

ಕಾಲ್ಗೆಜ್ಜೆ ಎಂದಾಕ್ಷಣ ಮೊದಲು ನೆನಪಿಗೆ ಬರುವುದು ಅದರ ಝಣಝಣ ನಿನಾದ. ಈ ಸದ್ದಿಗೆ ಮರುಳಾಗದವಿರಿಲ್ಲ, ಮಾರುಹೋಗದೇ ಇರುವವರಿಲ್ಲ, ಕಾಲ್ಗೆಜ್ಜೆಯ ಸಪ್ಪಳವನ್ನು ಬಣ್ಣಿಸದ ಕವಿಗಳಿಲ್ಲ... ಆ ಗೆಜ್ಜೆಯ ಕಿಂಕಿಣಿಯ ಧ್ವನಿಯೇ ಅಂಥದ್ದು.
ಹಬ್ಬ ಹರಿದಿನಗಳಲ್ಲಿ ಹೆಣ್ಮಕ್ಕಳು ಗೆಜ್ಜೆ ಹಾಕಿಕೊಂಡು ಅತ್ತಿತ್ತ ಓಡಾಡಿದರೆ ಎಂಥ ಮೆರುಗು. ಹಾಡು, ನೃತ್ಯವಲ್ಲದೇ ಅನೇಕ ಕರಕುಶಲ ವಸ್ತುಗಳ ತಯಾರಿಕೆಯಲ್ಲೂ ಗೆಜ್ಜೆಯ ಬಳಕೆ ಇದೆ. ಭರತನಾಟ್ಯ ಮುಂತಾದ ನೃತ್ಯಗಳಲ್ಲಂತೂ ಗೆಜ್ಜೆಯ ಪಾತ್ರ ಹಿರಿದು. ಅಲ್ಲಿ ಹೆಣ್ಣು ಗಂಡೆಂಬ ಬೇಧವಿಲ್ಲದೆ ಎಲ್ಲರೂ ಗೆಜ್ಜೆ ಕಟ್ಟಿ ಕುಣಿಯಲೇಬೇಕು. ತಾಳಕ್ಕೆ ತಕ್ಕಂತೆ ಅವರು ಹೆಜ್ಜೆ ಹಾಕಿದರೆ, ಹೆಜ್ಜೆಗೆ ತಕ್ಕಂತೆ ಗೆಜ್ಜೆ ತನ್ನ ಸಪ್ಪಳವನ್ನು ಮುಂದುವರಿಸುತ್ತದೆ. ಹೆಣ್ಣಿನ ಹನ್ನೆರಡು ಅಲಂಕಾರಗಳಲ್ಲಿ ಕಾಲ್ಗೆಜ್ಜೆಯೂ ಒಂದು. ಅದು ಸ್ತ್ರೀ ಸೌಂದರ್ಯ ಹೆಚ್ಚಿಸುವ ಸಾಧನ. ಹೆಣ್ಣು ಎಂದರೆ ಕಾಲಿಗೆ ಗೆಜ್ಜೆ ಇರಬೇಕು ಎನ್ನುವಷ್ಟು ಹೆಜ್ಜೆ ಗೆಜ್ಜೆಯ ನಂಟು. ಕೆಲವು ಪರಿವಾರಗಳಲ್ಲಂತೂ ಮದುವೆಯಾದ ಹೆಣ್ಣುಮಗಳು ಕಾಲ್ಗೆಜ್ಜೆ ಹಾಕದೇ ಮನೆಹೊರಗೆ ಕಾಲಿಡುವುದೇ ನಿಷಿದ್ಧ. ಅದಿದ್ದರೆ ಹೆಣ್ಣಿಗೆ ಒಂದು ರೀತಿಯ ರಕ್ಷಣೆ ಎಂಬ ಭಾವನೆ ಇತ್ತು. ಮನೆಯ ಸದಸ್ಯರು ನಿಷ್ಕಾಳಜಿಯಿಂದ ಕೂತು ಹರಟೆ ಹೊಡೆಯುತ್ತಿರುವ ಸಂದರ್ಭದಲ್ಲಿ ಮನೆಯಲ್ಲಿನ ಮಹಿಳೆಯ ಗೆಜ್ಜೆ ಸಪ್ಪಳ ಕೇಳಿತೆಂದರೆ ಎಲ್ಲರೂ ಗಂಭೀರವಾಗಿ ಕೂತು ಬರುವ ಮಹಿಳೆಯನ್ನು ಸ್ವಾಗತಿಸುತ್ತಿದ್ದರು. ಅಷ್ಟಿತ್ತು ಕಾಲ್ಗೆಜ್ಜೆಯ ಮಹತ್ವ.
ಗೆಜ್ಜೆಯ ಆರೋಗ್ಯ ಮಹತ್ವ
ಕಾಲ್ಗೆಜ್ಜೆ ನೋಡುವವರ ಕಣ್ಣಿಗಷ್ಟೇ ಅಲ್ಲ, ಧರಿಸುವ ಸ್ತ್ರೀಯ ಆರೋಗ್ಯಕ್ಕೂ ಪ್ರಯೋಜನಕಾರಿ. ಚಿನ್ನ, ಬೆಳ್ಳಿಯ ಗೆಜ್ಜೆಯು ಕಾಲಿನ ಮೂಳೆಯನ್ನು ಸದೃಢವಾಗಿಡುತ್ತದೆ ಎನ್ನುತ್ತದೆ ಆಯುರ್ವೇದ. ಕಾಲ್ಗೆಜ್ಜೆಯ ಸದ್ದು ಮನೆಯಲ್ಲಿರುವ ದುಷ್ಟ ಶಕ್ತಿಯನ್ನು ಹೊರಗೋಡಿಸಿ ದೈವೀ ಶಕ್ತಿಯನ್ನು ತುಂಬಿಸುತ್ತದೆ. ಮನೆಯಲ್ಲಿ 'ಪಾಸಿಟಿವ್ ಎನರ್ಜಿ'ಯನ್ನುಂಟು ಮಾಡುತ್ತದೆ ಎನ್ನುವ ನಂಬಿಕೆ ಕೂಡ ಇದೆ.
ಸದ್ದಿಲ್ಲದ ಕಾಲ್ಗೆಜ್ಜೆ
ಇಂದು ಕಾಲ್ಗೆಜ್ಜೆಯ ಸಪ್ಪಳ ಮಾಯವಾಗಿದೆ. ಆಧುನಿಕ ಪೋಷಾಕುಗಳ ಕಡೆ ಹೆಚ್ಚಿನ ಒಲವು ತೋರಿಸುತ್ತಿರುವ ಹೆಣ್ಣುಮಕ್ಕಳು ಗೆಜ್ಜೆ ತೊಡುವುದನ್ನೇ ಮರೆತಿದ್ದಾರೆ. ಕೆಲವರಂತೂ ಸಂಪ್ರದಾಯದ ಗಡಿ ದಾಟಿ ಗೆಜ್ಜೆಯನ್ನೂ ಅವರ ಪ್ಯಾಷನ್ ಟ್ರೆಂಡ್ ಆಗಿ ಬದಲಿಸಿದ್ದಾರೆ. ಈಗ ಗೆಜ್ಜೆಗಳು ರೂಪ ಬದಲಿಸಿಕೊಂಡಿವೆ. ಈಗೇನಿದ್ದರೂ ಟ್ರೆಂಡಿ ಗೆಜ್ಜೆಗಳ ಕಾಲ. ಆಗ ಗೆಜ್ಜೆಯೊಂದಿಗೆ ಇದ್ದ ಭಾವನಾತ್ಮಕ ನಂಟು ಈಗಿಲ್ಲ. ಮೊದಲಿನ ಬೆಳ್ಳಿ ಗೆಜ್ಜೆಗಳನ್ನು ಈಗ ಕೇಳುವವರಿಲ್ಲ.
ಈಗ ಮಣಿಗಳಿಂದ ಮಾಡಿದ ಗೆಜ್ಜೆಗಳು, ಕಪ್ಪು, ಬಿಳಿ, ಕೆಂಪು, ನೀಲಿ, ಕೇಸರಿ ಮುಂತಾದ ಬಣ್ಣಗಳ ದಾರಗಳನ್ನೇ ಕಾಲಿಗೆ ಕಟ್ಟಿಕೊಳ್ಳುವ ಪ್ರವೃತ್ತಿ ಬಂದುಬಿಟ್ಟಿದೆ. ಬಟ್ಟೆಗೆ ಹೋಲುವ ಗೆಜ್ಜೆಗಳನ್ನು ಧರಿಸುತ್ತಾರೆ. ಜೀನ್ಸ್, ಸ್ಕರ್ಟ್ ಮುಂತಾದವುಗಳನ್ನು ಧರಿಸಿದಾಗ ದಾರ ವಿಶಿಷ್ಟವಾಗಿ ಕಾಣುತ್ತದೆ ಎಂಬುದು ಈಗಿನ ಹುಡುಗಿಯರ ಅಭಿಪ್ರಾಯ. ಇಂದಿನ ಪ್ಯಾಷನ್ ಗೆಜ್ಜೆಗಳಲ್ಲಿ ಝಣಝಣ ಸದ್ದಿಲ್ಲ. ಅದೇನಿದ್ದರೂ ಕೇವಲ ಪ್ಯಾಷನ್ಗಾಗಿ ಬಳಸುವ ಒಂದು ಪರಿಕರವಷ್ಟೆ. ಭಾರವಿಲ್ಲದ, ಗೆಜ್ಜೆಗಳಿಲ್ಲದ, ನಾನಾ ಬಗೆಯ ಮಣಿಗಳಿಂದ ತಯಾರಾದ ಕಾಲ್ಗೆಜ್ಜೆಗಳು ಇಂದು ಯುವತಿಯರ ಪಾದವನ್ನು ಅಲಂಕರಿಸಿವೆ.
ಹಿಂದಿನ ಕಾಲದ ಎಷ್ಟೋ ವಸ್ತುಗಳು, ದಿರಿಸುಗಳು ಮತ್ತೆ ಈಗಿನ ಪ್ಯಾಷನ್ ಆಗಿವೆ. ಹಾಗೆಯೇ ಹಿಂದಿನ ಕಾಲದ ಬೆಳ್ಳಿ ಗೆಜ್ಜೆ ಕೂಡ ಮತ್ತೆ ಹುಡುಗಿಯರ ಪ್ಯಾಷನ್ ಆಗಿ ಬರಲಿ. ಹಬ್ಬಗಳಲ್ಲಿ ಹೆಣ್ಣುಮಕ್ಕಳು ಗೆಜ್ಜೆ ಕಟ್ಟಿ ಸಂಭ್ರಮಿಸುವ ಗಳಿಗೆ ಮತ್ತೆ ಬರಲಿ. ಗೆಜ್ಜೆಯ ಸದ್ದು ಎಲ್ಲರ ಮನೆ, ಮನಗಳಲ್ಲಿ ಗುಂಜಿಸಲಿ.
- ದಿವ್ಯಾ ವಿಶ್ವನಾಥ್ ಹೆಗಡೆ