

ಮನೆಯಂಗಳದ ಕೈದೋಟದಲ್ಲಿ ಕುಳಿತು ಒಂದು ಕಪ್ ಕಾಫಿ ಹೀರಿದರೆ ಒತ್ತಡ, ಜಂಜಾಟಗಳೆಲ್ಲ ಮಾಯ. ಜೊತೆಗೆ ಒಂದಿಷ್ಟು ಹೊಸ ಉಲ್ಲಾಸ. ಆದರೆ, ಇಂಥ ಆಸ್ವಾದ ಕಾಂಕ್ರೀಟ್ ಕಾಡುಗಳಲ್ಲಿ ಸಿಗುವುದು ಅಪರೂಪ. ಹೀಗಿರುವಾಗ ಇನ್ನು ಹಸಿರು ಕೈದೋಟ ಎಲ್ಲಿ? ಬೆಂಗಳೂರು, ಹೈದರಾಬಾದ್, ಮುಂಬೈನಂಥ ಮೆಟ್ರೊ ನಗರಗಳಲ್ಲಿ ವಾಸಿಸುವವರನ್ನು ಸೆಳೆಯುತ್ತಿದ್ದ ಮನೆಯಂಗಳದ ಕೈ ತೋಟಗಳು ಈಗ 2ನೇ ದರ್ಜೆ ನಗರಗಳಾದ ಬೆಳಗಾವಿ, ಧಾರವಾಡ-ಹುಬ್ಬಳ್ಳಿ, ಮೈಸೂರುಗಳ ಜನರನ್ನು ಆಕರ್ಷಿಸುತ್ತಿವೆ.
ಇತ್ತೀಚೆಗೆ ಧಾರವಾಡದ ಕೃಷಿ ವಿವಿಯಲ್ಲಿ ಮುಕ್ತಾಯಗೊಂಡ ಕೃಷಿ ಮೇಳದಲ್ಲಿ 'ನೇಚರ್ಫಸ್ಟ್' ಸಂಸ್ಥೆ ಮನೆಯಲ್ಲೇ ಆಕರ್ಷಣೀಯ ಉದ್ಯಾನವನ ನಿರ್ಮಿಸಿಕೊಡುವ ಕುರಿತು ನಗರ ವಾಸಿಗಳ ಗಮನ ಸೆಳೆಯಿತು.
ಈ ಹಿಂದಿನ ವರ್ಷಗಳಲ್ಲಿ ಕೃಷಿ ಮೇಳವು ರೈತಾಪಿ ಜನರ ಬದುಕು ಹಸನು ಮಾಡಲು ತನ್ನ ಕಾರ್ಯಚಟುವಟಿಕೆ ಹಮ್ಮಿಕೊಳ್ಳುತ್ತಿತ್ತು. ಆದರೆ, ಪ್ರಸ್ತುತ ವರ್ಷ ರೈತರ ಜೊತೆ ಜೊತೆಗೆ ನಗರವಾಸಿಗಳ ಆಕರ್ಷಣೆಗೂ ತುಸು ಒತ್ತು ನೀಡಿತು. ಸ್ವಂತ ಮನೆಯುಳ್ಳವರು ತಮ್ಮ ಮನೆಯಲ್ಲಿ ಹುಲ್ಲಿನ ಹೊದಿಕೆ, ಹಸಿರು ಮಾಳಿಗೆ ಹಾಗೂ ವೈವಿಧ್ಯಮಯ ಗಿಡ ಹಾಗೂ ಸಸಿಗಳನ್ನು ನೆಡಬಹುದು. ಇದಲ್ಲದೆ, ಸಣ್ಣ ಕಾಂಪೌಂಡ್ ಸಹ ನಿರ್ಮಿಸಿಕೊಳ್ಳಲು ಸಾಧ್ಯ ಎಂಬುದನ್ನು ಇಲ್ಲಿ ತೋರಿಸಲಾಯಿತು.
ಪರಿಸರದ ಹತ್ತಿರ
ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಮೈಸೂರು, ಶಿವಮೊಗ್ಗದಂಥ ನಗರಗಳಲ್ಲಿ ವಾಸಿಸುವರೂ ಈ ಆಕರ್ಷಣೀಯ ಉದ್ಯಾನವನಕ್ಕೆ ಮಾರು ಹೋಗುತ್ತಿದ್ದಾರೆ. ಅದು ಅಲ್ಲದೆ, ಈ ಪ್ರದೇಶದಲ್ಲಿಯೂ ಹೆಚ್ಚು ಹಸಿರು ವ್ಯಾಪಿಸಿದೆ. ಇದು ಕೂಡ ಜನರಿಗೆ ಹೆಚ್ಚು ಮೆಚ್ಚುಗೆಯಾಗಬಲ್ಲದು. ಈಗಾಗಲೇ ಕೈಗಾ ಅಣುಸ್ಥಾವರ ಘಟಕ, ಟಾಟಾ ಮಾರ್ಕೊಪೋಲೋ, ಟೆಲಕಾನ್ ಇನ್ನಿತರ ಬೃಹದಾಕಾರದ ಕಂಪನಿಗಳಲ್ಲಿ ಲ್ಯಾಂಡ್ಸ್ಕೇಪಿಂಗ್ ಮಾಡಲಾಗಿದೆ.
ಇನ್ನೊಂದು ಹೆಜ್ಜೆ ಮುಂದೆ ಹೋಗಿ 5 ಸೆನ್ಸಸ್ ಉದ್ಯಾನವನವನ್ನು ಮನೆಯಂಗಳದಲ್ಲಿ ಹಾಗೂ ಚಾವಣಿಗಳಲ್ಲಿ ನಿರ್ಮಿಸಲಾಗುತ್ತಿದೆ. ಈ ಕಲ್ಪನೆ ಪಂಚತಾರಾ ಹೋಟೆಲ್ಗಳಲ್ಲಿ ಹಾಗೂ ಬಂಗ್ಲೋಗಳಲ್ಲಿ ಈ ಹಿಂದೆ ಕಾಣಬಹುದಿತ್ತು. ಆದರೆ, ಪ್ರಸ್ತುತ ಈ ಕಲ್ಪನೆಯನ್ನು 6್ಢ10 ವಿಸ್ತೀರ್ಣದ ಮನೆಯಂಗಳ ಜಾಗದಲ್ಲೂ ಸೃಷ್ಟಿಸಬಹುದು ಎನ್ನುತ್ತಾರೆ ನೇಚರ್ ಫಸ್ಟ್ನ ಪ್ರತಿನಿಧಿ ಪಿ.ವಿ. ಹಿರೇಮಠ.
5 ಸೆನ್ಸಸ್ ಉದ್ಯಾನವನದಲ್ಲಿ ಬೇಕಾದ ಹೂ, ಔಷಧ ಸಸ್ಯಗಳು, ಅಲಂಕಾರಿಕ ಹೂವಿನ ಗಿಡಗಳು, ಕೃತಕ ನೀರಿನ ಝರಿ, ವಾಕ್ಪಾತ್, ಗುಬ್ಬಿಯ ಗೂಡುಗಳನ್ನು ಮನೆಯಲ್ಲೇ ಸೃಷ್ಟಿಸಬಹುದು. ಇದಲ್ಲದೆ, ಇಚ್ಛಿಸುವವರು ತಮ್ಮ ಮನೆಯ ಮಾಳಿಗೆ ಮೇಲೆ ತರಕಾರಿ ಗಿಡಗಳನ್ನು ಬೆಳೆಸಬಹುದು. ಮನೆಯಲ್ಲಿ ಲಭ್ಯವಿರುವ ಸ್ಥಳದ ಅನುಕೂಲಕ್ಕೆ ತಕ್ಕಂತೆ ಈ ಉದ್ಯಾನವನವನ್ನು ನಿರ್ಮಿಸಿಕೊಳ್ಳಬಹುದು. ಈ ರೀತಿಯ ಕೈದೋಟವನ್ನು ನೀವೂ ನಿರ್ಮಿಸಿಕೊಳ್ಳಬೇಕಾದರೆ ನೇಚರ್ ಫಸ್ಟನ್ ಪ್ರತಿನಿಧಿಯನ್ನು (ಮೊ.80958 15000) ಸಂಪರ್ಕಿಸಬಹುದು.
- ಬಸವರಾಜ ಹಿರೇಮಠ