ವಸ್ತ್ರ ಸ್ವಾತಂತ್ರ್ಯ

ಒಂದೆಡೆ ಫ್ಯಾಷನ್ ಹೆಸರಿನಲ್ಲಿ 'ಅಟ್ಟೆ ಮಟ್ಟೆ ಕೋಳಿ ಮೊಟ್ಟೆ ನನ್ನಯ ಬಟ್ಟೆ ಬಿಟ್ಟೆ ಬಿಟ್ಟೆ' ಎನ್ನುತ್ತಿರುವ ಸ್ತ್ರೀ ಸ್ವಾತಂತ್ರ್ಯ ...
ವಸ್ತ್ರ ಸ್ವಾತಂತ್ರ್ಯ
Updated on: 

ಒಂದೆಡೆ ಫ್ಯಾಷನ್ ಹೆಸರಿನಲ್ಲಿ 'ಅಟ್ಟೆ ಮಟ್ಟೆ ಕೋಳಿ ಮೊಟ್ಟೆ ನನ್ನಯ ಬಟ್ಟೆ ಬಿಟ್ಟೆ ಬಿಟ್ಟೆ' ಎನ್ನುತ್ತಿರುವ ಸ್ತ್ರೀ ಸ್ವಾತಂತ್ರ್ಯ ಸ್ವೇಚ್ಛೆ ಎನಿಸುವ ಮಟ್ಟಿಗೆ ಹೋಗಿದ್ದರೆ, ನಮ್ಮ ನೆರೆಯ ಕೆಲವು ಮುಸ್ಲಿಂ ರಾಷ್ಟ್ರಗಳ ಸ್ತ್ರೀಯರು ಇವರನ್ನು ನೋಡಿ ಕಣ್ ಕಣ್ ಬಿಡುತ್ತಿದ್ದಾರೆ ಹಾಗೂ ಕಣ್ಣನ್ನು ಮಾತ್ರ ಬಿಡುತ್ತಿದ್ದಾರೆ!
ಯೂನಿವರ್ಸಿಟಿ ಆಫ್ ಮಿಚಿಗನ್ ಇನ್ಸ್‌ಟಿಟ್ಯೂಟ್ ಇತ್ತೀಚೆಗೆ ಸಂಪ್ರದಾಯವಾದಿ ಮುಸ್ಲಿಂ ರಾಷ್ಟ್ರಗಳಲ್ಲಿ ಮಹಿಳೆಯರು ಧರಿಸುವ ಬಟ್ಟೆ ಬಗ್ಗೆ ಅಲ್ಲಿನ ಪುರುಷರು ಹೊಂದಿರುವ ಅಭಿಪ್ರಾಯದ ಕುರಿತಾಗಿ ಅಧ್ಯಯನ ಕೈಗೊಂಡಿತು. ಕುತೂಹಲಕಾರಿ ಅಂಶವೆಂದರೆ ಈ ಏಳೂ ರಾಷ್ಟ್ರಗಳ ಧರ್ಮ ಒಂದಾದರೂ, ಕೆಲವೊಂದು ಕಟ್ಟುಪಾಡುಗಳು ಒಂದೇ ತೆರನಾಗಿದ್ದರೂ ಮಹಿಳೆಯರ ಉಡುಪಿನ ವಿಷಯಕ್ಕೆ ಬಂದಾಗ ಕೆಲವು ಕಡೆ ಮೃದು ನಿಲುವು, ಮತ್ತೆ ಕೆಲವು ಕಡೆ ಕಡು ಧೋರಣೆ!
ಟ್ಯುನೀಷಿಯಾದ ಶೇ. 57, ಈಜಿಪ್ಟ್‌ನ ಶೇ. 52, ಟರ್ಕಿಯ ಶೇ. 46 ಮತ್ತು ಇರಾಕ್‌ನ ಶೇ. 44ರಷ್ಟು ಜನರು ಬಿಳಿ ಬಣ್ಣದ ನಿಕಾಬ್ ಅಥವಾ ಅಲ್‌ಅಮೀರ ಬಟ್ಟೆಯು ಮುಸ್ಲಿಂ ಮಹಿಳೆಯರಿಗೆ ಸರಿಯಾಗಿ ಹೊಂದುತ್ತದೆ ಎಂಬ ನಿಲುವನ್ನು ತಳೆದಿದ್ದಾರೆ. ಇಲ್ಲಿ ನಿಕಾಬ್ ಎಂದರೆ ಕೇವಲ ಕಣ್ಣುಗಳು ಮಾತ್ರ ಕಾಣಬೇಕು. ದೇಹದ ಉಳಿದ ಎಲ್ಲ ಅಂಗಗಳೂ ಕಪ್ಪು ಬಟ್ಟೆಯಿಂದ ಆವೃತವಾಗಿರಬೇಕು. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಬಟ್ಟೆಯನ್ನು ಹಾಕದೇ ಅವರು ಹೊರ ಜಗತ್ತಿಗೆ ಕಾಲಿಡುವಂತೆಯೇ ಇಲ್ಲ.
ಅಲ್-ಅಮೀರದಲ್ಲಿ ಸ್ವಲ್ಪ ಸಡಿಲ ನೀತಿ ಇದ್ದು, ಶ್ವೇತ ವರ್ಣದ ಉಡುಪು ಧರಿಸಬೇಕು. ಹೊರ ಜಗತ್ತಿಗೆ ಮುಖ ಕಾಣುವಂತಿರಬಹುದು. ಆದರೆ ತಲೆಕೂದಲು ಮಾತ್ರ ಮುಚ್ಚಿರಬೇಕಾಗುತ್ತದೆ. ಹಾಗಂತ ಏನೂ ಕಾಣದಂತೆ ಬುರ್ಖಾ ಹಾಕಬೇಕು ಎನ್ನುವವರೂ ಇದ್ದಾರೆ. ಮುಖ ಹಾಗೂ ಕೂದಲು ಮುಚ್ಚದೇ ಇರುವಂತೆ ರಿಯಾಯಿತಿ ನೀಡಿದರೂ ಪರ್ವಾಗಿಲ್ಲ ಅನ್ನೋ ಮಂದೀನೂ ಸಿಕ್ತಾರೆ. ಆದರೆ ಉಳಿದೋರಿಗೆ ಹೋಲಿಸಿದರೆ ಇಂಥ ಸ್ತ್ರೀ ಪರ ಸಡಿಲ ಧೋರಣೆ ಹೊಂದಿರುವವರ ಸಂಖ್ಯೆ ತೀರಾ ವಿರಳ.
ಇರಾಕ್ ಹಾಗೂ ಈಜಿಪ್ಟ್‌ನವರ ಚಿಂತನೆ ಸ್ವಲ್ಪ ಭಿನ್ನವಾಗಿದ್ದು, ಕಪ್ಪು ಬಣ್ಣದ ಹಿಜಾಬ್ ಅಥವಾ ಚಾದೋರ್ ಉಡುಪಿನ ಬಗ್ಗೆ ಒಲವನ್ನು ಹೊಂದಿದ್ದಾರೆ. ಇಲ್ಲಿ ಹಿಜಾಬ್ ಹಾಗೂ ಚಾದೋರ್‌ಗೆ ಅಂಥಾ ವ್ಯತ್ಯಾಸವೇನೂ ಇಲ್ಲ. ತಲೆಗೆ ಹಾಕುವ ಬಟ್ಟೆಯ ಬಣ್ಣದಲ್ಲಿ ಸ್ವಲ್ಪ ವ್ಯತ್ಯಾಸವಿರುವುದು ಬಿಟ್ಟರೆ ಮುಖ ಕಾಣುವಂತೆ ಧರಿಸಬಹುದಾಗಿದೆ.
ಸೌದಿ ಅರೇಬಿಯಾದ ಶೇ. 63ರಷ್ಟು ಮಂದಿ ನಿಕಾಬ್ ಧರಿಸಬೇಕು ಎಂಬ ಬಗ್ಗೆ ಹೆಚ್ಚಿನ ಒಲವನ್ನು ವ್ಯಕ್ತಪಡಿಸಿದ್ದು, ಪಾಕಿಸ್ತಾನವೂ ಸಹ ಇದಕ್ಕೆ ಭಿನ್ನವಾಗೇನಿಲ್ಲ. ಇಲ್ಲಿ ಶೇ. 60ರಷ್ಟು ಮಂದಿ, ಮಹಿಳೆಯರು ನಿಕಾಬ್ ಅಥವಾ ಚಾದೋರ್ ಧರಿಸುವುದೇ ಸೂಕ್ತ ಎಂಬ ನಿಲುವನ್ನು ಹೊಂದಿದ್ದಾರೆ. ಶೇ. 25ರಷ್ಟು ಮಂದಿ ಮಾತ್ರ ಹಿಜಾಬ್ ಬಗ್ಗೆ ಒಲವು ತೋರಿದ್ದಾರೆ.
ಕೇವಲ ಟರ್ಕಿ ಮತ್ತು ಲೆಬನಾನ್‌ಗಳಲ್ಲಿ ಮಹಿಳೆಯರು ಮುಖದ ಜತೆ ತಲೆಕೂದಲನ್ನೂ ಮುಚ್ಚಿಕೊಂಡು ಹೊರಗೆ ಬರುವ ಪದ್ಧತಿಗೆ ವಿನಾಯ್ತಿ ನೀಡಲಾಗಿದೆ. ಇಲ್ಲಿ ಮಹಿಳೆಯರು ಕುತ್ತಿಗೆಯಿಂದ ಕೆಳಗೆ ಮಾತ್ರ ಮೈಪೂರಾ ಬಟ್ಟೆ ಧರಿಸಿದರೆ ಸಾಕು.
ಅಂಕಿಅಂಶದ ಪ್ರಕಾರವೇ ಹೇಳಬೇಕಾದರೆ ಟರ್ಕಿಯ ಮೂರನೇ ಒಂದರಷ್ಟು ಪುರುಷರು, ಲೆಬನಾನ್‌ನ ಅರ್ಧದಷ್ಟು ಮಂದಿ ಹಾಗೂ ಟ್ಯುನೀಷಿಯಾದ ಶೇ. 15ರಷ್ಟು ಮಂದಿ ತಲೆಯ ಮೇಲೆ ಬಟ್ಟೆ ಧರಿಸದೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳಬಹುದು ಎಂಬ ಆಶಯ ವ್ಯಕ್ತಪಡಿಸುತ್ತಾರೆ. ಹೀಗಿದ್ದರೂ ಲೆಬೆನಾನ್‌ನ ಶೇ. 27ರಷ್ಟು ಮಂದಿ ಪಾಶ್ಚಿಮಾತ್ಯ ದೇಶಗಳಿಂದ ಆಕರ್ಷಿತರಾಗಿದ್ದು, ವಸ್ತ್ರಸಂಹಿತೆಯಲ್ಲಿ ರಿಯಾಯಿತಿಯನ್ನು ಪಡೆದುಕೊಂಡಿದ್ದಾರೆ.
ಮುಚ್ಚಿದವಳನ್ನೇ ಮೆಚ್ಚುವ ಈ ದೇಶಗಳಲ್ಲಿ ಮದುವೆಗೆ ಮುನ್ನ ಹುಡುಗಿ ನೋಡುವ ಸಂಪ್ರದಾಯ ಇದೆಯೋ ಇಲ್ಲವೋ ಎಂಬುದು ಕೊನೆಯಲ್ಲಿ ಕಾಡುವ ಅಸಂಬದ್ಧ ಪ್ರಶ್ನೆ.



ಯಾವ ದೇಶದಲ್ಲಿ ಯಾವ ಉಡುಪಿಗೆ ಪುರುಷರ ಒಪ್ಪಿಗೆ ಇದೆ? (ಶೇಕಡಾವಾರು)
ದೇಶ    ಬುರ್ಖಾ    ನಿಕಾಬ್    ಚಾದೋರ್    ಅಲ್-ಅಮೀರ    ಹಿಜಾಬ್    ರಿಯಾಯಿತಿ
ಟ್ಯುನೀಷಿಯಾ      ಶೇ. 1    ಶೇ. 2    ಶೇ.3    ಶೇ. 57    ಶೇ. 23    ಶೇ. 15   
ಈಜಿಪ್ಟ್     ಶೇ. 1    ಶೇ. 9    ಶೇ. 20    ಶೇ. 52    ಶೇ. 13    ಶೇ. 04
ಟರ್ಕಿ     ಶೇ. 0    ಶೇ. 2    ಶೇ. 2    ಶೇ. 46    ಶೇ. 17    ಶೇ. 32
ಇರಾಕ್      ಶೇ. 4    ಶೇ. 8    ಶೇ. 32    ಶೇ. 44    ಶೇ. 10    ಶೇ. 3
ಲೆಬನಾನ್      ಶೇ. 2    ಶೇ. 1    ಶೇ. 3    ಶೇ. 32    ಶೇ. 12    ಶೇ. 49
ಪಾಕಿಸ್ತಾನ      ಶೇ. 3    ಶೇ. 32    ಶೇ. 31    ಶೇ. 24    ಶೇ. 8    ಶೇ. 2
ಸೌದಿ ಅರೇಬಿಯಾ    ಶೇ. 2    ಶೇ. 8    ಶೇ. 8    ಶೇ. 10    ಶೇ. 5       ಶೇ. 3



-  ಆದರ್ಶ ಎಸ್. ಅಂಚೆ
adianche@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com