

ಮನೆಯೊಂದನ್ನು ಕಟ್ಟಿದಾಗ ಅದರ ಪ್ರವೇಶ ದ್ವಾರದಲ್ಲಿ ಚೆಂದವಾಗಿ ಹೂ ಬಿಡುವ ಬಳ್ಳಿಗಳನ್ನು ಹಬ್ಬಿಸುವ ವಾಡಿಕೆ ಎಲ್ಲೆಡೆ ಇದೆ. ಇದರ ನಡುವೆ ಇಲ್ಲೊಬ್ಬರು ಅಮೃತ ಬಳ್ಳಿಯನ್ನು ಸ್ವಾಗತ ಬಾಗಿಲಲ್ಲಿ ಹರಡಿಸಿ ತಾರಸಿಯ ಮೇಲೆ ಹಸಿರಿನ ಹಾಸಿಗೆ ಹಾಸಲು ಸನ್ನದ್ಧರಾಗಿದ್ದಾರೆ.
ಮೂರು ಸಾವಿರ ಚದರಡಿಯಿರುವ ಮನೆಯ ಗೋಡೆಯ ಸುತ್ತಲೂ ಈ ಬಳ್ಳಿ ದಟ್ಟವಾಗಿ ಹರಡಿದೆ. ಬಾಗಿಲ ಬಳಿ ಮೇಲೇರುತ್ತಿದೆ. ಇನ್ನೊಂದು ವರ್ಷ ಕಳೆದರೆ ತಾರಸಿಯನ್ನು ಆವರಿಸಿ ಇಡೀ ಮನೆಯನ್ನೇ ತಂಪಾಗಿಡಲಿದೆ.
ಅಮೃತಬಳ್ಳಿ ಆಯುರ್ವೇದದಲ್ಲಿ ಹಲವಾರು ಔಷಧೀಯ ಉಪಯೋಗಗಳನ್ನು ಹೇಳಿರುವ ಸಸ್ಯ. ಜ್ವರ ನಿವಾರಿಸುವ ಅಮೃತಾರಿಷ್ಠ ಅದರಿಂದ ತಯಾರಾಗುತ್ತದೆ. ಬೆಳ್ತಂಗಡಿ ತಾಲೂಕಿನ ಪಣಕಜೆ ಬಳಿ ಇರುವ ಪಾಲು ಸುಬ್ರಹ್ಮಣ್ಯ ಭಟ್ಟರು ಎರಡು ವರ್ಷಗಳ ಹಿಂದೆ ಮನೆಯ ಹಿಂಬದಿಯ ಗೋಡೆ ಬಳಿ ಗೇಣುದ್ದದ ಬಳ್ಳಿ ನೆಟ್ಟು ಊಟ ಮಾಡಿ ಕೈ ತೊಳೆದ ನೀರು ಅದರ ಬುಡಕ್ಕೆ ಹರಿಯುವಂತೆ ಮಾಡಿದರು.
ಅಷ್ಟೇ ಪೋಷಕಾಂಶ ಅದಕ್ಕೆ ಸಾಕಾಯಿತು. ಅಗಲವಾದ ಎಲೆಗಳನ್ನು ಹರಡಿ ದಪ್ಪವಾದ ಬಳ್ಳಿ ಶಾಖೆಗಳನ್ನು ಹರಡುತ್ತ ಮನೆಗೆ ಪ್ರದಕ್ಷಿಣೆ ಬಂದು ತಾರಸಿಗೇರಿದೆ. ಮುಂದಿನ ವರ್ಷ ತಾರಸಿಗೆ ಹಾಸಿಗೆಯಾಗುತ್ತದೆ ಎನ್ನುತ್ತಾರೆ ಭಟ್ಟರು. ಇದು ವಾತಾವರಣದಲ್ಲಿರುವ ವಿಷವನ್ನು ಶುದ್ಧೀಕರಿಸಿ ಒಳ್ಳೆಯ ಗಾಳಿಯನ್ನು ಕೊಡಬಲ್ಲುದು. ಮನೆಯೊಳಗೆ ಸೊಳ್ಳೆ ಬರುವುದಿಲ್ಲ. ಸದಾ ತಂಪಾಗಿರುತ್ತದೆಂಬ ವಿವರಣೆ ಅವರದು.
ಔಷಧ ತಯಾರಕರಿಗೆ ಮಾರಿದರೆ ಸಾವಿರಾರು ರುಪಾಯಿ ಬರಬಹುದು. ಆದರೆ ಭಟ್ಟರು ಅದರಿಂದ ಒಂದು ಕಡ್ಡಿಯನ್ನೂ ಕೀಳದೆ ಗೃಹಾಲಂಕಾರಕ್ಕೆ ಬಳಸಿಕೊಂಡಿದ್ದಾರೆ.
- ಪ.ರಾಮಕೃಷ್ಣ ಶಾಸ್ತ್ರಿ