

ಮಗು ಪುಟ್ಟ ಪುಟ್ಟ ಹೆಜ್ಜೆ ಇಟ್ಟುಕೊಂಡು ಬರುವುದು ನೋಡಲು ಎಷ್ಟು ಚೆಂದ ಅಲ್ಲವೇ?
ಹೌದು, ಮಕ್ಕಳ ಪುಟ್ಟ ಪುಟ್ಟ ಹೆಜ್ಜೆ, ಅವುಗಳ ಕಿಲ ಕಿಲ ನಗುವಿನ ಜೊತೆಯ ಅಂಬೆಗಾಲು... ಆ ಆಟ ನೋಡುವುದೇ ಜೀವನದ ಸೌಭಾಗ್ಯ. ಕೆಲವರು ಅಪ್ಪ ಅಮ್ಮಂದಿರುತ್ತಾರೆ, ಅವರಿಗೆ ಮಕ್ಕಳು 8 ತಿಂಗಳಿಗೇ ಧಡ್ ಧಡ್ ಅಂತ ನಡೆದೇ ಬಿಡಬೇಕು. ಇಲ್ಲದಿದ್ದರೆ ಅಯ್ಯೋ ನನ್ನ ಮಗು 8 ತಿಂಗಳಾದರೂ ನಡೆಯಲಿಲ್ಲವಲ್ಲ. ಏನಾಗಿದೆಯಪ್ಪಾ ಅಂತ ಕೊರಗಿಕೊಂಡು ಆಸ್ಪತ್ರೆಗೆ ಎಡತಾಕುವರೂ ಇದ್ದಾರೆ. ಆದರೆ ವೈದ್ಯರು ಹೇಳೋದೇ ಬೇರೆ. ಮಕ್ಕಳ ನಡೆದಾಡುವ ಕಲಿಕೆ ವಯಸ್ಸು 8 ತಿಂಗಳಿಂದ ಆರಂಭವಾಗಿ, 18 ತಿಂಗಳ ತನಕ ಮುಂದುವರಿಯುತ್ತದೆ. ಕೆಲ ಚುರುಕು ಮಕ್ಕಳು, ಪ್ರಮುಖವಾಗಿ ಹೆಣ್ಣುಮಕ್ಕಳು 8 ತಿಂಗಳಿಗೇ ನಡೆಯಲು ಶುರು ಮಾಡುತ್ತವೆ. ಗಂಡುಮಕ್ಕಳು ಸ್ವಭಾವತಃ ಚುರುಕಿನಲ್ಲಿ ಸ್ವಲ್ಪ ಮಂದವಿರುವುದರಿಂದ ನಡೆಯುವುದರಲ್ಲಿ ಕೊಂಚ ಲೇಟಾಗಬಹುದು.
ಪೋಷಕರೇ ಮಕ್ಕಳ ನಡೆದಾಡುವಿಕೆಯಲ್ಲಿ ನಿಮ್ಮ ಪಾತ್ರವೂ ಇದೆ ಎಂಬುದು ಗೊತ್ತೇ? ಎಷ್ಟೋ ತಾಯಂದಿರು ಅರಿವಿಲ್ಲದೆಯೇ ಮಕ್ಕಳಿಗೆ ನಡೆದಾಡುವುದನ್ನು ಕಲಿಸುತ್ತಿರುತ್ತಾರೆ. ಆದರೆ, ತಂದೆ ತಾಯಿ ಇಬ್ಬರೂ ಮಗುವಿನ ಈ ಚುರುಕಿನ ಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು.
ಮಕ್ಕಳ ನಡೆದಾಡುವಿಕೆ ಬಗ್ಗೆ ಇದಿಷ್ಟು ತಿಳಿದಿರಲಿ...
ಬೆನ್ನುಹುರಿ ಸ್ಟ್ರಾಂಗ್ ಆಗಲಿ...
ನಡೆದಾಡುವ ವಿಷಯಕ್ಕೆ ಬಂದರೆ ಮಕ್ಕಳ ಬೆನ್ನು ಸ್ಟ್ರಾಂಗ್ ಆಗಿರಬೇಕು. ಸ್ಟ್ರಾಂಗ್ ಆಗಬೇಕೆಂದರೆ ನೀವೇನು ಜಿಮ್‌ಗೆ ಕಳುಹಿಸುವುದು ಬೇಡ. ಆದರೆ ಮಕ್ಕಳು ಕುಳಿತಿದ್ದಾಗ ಅವು ಹೆಚ್ಚಾಗಿ ತಲೆ ಎತ್ತುವಂತೆ ಮಾಡಿ. ಅಂದರೆ ನೀವು ನಿಂತುಕೊಂಡು ತಲೆ ಎತ್ತಲು ಬೇಕಾದ ಆಮಿಷ ಒಡ್ಡಿ. ಜೊತೆಗೆ ಉತ್ತಮವಾಗಿ ಕುಳಿತುಕೊಳ್ಳುವುದಕ್ಕೆ ಬೇಕಾದ ಅಗತ್ಯ ಸಂದರ್ಭಗಳನ್ನು ರೂಪಿಸಿ.
ತೆವಳುವಾಗ ಶಕ್ತಿ ತುಂಬಿ...
ನಡೆದಾಡುವ ಹಂತಕ್ಕೂ ಮೊದಲಿನ ಪ್ರಮುಖ ಹಂತವೇ ತೆವಳುವುದು. ಈ ಹಂತದಲ್ಲಿ ಮಗುವಿನ ಈ ಅಭ್ಯಾಸಕ್ಕೆ ಬೇಕಾದ ಎಲ್ಲ ಸಹಾಯಗಳನ್ನು ಮಾಡಿ. ತೆವಳುವ ಮಗುವಿಗೆ ಮುಂದಕ್ಕೆ ಬರಲು ಬೇಕಾದ ಅವಶ್ಯಕತೆ ಪೂರೈಸಿ. ಸ್ವತಂತ್ರವಾಗಿ ನಡೆಯುವಂತೆ ಮಾಡಿ. ಎಲ್ಲಿ ಅದು ಬಿದ್ದು ಬಿಡುತ್ತದೆಯೋ ಎಂಬ ಆತಂಕ ಬೇಡ. ನೀವು ಬೀಳುವ ಮಗು, ಮತ್ತೆ ಎದ್ದು ನಡೆಯಲು ಆರಂಭಿಸುವ ಪರಿ ನೋಡಬೇಕು. ಈ ಆತ್ಮಸ್ಥೈರ್ಯ ಮುಂದಿನ ದಿನಗಳಲ್ಲಿ ಎಲ್ಲಿ ಹೋಗುತ್ತದೆಯೋ ಎಂದೆನಿಸಿಬಿಡುತ್ತದೆ.
ಶೂ ಬೇಡ
ಮನೆಯೊಳಗೆ ಕಲ್ಲು ಮುಳ್ಳೇನೂ ಇರುವುದಿಲ್ಲ ಅಲ್ಲವೇ? ಅಂದಮೇಲೆ ಅವುಗಳ ಪಾದಕ್ಕೇಕೆ ಶೂ? ನಡೆದಾಡುವ ಸಮಯದಲ್ಲಿ ಮಕ್ಕಳಿಗೆ ಮುಂದಿನ ಬೆರಳುಗಳೇ ಗ್ರಿಪ್. ಹೀಗಾಗಿ ಬರಿಗಾಲಲ್ಲಿ ನಡೆಯಲು ಬಿಡಿ. ಹೊರಗೆ ಹೋದಾಗ ಶೂಗಿಂತ ಸಾಕ್ಸ್ ತೊಡಿಸಿಕೊಂಡು ಹೋಗಿ. ದೊಡ್ಡವರಿಗೇ ಶೂಗಳು ಕಿರಿಕಿರಿ ಮಾಡುತ್ತವೆ. ಇನ್ನು ಮಕ್ಕಳಿಗೆ ಕಿರಿಕಿರಿಯಾಗುವುದಿಲ್ಲವೇ?
ನೆಲ ಮೆತ್ತಗಿರಲಿ...
ಹಾಗಂತ ನೆಲವನ್ನು ಮೆತ್ತಗೆ ಮಾಡಲು ಸಾಧ್ಯವಿಲ್ಲ. ಆದರೆ ನಡೆದಾಡುವ ಮಗು ಬಿದ್ದಾಗ ಏಟಾಗದಂತೆ ಬೇಕಾದ ವಾತಾವರಣ ಸೃಷ್ಟಿಸುವುದು ಅಗತ್ಯ. ನೆಲದ ಮೇಲೆ ಕಾರ್ಪೆಟ್ ಹಾಕಿ. ಅದರ ಮೇಲೆ ನಡೆದಾಡಲು ಬಿಡಿ.
ಚೇರ್ ಕೊಟ್ಟು ನೋಡಿ
ತಳ್ಳಬಹುದಾದ ಕೆಲ ವಸ್ತುಗಳನ್ನು ಮಕ್ಕಳಿಗೆ ಕೊಟ್ಟು ನೋಡಿ. ಅವು ಇನ್ನೂ ಚೆನ್ನಾಗಿ ಓಡಾಡುತ್ತವೆ. ಅದರಲ್ಲೂ ಭಾರವಾಗಿಲ್ಲದ ಪ್ಲಾಸ್ಟಿಕ್ ಚೇರ್‌ಗಳನ್ನು ಕೊಡಿ. ಅವನ್ನು ತಳ್ಳಿಕೊಂಡು ಓಡಾಡುತ್ತವೆ. ಈ ರೀತಿ ಮಾಡುವುದರಿಂದ ಇನ್ನೂ ಬೇಗ ಅವು ನಡೆಯುವುದನ್ನು ಕಲಿಯುತ್ತವೆ.
ವಾಕರ್ ಬಳಕೆ ಬೇಡ
ಇದು ಮಕ್ಕಳ ಮೇಲೆ ಅಡ್ಡಪರಿಣಾಮ ಉಂಟುಮಾಡುವುದೇ ಹೆಚ್ಚು ಎನ್ನುತ್ತಾರೆ ವೈದ್ಯರು. ಸುರಕ್ಷತಾ ದೃಷ್ಟಿಯಿಂದಲೂ ಇದು ಒಳ್ಳೆಯದಲ್ಲ ಎಂಬ ಕಾರಣದಿಂದಲೇ ಕೆನಡಾದಲ್ಲಿ ಇದನ್ನು ನಿಷೇಧಿಸಲಾಗಿದೆ. ಅಲ್ಲದೆ ವಾಕರ್ ಬಳಸಿದಲ್ಲಿ ರಿಸ್ಕ್ ತೆಗೆದುಕೊಳ್ಳುವುದನ್ನು ಬಿಟ್ಟು ವಾಕರ್ ಅನ್ನೇ ಅವಲಂಬಿಸಿಕೊಳ್ಳುತ್ತಾರೆ. ಹೀಗಾಗಿ ಮಕ್ಕಳು ನಡೆದಾಡಲು ಹೆಚ್ಚು ಕಾಲ ತೆಗೆದುಕೊಳ್ಳುತ್ತಾರಂತೆ.
- ಎಸ್. ಮಂಜುನಾಥ್