ಬಾಗಿಲ ಭಟ್ಟರು!

ಬಾಗಿಲ ಭಟ್ಟರು!
Updated on: 

ಮನೆಯ ಗೋಡೆ ಎಷ್ಟೇ ಚಿತ್ತಾಕರ್ಷಕವಿರಲಿ ಮೊದಲು ಸೆಳೆಯುವುದು ಪ್ರವೇಶದ್ವಾರದ ಚೌಕಟ್ಟು ಹಾಗೂ ಬಾಗಿಲು. ಕೆಲವರಿಗೆ ಬಾಗಿಲಲ್ಲಿ ಲಕ್ಷ್ಮಿಯ ಕೆತ್ತನೆ ಬೇಕು. ಇನ್ನೂ ಕೆಲವರಿಗೆ ಕುಲದೇವರು ಶಿವ ಪಾರ್ವತಿಯೊಂದಿಗೆ ಬಾಗಿಲಿನಲ್ಲಿ ಆಸಿನ ಆಗಿರಬೇಕು. ಸುಂದರ ಕಲಾತ್ಮಕ ಶಂಖದ ಕೆತ್ತನೆ ಬೇಕು ಎಂಬವರೂ ಇದ್ದಾರೆ. ಇಂಥವರಿಗೆಲ್ಲ ಬೇಕಾದ ಮನೆ ಬಾಗಿಲು, ಕಿಟಕಿ ಅದರ ಚೌಕಟ್ಟುಗಳನ್ನು ಮಾಡುವುದರಲ್ಲಿ ಸಿದ್ಧಹಸ್ತರು ಕೊಂಕಣಾಜೆ ಶಂಕರನಾರಾಯಣ ಭಟ್ಟರು.

ಆತ್ಮೀಯರಿಗೆ ಇವರು ರಮೇಶಣ್ಣ ಎಂದೇ ಪರಿಚಿತರು. ಇವರ ಮನೆ ಬೆಳ್ತಂಗಡಿ ತಾಲೂಕಿನ ವೇಣೂರಿಗೆ ಸನಿಹದ ಕುಕ್ಕೇಡಿ ಗ್ರಾಮದಲ್ಲಿದೆ. ರಮೇಶಣ್ಣನಿಗೆ ಯಾವುದೇ ಕಲಾಗುರುಗಳಿಲ್ಲ. ಚಿಕ್ಕ ವಯಸ್ಸಿನಲ್ಲಿ ಬಣ್ಣದ ಚಿಟ್ಟೆಯನ್ನು ಕೈಯಲ್ಲಿ ಹಿಡಿದು ನೋಡುತ್ತ ಅದರ ಪ್ರತಿಕೃತಿಯನ್ನು ರಚಿಸುವಲ್ಲಿಂದ ಆರಂಭವಾದ ಅವರ ಚಿತ್ರಯಾತ್ರೆ, ಮರದಿಂದ ದೋಣಿ, ಆಮೆ ಇತ್ಯಾದಿ ಪ್ರತಿಕೃತಿಗಳನ್ನು ತಯಾರಿಸುತ್ತ ಮುಂದೆ ಸಾಗಿತು. ಈಗಲೂ ಅದು ಮುಂದುವರಿಯುತ್ತಲೇ ಇದೆ.
ದಶಕದ ಹಿಂದೆ ರಾಘವೇಶ್ವರ ಭಾರತೀ ಸ್ವಾಮಿಗಳಿಗಾಗಿ ಇವರು ತಯಾರಿಸಿಕೊಟ್ಟ ವಿಶಿಷ್ಟ ಸಿಂಹಾಸನವನ್ನು ಬೇಕಿದ್ದರೆ ಒಂದೂವರೆ ಅಡಿ ಎತ್ತರಿಸಬಹುದಿತ್ತು. ಇದನ್ನು ಸ್ವಾಮೀಜಿ ಮೆಚ್ಚಿ, ಕಲಾತ್ಮಕ ಬಾಗಿಲುಗಳ ರಚನೆಗೆ ಮುಂದಾಗಲು ಹೇಳಿ ಹರಸಿದರಂತೆ.

ಬಳಿಕ ರಮೇಶಣ್ಣ ಈ ಕಲಾಸಾಧನಾ ಹಾದಿಯಲ್ಲಿ ಪಯಣಿಸತೊಡಗಿದರು. ಹತ್ತು ವರ್ಷದ ಹಿಂದೆ ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನದ ಬಾಗಿಲು ಅವರ ಮೊದಲ ಸೃಷ್ಟಿ. ಇದರಲ್ಲಿ ಶಂಕರಾಚಾರ್ಯರ ಅಪೂರ್ವ ಕೆತ್ತನೆಗಳುಂಟು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅಲ್ಲದೆ ಬೆಂಗಳೂರಿನಲ್ಲೂ ಅನೇಕ ಮನೆಗಳ ಬಾಗಿಲಿಗೆ ಚೌಕಟ್ಟು ಹಾಕಿದ್ದಾರೆ. ದೇವರ ಕೋಣೆಗಳಿಗೆ ವಿಭಿನ್ನ ಶೈಲಿಯ ದ್ವಾರಗಳನ್ನೂ ಅವರು ನಿರ್ಮಿಸಿದ್ದಾರೆ. ದೇವರ ಮಂಟಪಗಳಿಗೆ ಕೆತ್ತನೆಯ ಶೋಭೆ ನೀಡಿದ್ದಾರೆ. ಇಡೀ ಮನೆಯ ಬಾಗಿಲು ಕಿಟಕಿಗಳನ್ನೂ ಅವರೇ ಮಾಡಿಕೊಟ್ಟಿದ್ದುಂಟು.

ಭಟ್ಟರು ತಯಾರಿಸುವ ಬಾಗಿಲುಗಳ ಅಳತೆ 7 ಅಡಿ ಎತ್ತರ, 4 ಅಡಿ ಅಗಲವಿರುತ್ತದೆ. ಹಲಸು ಮತ್ತು ತೇಗದ ಮರವನ್ನೇ ಬಳಸುತ್ತಾರೆ. ಆದರೂ ಆರ್ಥಿಕವಾಗಿ ಅಶಕ್ತರಾದವರಿಗೆ ಮಾವು ಅಥವಾ ಅಕೇಶಿಯ ಮರದ ಬಳಕೆ ಮಾಡಲಾಗುತ್ತದೆ. ಒಂದು ಬಾಗಿಲು ಮತ್ತು ಅದರ ಚೌಕಟ್ಟು ರಚನೆಗೆ ಅವರ ಸ್ವತಃ ದುಡಿಮೆಯೊಂದಿಗೆ ಒಬ್ಬ ಸಹಾಯಕನೂ ನೆರವಾದರೆ 25ರಿಂದ 30 ದಿನಗಳು ಬೇಕು. ಎಲ್ಲ ಸೇರಿ ರು. 65 ಸಾವಿರ ವೆಚ್ಚವಾಗುತ್ತದೆ. ಆದರೂ ಜನ ಗೊಣಗುವುದಿಲ್ಲ. ತೃಪ್ತಿಕರವಾದ ಕೆಲಸಕ್ಕೆ ಈ ಬೆಲೆ ಕಡಿಮೆಯೇ ಎನ್ನುತ್ತಾರೆ ಅವರು.
ಇದು ತುಂಬ ಸೂಕ್ಷ್ಮ ಕೆಲಸ. ಈ ಕಲಾವಿದ, ಕಿರುಬೆರಳಿನ ಗಾತ್ರದಿಂದ ಆರಂಭಿಸಿ ವಿವಿಧ ಕೆತ್ತನೆಗಳಿಗೆ 60ಕ್ಕಿಂತ ಹೆಚ್ಚು ಬಗೆಯ ಉಳಿಗಳನ್ನು ಬಳಸಬೇಕು. ಗಜಲಕ್ಷ್ಮಿ, ತಂಬೂರಿ ನುಡಿಸುವ ನಾರಿಯರು ಮುಂತಾದ ಚಿತ್ರಗಳನ್ನು ರೂಪಿಸುವಾಗ ಪ್ರಾಚೀನ ಶಿಲ್ಪಕೃತಿಗಳ ರಚನೆಗಳನ್ನೂ ಗಮನಿಸಬೇಕಾಗುತ್ತದೆ.

ಆದರೆ, ದುರ್ದೈವದ ಸಂಗತಿಯೆಂದರೆ ಕೆಲವು ತಿಂಗಳುಗಳ ಹಿಂದೆ ಅಪಘಾತದಲ್ಲಿ ದುಡಿಯುವ ಶಕ್ತಿಯನ್ನೇ ಕಳೆದುಕೊಂಡ ಈ ಕಲಾವಿದನಿಗೆ ಚಿಕಿತ್ಸೆ ನಡೆಯುತ್ತಿದೆ. ಹೀಗಾಗಿ ಮೊದಲಿನಂತಾಗುವ ಭರವಸೆ ಅವರ ಕಂಗಳಲ್ಲಿದೆ.
ಯಾರಿಗೆ ಹೇಗೆ ಬೇಕೋ ಅದೇ ರೀತಿಯ ಬಾಗಿಲುಗಳನ್ನು ತಯಾರಿಸುವ ಕಲೆ ಈ ಕಲಾವಿದನಿಗೆ ಒಲಿದುಬಂದಿದ್ದು, ನಿಮಗೂ ಬಾಗಿಲಲ್ಲಿ ಇಂಥ ವಿನ್ಯಾಸ ಬೇಕಿದ್ದರೆ ಹಲೋ ಹೇಳಿ, ಮೊ. 9611826216.

- ಪ. ರಾಮಕೃಷ್ಣ ಶಾಸ್ತ್ರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com