರೆ ಕೆಲಸ ಸುಲಭ. ಎಲೆಕ್ಟ್ರಾನಿಕ್ ವಸ್ತುವಿಗೂ ಪ್ರತ್ಯೇಕ ಪ್ಲಗ್ ಪಾಯಿಂಟ್ ಇರಲಿ.
ಹಳೇ ಪೇಪರ್, ಹಳೇ ಬಟ್ಟೆಗಳು, ಕೈಗೆಟಕುವ ಹಾಗೆ ಇಟ್ಟಿದ್ದರೆ ಸುಲಭ (ಹುಡುಕುವಂತೆ ಇರಬಾರದು).
ಕಸದ ಬುಟ್ಟಿಯಲ್ಲಿ ನೀರಿನ ಅಂಶವಿದ್ದ ಪದಾರ್ಥಗಳನ್ನು ಹಾಕದಿರುವುದು ವಾಸಿ. ಶುಭ್ರಗೊಳಿಸುವುದೂ ಸುಲಭವಾಗುತ್ತದೆ. ಹಸಿ ವಸ್ತುಗಳನ್ನು ಆದಷ್ಟು ಗಿಡದ ಬುಡಕ್ಕೆ ಹಾಕಿ ಅಥವಾ ಬಯೋಗ್ಯಾಸ್‌ಗೂ ಬಳಸಬಹುದು. 3 ಕೆ.ಜಿ. ಹಸಿ ತ್ಯಾಜ್ಯವನ್ನು ಹಾಕುವ ಡ್ರಮ್ ಖರೀದಿಸಿದರೆ 3 ಗಂಟೆಗೆ ಸಾಲುವಷ್ಟು ಗ್ಯಾಸ್ ಸರಬರಾಜಾಗುತ್ತದೆ.
ಕಾಯಿ ತುರಿಯುವ ಮಣೆ, ತರಕಾರಿ ಮಣೆಯಲ್ಲೇ ಕೂತು ತರಕಾರಿ (ಕತ್ತಿ ಹೊಂದಿದ) ಹೆಚ್ಚುವ ಮಣೆ, ನಾನ್‌ಸ್ಟಿಕ್ ತೂಗು ಹಾಕಲು ವ್ಯವಸ್ಥೆ, ತುರಿಯುವ ಸಾಧನ ಹೀಗೆ ನಮ್ಮ ಅಡುಗೆಮನೆಯಲ್ಲಿ ಬಳಸುವ ಎಲ್ಲಾ ಸಾಮಾನುಗಳು ಅಡುಗೆಮನೆಯಲ್ಲೇ ಇಡುವಂತಿದ್ದರೆ ಸಮಯದ ಸದುಪಯೋಗವಾಗುತ್ತದೆ.
ಅಡುಗೆಮನೆಯಲ್ಲಿ ದೊಡ್ಡ ಸಾಮಾನುಗಳನ್ನು ಇಡಬೇಡಿ. ಪಕ್ಕದ ಸ್ಟೋರ್ ರೂಮ್‌ಗೆ ವರ್ಗಾಯಿಸಿ. ಕಿಚನ್‌ನೋಡಲೂ ಅಂದವಾಗಿ ಕಾಣುತ್ತದೆ.