ರಟ್ಟಾಯ್ತು ಗುಟ್ಟು!

ರಟ್ಟಾಯ್ತು ಗುಟ್ಟು!
Updated on: 

'ಅಯ್ಯೋ ಮಾರಾಯ್ತಿ ಇನ್ನೂ ಎಷ್ಟು ಹೊತ್ತು ಕಾಯ್ಬೇಕು ನಾನು? ನನ್ನ ಇಡೀ ಜೀವನ ಹೀಗ್ ಕಾಯೋದ್ರಲ್ಲೇ ಮುಗಿದ್ಹೋಗುತ್ತೋ ಏನೋ? ನಾವು ಹೋಗ್ತಿರೋದು ನಮ್ ಮಗಳಿಗೆ ಗಂಡು ಕೇಳೋಕೆ, ನಿನಗಲ್ಲ! ಅಷ್ಟು ದೊಡ್ಡ ಕನ್ನಡಿ ತಂದಿಟ್ಟಿದ್ದು ನನ್‌ತಪ್ಪು. ನಿನ್ನ ಬೈದು ಏನ್ ಪ್ರಯೋಜನ?'
'ಸಾಕು ಸುಮ್ನಿರಿ, ಬೀಗರ ಮನೆಯವ್ರ ಮುಂದೆ ಡಲ್ ಆಗಿ ಇರೋಕಾಗುತ್ತಾ? ನಿಮ್‌ಹೆಂಡ್ತಿ ಚೆನ್ನಾಗಿ ಕಾಣೋದು ನಿಮ್ಗೆ ಇಷ್ಟ ಇಲ್ವಾ? ಮದುವೆ ಮಾಡ್ಕೊಂಡಾಗಿಂದನೂ ಇದೇ ಆಗೋಯ್ತು. ಒಂದಿನಕ್ಕೂ ಚೆನ್ನಾಗ್ ಕಾಣ್ತಿದ್ದೀಯಾ ಅನ್ನೋ ಮಾತು ಅಪ್ಪಿ ತಪ್ಪಿಯೂ ನಿಮ್ಮ ಬಾಯಿಯಿಂದ ಬಂದಿಲ್ಲ'
ಪ್ರತಿದಿನ ಒಂದಿಲ್ಲೊಂದು ಮನೆಯಲ್ಲಿ ಕೇಳಿ ಬರೋ ಮಾತುಗಳೇ ಇವು. ಕನ್ನಡಿಯ ಮುಂದೆ ಹೆಣ್ಣು ನಿಂತರೆ ಸಮಯದ ಅರಿವೇ ಇರುವುದಿಲ್ಲ ಎನ್ನುವುದು ಲೋಕಾರೂಢಿ ಮಾತು. ಸುಂದರವಾಗಿ ಕಾಣಲು ಆಕೆ ಸಾಧ್ಯವಾದಷ್ಟು ಹೊತ್ತು ಕನ್ನಡಿಯನ್ನೇ ಜತೆಗಾರನನ್ನಾಗಿ ಮಾಡಿಕೊಳ್ಳುವುದಂತೂ ಸತ್ಯ. ಅಲ್ಲದೇ  ಹೆಣ್ಣನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿ ರೆಡಿಯಾಗಲು ಆಕೆಗೆ ಬೇಕಾಗುವ ಎಲ್ಲಾ ಸಲಕರಣೆಗಳನ್ನು ಕೊಟ್ಟು ಕನ್ನಡಿಯನ್ನು ಕೊಡದೇ ಇದ್ದರೆ ಆಕೆಯ ಮನಸ್ಸು ಪರಿತಪಿಸುತ್ತದೆಯಂತೆ. ಇದು ಬರಿಯ ಆರೋಪವೊ, ಸತ್ಯವೋ ಬಲ್ಲವರೇ ಹೇಳಬೇಕು.
ಇನ್ನು ಶಾಲೆ ಕಾಲೇಜಿಗೆ ಹೋಗೋ ಹದಿಹರೆಯ ವಯಸ್ಸಿನ ಹುಡುಗಿಯರೇನಾದರೂ ಕನ್ನಡಿಯ ಮುಂದೆ ನಿಂತರೆ ಅದನ್ನು ಮೊದಲು ಗಮನಿಸುವುದು ಆಕೆಯ ತಾಯಿ. ಕನ್ನಡಿಯಲ್ಲಿ ತನ್ನನ್ನು ನೋಡಿ ಸಣ್ಣದಾಗಿ ನಗುವುದು, ಸರಿಯಿರುವ ಕೂದಲನ್ನು ಬಾಚುತ್ತಲೇ ಇರುವುದು, ತೊಟ್ಟ ಉಡುಗೆಯನ್ನು ಎಲ್ಲ ಆಯಾಮಗಳಿಂದ ಪದೇ ಪದೆ ನೋಡಿಕೊಳ್ಳುವುದುಂಟು. ತನ್ನ ಸೌಂದರ್ಯದ ಆರಾಧನೆಯಲ್ಲಿ ಮುಳುಗಿದ ಹುಡುಗಿಗೆ ತಾಯಿಯ ಒಂದು ಕಣ್ಣು ತನ್ನನ್ನು ಹಿಂಬಾಲಿಸುತ್ತಿರುವುದು ಗೊತ್ತೇ ಆಗುವುದಿಲ್ಲ. ಇದನ್ನೆಲ್ಲಾ ಗಮನಿಸಿದ ತಾಯಿಗೆ ಮಗಳ ಮೇಲೆ ಸಣ್ಣದಾಗಿ ಅನುಮಾನ ಮೊಳಕೆಯೊಡೆಯಲು ಶುರುವಾಗಿರುತ್ತದೆ. ವಯಸ್ಸಿನಲ್ಲಿ ಆಕೆಯೂ ಕನ್ನಡಿಯ ಮುಂದೆ ನಿಂತು ಕಾಡಿಗೆಯಿಂದ ಹುಬ್ಬು ತೀಡಿದ್ದನ್ನು ಮರೆತುಬಿಟ್ಟಿರುತ್ತಾಳೆ.  ಕೆಲಸಕ್ಕೆಂದು ಹೊರಹೋಗುವ ಮಹಿಳೆಯರು ಚೆನ್ನಾಗಿ ರೆಡಿಯಾದರೆ ಸಾಕು, ಕೆಲವು ಗಂಡಂದಿರಿಗೆ ಅನುಮಾನ ಹೊಗೆಯಾಡಲು ಆರಂಭವಾಗುತ್ತದೆ. ಇನ್ನು ಕೆಲವರು ಹೆಂಗಸರೆಂದರೆ ಇದು ಸಾಮಾನ್ಯ ಎಂದುಕೊಂಡು ಸುಮ್ಮನಾಗುತ್ತಾರೆ. 'ನನ್ನ ಹೆಂಡತಿ ಎಷ್ಟು ಚೆಂದಕ್ಕೆ ರೆಡಿಯಾಗಿದ್ದಾಳೆ, ಇವಳು ಹೀಗೆ ಕಾಣುವುದೇ ನನಗೆ ಇಷ್ಟ'  ಎನ್ನುವ ಗಂಡಂದಿರೂ ಇರುತ್ತಾರೆ.
ಹೆಣ್ಣು ಸೌಂದರ್ಯ ಪ್ರಿಯೆ. ಮನೆಯಲ್ಲೇ ಇದ್ದರೂ ನೀಟಾಗಿ ರೆಡಿಯಾಗಿರಬೇಕೆಂದು ಬಯಸುತ್ತಾಳೆ. ಇನ್ನು ಮದುವೆ, ನಾಮಕರಣ, ಸಮಾರಂಭಗಳು, ಚಿಕ್ಕದಾದ ಪಾರ್ಟಿಯಾದರೂ ಸರಿ ವಾರದ ಮುಂಚಿನಿಂದಲೇ ತಯಾರಿ ನಡೆಸುತ್ತಾಳೆ. ಉಡುವ ಸೀರೆ ಅಥವಾ ಡ್ರೆಸ್, ಅದಕ್ಕೊಪ್ಪುವ ಆಭರಣ, ಸ್ಯಾಂಡಲ್, ಕೂದಲಿನ ವಿನ್ಯಾಸ, ಕಡೆಗೆ ಬಿಂದಿಯನ್ನೂ ಹೊಂದಿಸಿ ಇಡುತ್ತಾಳೆ. ಅಷ್ಟಕ್ಕೂ ಹೆಣ್ಣು ತನ್ನ ಸೌಂದರ್ಯದ ಕಡೆಗೆ ಇಷ್ಟೊಂದು ಗಮನ ಕೊಡುವುದಾದರೂ ಯಾಕೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಆದರೆ ಹೆಣ್ಣಿನ ಇಂತಹ ಸೌಂದರ್ಯ ಪ್ರಜ್ಞೆಗೆ ಹಲವರು ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. 'ನಮಗೊತ್ತಿಲ್ವಾ, ಹುಡುಗೀರು ಅಷ್ಟು ರೆಡಿಯಾಗಿ ಬರೋದೇ ನಮ್ಮಂಥ ಕಾಲೇಜು ಹುಡುಗರು ನೋಡ್ಲಿ ಅಂತಾ, ಒಟ್ನಲ್ಲಿ ನಮ್ ಗಮನ ಸದಾ ಅವ್ರ ಕಡೆಗೆ ಇರಬೇಕು ಅನ್ನೋದು ಆಸೆ. ಅದಕ್ಕೇ ಹೀಗೆಲ್ಲಾ ಸರ್ಕಸ್ ಮಾಡ್ತಾರೆ' ಅನ್ನೋದು ವಯಸ್ಸಿನ ಹುಡುಗರ ಅಭಿಪ್ರಾಯ. ಇನ್ನು ಹಿರಿಯರು, ಅದರಲ್ಲೂ ಅಜ್ಜಂದಿರು, 'ಅಯ್ಯೋ, ನನ್ನ ಮೊಮ್ಮಗಳು ಕನ್ನಡಿ ಮುಂದೆ ನಿಂತ್ರೆ ಮುಗಿದೇ ಹೋಯ್ತು, ನನ್ನ ಮಾತು ಕಿವಿಗೇ ಬೀಳಲ್ಲ, ಅದೇನು ರೆಡಿಯಾಗೋ ಆಟವೋ?' ಎಂದು ಗೊಣಗುತ್ತಾರೆ. ಆದರೆ ಸಂಶೋಧನೆಯೊಂದು ಹೇಳುವ ಸಂಗತಿಯೇ ಬೇರೆ. ಹೆಣ್ಣು ಮತ್ತೊಬ್ಬ ಹೆಣ್ಣನ್ನು ಮೆಚ್ಚಿಸೋದಕ್ಕಾಗಿ ಅಷ್ಟೊಂದು ಮುತುವರ್ಜಿ ವಹಿಸಿ ಅಲಂಕಾರ ಮಾಡಿಕೊಳ್ಳುತ್ತಾಳಂತೆ! ಹೌದು. ಮಹಿಳೆಯರ ಗುಂಪಲ್ಲಿ ತಾನು ಎಲ್ಲರಿಗಿಂತ ಸುಂದರವಾಗಿ ಕಾಣಬೇಕೆಂದು ಆಕೆ ಇಷ್ಟಪಡುತ್ತಾಳೆ. ಮೆಚ್ಚುಗೆ ವಿಷಯಕ್ಕೆ ಬಂದರೂ ಕೂಡ ಹೆಣ್ಣು ಮತ್ತೊಬ್ಬ ಹೆಣ್ಣಿಗೆ ಸವಾಲಾಗಿ ನಿಲ್ಲುತ್ತಾಳೆ. ಹಾಗಾಗಿ ಪ್ರತೀ ಬಾರಿಯೂ ಹೊಸತನ್ನು ಪ್ರಯತ್ನಿಸುತ್ತಾಳೆ!

- ಕೋಕಿಲ ಎಂ ಎಸ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com