ದಾರಿ ತಪ್ಪಿದ ಮಗಳು?

ದಾರಿ ತಪ್ಪಿದ ಮಗಳು?
Updated on: 

ಗಂಡ, ಹೆಂಡತಿ, ಮಗಳು- ಮೂವರ ಸುಖೀ ಕುಟುಂಬ. ಅಪ್ಪ ಮಗಳನ್ನು ತುಂಬಾ ಪ್ರೀತಿಯಿಂದ, ಅಷ್ಟೇ ಶಿಸ್ತಿನಿಂದ ಬೆಳೆಸಿದ್ದಾನೆ. ಮಗಳಿಗೀಗ ಟೀನೇಜು. ಕಳೆದ ವರ್ಷದಿಂದ ಕಾಲೇಜು. ಹಾಗಾಗಿ ಅಪ್ಪನದು ತುಸು ಹೆಚ್ಚೇ ಕಣ್ಗಾವಲು. ಸಂಜೆ ಸುಮಾರು ಆರೂವರೆ. ಆಫೀಸ್ ಮುಗಿಸಿ ಮನೆಗೆ ಬಂದ ಅಪ್ಪನಿಗೆ ಅರ್ಧಗಂಟೆ ಕಳೆದರೂ ಮನೆಯಲ್ಲಿ ಮಗಳಿರುವ ಸುಳಿವೇ ಇಲ್ಲ. ಹಾಲ್‌ನಲ್ಲಿ ಟೀವಿ ನೋಡ್ತಾ ಮಗಳನ್ನು ಕರೆದ. ಆಕೆಯ ಮರುದನಿ ಇಲ್ಲ. ಸೀದಾ ಆಕೆಯ ಸ್ಟಡಿ ಕಂ ಬೆಡ್‌ರೂಮ್‌ಗೆ ಹೋದ. ಅಲ್ಲಿ ಆಕೆ ಇರಲಿಲ್ಲ. ಆದರೆ ಕಣ್ಣಿಗೆ ರಾಚುವಂತೆ ಒಂದು ಕಡುಗೆಂಪು ಕವರ್ ಕಂಡಿತು. ಅದರ ಬಳಿ ಹೋದ. 'ಅಪ್ಪಾಜಿಗೆ..' ಅಂತ ಕವರ್ ಮೇಲೆ ಬರೆದಿತ್ತು. ಅಪ್ಪನಿಗೆ ಗಾಬರಿಯಾಗದಿದ್ದರೂ ತುಸು ವಿಸ್ಮಯವೆನಿಸಿತು. ಯಾಕಂದ್ರೆ ಮಗಳು ತನಗೆ ಪತ್ರ ಬರೆದದ್ದು ಇದೇ ಮೊದಲಸಲ. ಪತ್ರ ಸುಮಾರು ಉದ್ದವೇ ಇತ್ತು. ಓದಲು ಶುರುಮಾಡಿದ...
ಡಿಯರ್ ಅಪ್ಪಾಜಿ,
ತುಂಬಾ ಬೇಸರದಿಂದಲೇ ಈ ಪತ್ರ ಬರೀತಿದೀನಿ. ಹೇಗೆ ಹೇಳೋದು ಅಂತ ಗೊತ್ತಾಗ್ತಿಲ್ಲ. ಆದರೂ ವಿಷಯ ತಿಳಿಸೋದು ಅನಿವಾರ್ಯ. ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ.
ಅನಿಲ ಮತ್ತು ನನ್ನ ಲವ್ ವಿಷಯ ನಿಮಗೆ ತಿಳಿಸೋ ಧೈರ್ಯ ನನಗಿತ್ತು. ಆದರೆ ನಿನ್ನ ಮತ್ತು ಅಮ್ಮನ ಎದುರು ದೊಡ್ಡ ರಾಮಾಯಣ ನಡೆಯೋದು ಅನಿಲನಿಗೆ ಇಷ್ಟವಿರಲಿಲ್ಲ. ಹಾಗಾಗಿ ಹೇಳದೆ ಹೋಗ್ತಿದೀನಿ. ಅವನಂದ್ರೆ ನಂಗೆ ಪ್ರಾಣ. ಮುಂದೊಂದು ದಿನ ಭೇಟಿಯಾದಾಗ ನಿಮಗೂ ಅವನು ಇಷ್ಟ ಆಗೇ ಆಗ್ತಾನೆ. ಅವನು ಮೈಮೇಲೆ ಹಾಕ್ಕೊಂಡಿರೋ ಟ್ಯಾಟೂಗಳು, ಹುಬ್ಬಿಗೆ, ಕಿವಿತುದಿಗೆಲ್ಲ ಚುಚ್ಚಿಸಿಕೊಂಡಿರೋ ಸ್ಟಡ್‌ಗಳು, ನಿಮಗಷ್ಟೇ ಅಲ್ಲ ನಮ್ಮಜ್ಜಿಗೂ ಇಷ್ಟ ಆಗತ್ತೆ.
ಹಾಗಂತ ಜಸ್ಟ್ ಅವನಂದ್ರೆ ನಂಗೆ ಜೀವ ಅಂತ ನಾ ಅವನ ಜತೆ ಹೋಗ್ತಾ ಇಲ್ಲ. ನನ್ನ ಹೊಟ್ಟೆಯೊಳಗೆ ಅವನ ಜೀವದ ಕುಡಿ ಬೆಳೀತಾ ಇದೆ. ನಾನು ಅಮ್ಮ ಆಗ್ತಾ ಇದ್ದೀನಿ. ಅಪ್ಪ ಆಗಬೇಕು ಅನ್ನೋ ಅವನ ಆಸೆ ಬಗ್ಗೆ ಅಪ್ಪ ಆಗಿರೋ ನಿಂಗೆ ನಾ ವಿವರಿಸೋ ಅಗತ್ಯ ಇಲ್ಲ ಅಂದ್ಕೊಳ್ತೀನಿ.
ಅನಿಲನಿಗೆ ಈಗ 43 ವರ್ಷ. ನನಗಿಂತ ಇಪ್ಪತ್ತೈದು ವರ್ಷ ದೊಡ್ಡೋವ್ನು. ಆದರೇನಂತೆ, ಈಗ ಇದೇ ಟ್ರೆಂಡು.
ಅವನ ಹತ್ರ ದುಡ್ಡಿಲ್ಲ, ಆಸ್ತಿ ಇಲ್ಲ, ನಿಜ. ಪ್ರೀತೀಲಿ ಈ ಥರದ ವಿಷಯಗಳು ಗೌಣ ಅಲ್ವಾ ಅಪ್ಪಾ? ನಿನ್ ಹತ್ರ ಬೇರೆ ಹೆಣ್ಮಕ್ಕಳು ಬಂದು 'ಆ ಅನಿಲ ನಮಗೆಲ್ಲ ಪ್ರೀತಿಯ ನಾಟಕ ಆಡಿ ಮೋಸ ಮಾಡಿದ್ದಾನೆ' ಅಂತ ಕಿವಿ ಚುಚ್ಚಬಹುದು. ನಂಗೊತ್ತು ಅವನು ತುಂಬಾ ಜನ ಹುಡುಗೀರ ಬದುಕಲ್ಲಿ ಆಟ ಆಡಿದಾನೆ. ಆದರೆ ಅವನು ಈಗ ಹಾಗಿಲ್ಲ ಅನ್ನೋದೂ ಅಷ್ಟೇ ನಿಜ. ಅವನು ನಂಗೆ ಕೈಕೊಡೋ ಚಾನ್ಸೇ ಇಲ್ಲ. ಅವನಿಗೆ ಮಕ್ಕಳು ಅಂದ್ರೆ ತುಂಬಾ ಪ್ರೀತಿ ಅಂತೆ. ಅವನಿಗಾಗಿ ನಾ ಎಷ್ಟು ಮಕ್ಕಳು ಹೆತ್ತು ಕೊಡೋಕೂ ರೆಡಿ ಅಂತ ಪ್ರಾಮಿಸ್ ಮಾಡಿದೀನಿ.
ಅವನ ಕನಸೇ ನನ್ನ ಕನಸೂ. ಅಪ್ಪಾಜಿ... ಅವನು ಬೇರೆ ಗಂಡಸರ ಹಾಗೆ ಸ್ಟ್ರಿಕ್ಟ್ ಅಲ್ಲ. ನನ್ನ ಜತೆ ಕುಡೀತಾನೆ, ಸಿಗರೇಟ್ ಸೇದ್ತಾನೆ. ನನಗೂ ಅದನ್ನೆಲ್ಲ ಕಲಿಸಿದ್ದಾನೆ. ಒಂದೇ ಒಂದ್ಸಲ ಮರಿಜುವಾನ ಸೇವಿಸೋ ಆಸೆ ಇತ್ತು. ಈ ಜನ್ಮದಲ್ಲಿ ಅವಕಾಶ ಸಿಗತ್ತೋ ಇಲ್ವೋ ಅಂದ್ಕೊಂಡಿದ್ದೆ. ಅವನು ನಂಗೆ ಅದನ್ನ ಕಲಿಸಿಕೊಟ್ಟ.       
ಒಂದೇ ಒಂದು ಬೇಸರದ ವಿಷಯ ಏನಂದ್ರೆ ಈ ಏಡ್ಸ್‌ಗೆ ನಮ್ಮ ಸೈನ್ಸ್ ಮದ್ದು ಕಂಡುಹಿಡಿಯದೆ ಇರೋದು. ಅದೊಂದು ಬೇಗ ಕಂಡುಹಿಡಿದರೆ ನನ್ನ ಅನಿಲನನ್ನು ಕನಿಷ್ಠ ಇನ್ನೊಂದು ಹತ್ತು ವರ್ಷ ಉಳಿಸ್ಕೋಬಹುದು. ಅಪ್ಪಾಜಿ...  ಪ್ಲೀಸ್ ನನ್ನ ಮತ್ತು ಅನಿಲನ ಪರವಾಗಿ ನೀವೂ ದೇವರಲ್ಲಿ ಕೇಳ್ಕೊಳಿ.
ಇಂತಿ ನಿಮ್ಮ  ಪ್ರೀತಿಯ ಮಗಳು,
ಪುಟ್ಟಗೌರಿ

=
ಪತ್ರದ ಕೆಳಗೆ ಬಲ ತುದಿಯಲ್ಲಿ ಚಿಕ್ಕದಾಗಿ 'ಪುಟ ತಿರುಗಿಸಿ ನೋಡಿ' ಅಂತ ಬರೆದಿತ್ತು. ಅಪ್ಪನ ಮುಖ ಕಾಂತಿ ಕಳೆದುಕೊಂಡಿತ್ತು, ಕೈ ನಡುಗುತ್ತಿತ್ತು... ಮೈಯೆಲ್ಲಾ ಬೆವರಿ ಹೋಗಿತ್ತು. ದುಃಖವೋ ಕೋಪವೋ ಗೊತ್ತಾಗದ ಭಾವ. ಪುಟ ತಿರುಗಿಸಿ ನೋಡಿದ.
ಅಪ್ಪಾಜಿ...
ಹಿಂದಿನ ಪುಟದಲ್ಲಿ ಬರೆದಿರುವ ಒಂದೇ ಒಂದು ಪದವೂ ನಿಜ ಅಲ್ಲ. ನಾನು ಇಲ್ಲೇ ಪಕ್ಕದ್ಮನೇಲಿ ಪದ್ಮಾ ಜತೆ ಇದ್ದೀನಿ.
ಇವತ್ತು ಮಾರ್ಕ್ಸ್‌ಕಾರ್ಡ್ ಕೊಟ್ರು. ಅಲ್ಲೇ ಡೆಸ್ಕಿನ ಡ್ರಾಯರಲ್ಲಿದೆ. ಜೀವನದಲ್ಲಿ ಮಗಳು ಕಮ್ಮಿ ಮಾರ್ಕ್ಸ್ ತಗೋಳೋದೇ ಅವಮಾನ ಅಲ್ಲ. ಅದಕ್ಕಿಂತ ಅವಮಾನಗಳಿರುತ್ತವೆ ಅಂತ ತಿಳಿಸೋದಕ್ಕೆ ನಾ ನಿಂಗೆ ಇಷ್ಟುದ್ದದ ಲೆಟರ್ ಬರೀಬೇಕಾಯ್ತು.
ಪ್ಲೀಸ್ ಮಾರ್ಕ್ಸ್‌ಕಾರ್ಡ್‌ಗೆ ಸೈನ್ ಮಾಡಿಟ್ಟಿರು. ನಿಮ್ಮ ಕೋಪ ಹೋಗಿದೆ ಅಂತಾದ್ರೆ, ನನ್ನ ಮೊಬೈಲ್‌ಗೆ ಕಾಲ್‌ಮಾಡಿ. ಎರಡು ನಿಮಿಷದಲ್ಲಿ ಮನೇಲಿರ್ತೀನಿ.
ಲವ್ ಯೂ ಅಪ್ಪಾಜಿ.

ನವೀನ್ ಸಾಗರ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com