

'ವಿಶ್ವದ ಅತಿ ಕುರೂಪಿ ಮಹಿಳೆ'- ಶೀರ್ಷಿಕೆಯಿರುವ ಯೂಟ್ಯೂಬ್ ವಿಡಿಯೋವೊಂದರಲ್ಲಿ 11ರ ಹರೆಯದ ಲಿಜ್ಜಿ ವೆಲಾಸ್ಕುಯೆಜ್ಳನ್ನು (Elizabeth Ann 'Lizzie' Velásquez) ತೋರಿಸಲಾಗುತ್ತದೆ. ಬರೀ 8 ಸೆಕೆಂಡುಗಳ ಈ ವಿಡಿಯೋವನ್ನು ನೋಡಿದವರ ಸಂಖ್ಯೆ ಬರೋಬ್ಬರಿ 40 ಲಕ್ಷ!
ವಿಡಿಯೋ ನೋಡಿ ಕಾಮೆಂಟ್ ಮಾಡಿದವರ ಸಂಖ್ಯೆಯೇ ಸಾವಿರಕ್ಕೂ ಅಧಿಕ. ಕಾಮೆಂಟ್ ಮಾಡಿದವರಲ್ಲಿ ಹೆಚ್ಚಿನವರು 'ಥೂ..' ಅಂದವರೇ... ಇನ್ನು ಕೆಲವರು ನೀನು ಬದುಕಿಯೇನು ಪ್ರಯೋಜನ? ಇದಕ್ಕಿಂತ ಆತ್ಮಹತ್ಯೆ ಮಾಡಿಕೊಂಡು ಸಾಯಬಾರದಿತ್ತಾ? ಎಂದೂ ಕಾಮೆಂಟ್ ಮಾಡಿದ್ದರು. ಈ ರೀತಿಯ ಕಾಮೆಂಟ್ ಬಂದರೆ ಯಾರಿಗಾದರೂ ಆ ಕ್ಷಣಕ್ಕೆ ಸತ್ತು ಬಿಡೋಣ ಎಂದೆನಿಸದಿರದು. ಇನ್ನು ಆ ಮುಗ್ಧ ಬಾಲಕಿಯ ಮನಸ್ಸಿಗೆ ಎಷ್ಟೊಂದು ಘಾಸಿ ಮಾಡಿರಲಿಕ್ಕಿಲ್ಲ?
ಆದರೆ ಲಿಜ್ಜಿ ಗಟ್ಟಿಗಿತ್ತಿ. ಜನ ಏನೇ ಅಂದರೂ ತನ್ನ ದೇಹದ ಬಗ್ಗೆ ಎಂದೂ ಕೀಳರಿಮೆ ಬೆಳೆಸಿಕೊಳ್ಳಲಿಲ್ಲ. ಎಲ್ಲವನ್ನೂ ಧನಾತ್ಮಕವಾಗಿಯೇ ತೆಗೆದುಕೊಂಡು ಆತ್ಮವಿಶ್ವಾಸ ಬೆಳೆಸಿಕೊಂಡಳು. ವಿಶ್ವದ ಕುರೂಪಿ ಮಹಿಳೆ ಎಂದು ಪಟ್ಟಕಟ್ಟಿದ ಜಗತ್ತಿಗೇ ಸವಾಲಾಗಿ ನಿಂತ ಲಿಜ್ಜಿ ಸೌಂದರ್ಯದ ಪಾಠವನ್ನು ಹೇಳಿದಳು. ಆತ್ಮವಿಶ್ವಾಸವೆಂದರೆ ಹೀಗಿರಬೇಕಪ್ಪಾ! ಟೆಕ್ಸಾಸ್ನ ವೇದಿಕೆಯಲ್ಲಿ ನಿಂತು ಆಕೆ ಪ್ರೇರಣೆಯ ಮಾತುಗಳನ್ನಾಡುತ್ತಿದ್ದರೆ, ವೀಕ್ಷಕರು ಮೂಕವಿಸ್ಮಿತರಾಗುತ್ತಾರೆ.
ಲಿಜ್ಜಿ ವೆಲಾಸ್ಕುಯೆಜ್ಗೆ ಈಗ 24 ವರ್ಷ. ಆಕೆಯ ತೂಕ ಕೇವಲ 29 ಕೆ.ಜಿ. ಅತಿ ಅಪರೂಪದ ದೈಹಿಕ ಕಾಯಿಲೆಯಿಂದ ಬಳಲುತ್ತಿರುವ ಲಿಜ್ಜಿ ಸ್ವಲ್ಪ ಸ್ವಲ್ಪವೇ ಆಹಾರ ಸೇವಿಸುತ್ತಾಳೆ. ಆಕೆಯ ಬಲಕಣ್ಣು ದೃಷ್ಟಿಹೀನವಾಗಿದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಕಡಿಮೆಯಿರುವುದರಿಂದ ಆಗಾಗ್ಗೆ ಅನಾರೋಗ್ಯಕ್ಕೆ ತುತ್ತಾಗುತ್ತಾಳೆ. ದೇಹ ದುರ್ಬಲವಾಗಿ, ಮುಖ ವಿಕಾರವಾಗಿದ್ದರೇನಂತೆ ಆಕೆಯ ಆತ್ಮವಿಶ್ವಾಸಕ್ಕೆ ಇದ್ಯಾವುದೂ ಅಡ್ಡಿಯಾಗಿಲ್ಲ. ಪ್ರಸ್ತುತ ವಿಡಿಯೋದಲ್ಲಿ ಲಿಜ್ಜಿ ಹೇಳಿದ ಮಾತನ್ನು ನೀವೂ ಓದಿಬಿಡಿ...
'ನಾನು ಲಿಜ್ಜಿ, ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದೇನೆ. ನಾನು ಹುಟ್ಟಿದಾಗ ಈ ಮಗು ನಡೆದಾಡಲ್ಲ, ಮಾತನಾಡಲ್ಲ ಎಂದು ಡಾಕ್ಟರ್ ಹೇಳಿದ್ದರಂತೆ. ಆದರೆ ನನ್ನ ಅಪ್ಪ ಅಮ್ಮ, 'ಮಗು ಹೇಗೆಯೇ ಇರಲಿ ನಾವದನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ' ಎಂದು ಹೇಳಿದ್ದರಂತೆ. ಅಮ್ಮ ನನಗಾಗಿ ಅದೆಷ್ಟು ಕಷ್ಟ ಪಟ್ಟರು. ಅಮ್ಮನ ತ್ಯಾಗ ಮತ್ತು ಶಕ್ತಿಯೇ ನನ್ನನ್ನು ಗಟ್ಟಿಗಿತ್ತಿಯನ್ನಾಗಿಸಿರುವುದು. ನಾನು ಎಲ್ಕೆಜಿಗೆ ಹೋದಾಗ ಎಲ್ಲ ಮಕ್ಕಳಂತೆಯೇ ಇದ್ದೆ. ಅಲ್ಲಿ ಯಾರೂ ಭೇದಭಾವ ಮಾಡಲಿಲ್ಲ. ಆದರೆ ಬೆಳೆಯುತ್ತಾ ಬಂದಂತೆ ಜನ ಒಂಥರ ನೋಡೋಕೆ ಶುರುಮಾಡಿದ್ರು. ಸ್ನೇಹಿತರೂ ನನ್ನಿಂದ ದೂರವಿರಲು ಬಯಸಿದರು. ಆವಾಗ ನಾನು ಅಪ್ಪ ಅಮ್ಮನಲ್ಲಿ ಕೇಳಿದೆ; 'ನನ್ನದೇನು ತಪ್ಪಿದೆ? ಜನ ಯಾಕೆ ನನ್ನನ್ನು ಪ್ರೀತಿಸುತ್ತಿಲ್ಲ? ಯಾಕೆ ಈ ರೀತಿ ವರ್ತಿಸುತ್ತಾರೆ?' ಆಗ ಅವರು ಹೇಳಿದ್ದೇನು ಗೊತ್ತಾ? 'ನೀನು ತಲೆಯೆತ್ತಿ ನಡೆಯಬೇಕು. ನಿನ್ನ ಸುತ್ತಮುತ್ತಲಿನ ಜನರಲ್ಲಿ ನೀನೂ ಒಬ್ಬಳು ಎಂದರಿತು ನಗುಮುಖದಿಂದಿರು. ನೀನು ಯಾರು ಎಂಬುದನ್ನು ಮೊದಲು ನೀನು ಅರಿತುಕೋ...' ಆದರೆ ನಾನ್ಯಾರು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ತುಂಬಾನೇ ಶ್ರಮಪಡಬೇಕಾಯಿತು.'
'ಬೆಳಗ್ಗೆದ್ದು ಕನ್ನಡಿ ನೋಡುವಾಗ ನನಗೆ ನನ್ನ ಮೇಲೆ ಸಿಟ್ಟು ಬರುತ್ತಿತ್ತು. ನನ್ನ ಈ ಮುಖ, ಸಣಕಲು ಕೈ ಕಾಲುಗಳು ಎಲ್ಲವೂ ನನ್ನ ಕೋಪಕ್ಕೆ ಕಾರಣವಾಗುತ್ತಿತ್ತು. ಈ ಸಿಂಡ್ರೋಮ್ ಇಲ್ಲವಾಗಿಸುವುದು ಹೇಗೆ ಎಂದು ಯೋಚಿಸುತ್ತಾ ಕೂರುತ್ತಿದ್ದೆ. ಮರುದಿನ ಏಳುವಷ್ಟರಲ್ಲಿ ಈ ರೂಪ ಬದಲಾಗಲಿ... ನಾನೂ ಎಲ್ಲರಂತಾಗಲಿ... ಎಂದು ಬಯಸುತ್ತಿದೆ. ಅದಕ್ಕಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸದ ಗಳಿಗೆಗಳಿಲ್ಲ.'
'ನಾನು ಹೈಸ್ಕೂಲ್ನಲ್ಲಿದ್ದಾಗ ನನ್ನ ವಿಡಿಯೋ ಯುಟ್ಯೂಬ್ನಲ್ಲಿ ಅಪ್ಲೋಡ್ ಆಗಿತ್ತು. ಅದಕ್ಕೆ ಬಂದ ಕಾಮೆಂಟ್ಗಳನ್ನು ಓದಿ ಅತ್ತುಬಿಟ್ಟೆ. ಆವಾಗ ನನ್ನ ಕುಟುಂಬ ನನ್ನ ಬೆಂಬಲಕ್ಕಿತ್ತು. ನಾನು ಆ ನೋವಿನ ವಿರುದ್ಧ ಹೋರಾಡಲು ಸಿದ್ಧಳಾದೆ. ಯಾರೋ ಅಪರಿಚಿತರು 'ನೀನ್ಯಾಕೆ ಬದುಕಬೇಕು?' ಎಂದು ಕೇಳಿದರೆ ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ?
ನಾನು ಕುರೂಪಿಯಾಗಿದ್ದರೂ ನನಗೆ ಸುಂದರವಾದ ಕೂದಲುಗಳಿವೆ. ಜನರು ನನ್ನನ್ನು ವಿಕೃತ ದೆವ್ವ ಎಂದು ಕರೆದರು. ಇಷ್ಟೆಲ್ಲಾ ನೋವುಂಡ ಮೇಲೆ ನಾನು ಯಾರೆಂದು ಅವರಿಗೆ ತೋರಿಸಿಕೊಡಲೇಬೇಕೆಂಬ ಛಲ ಬೆಳೆಸಿಕೊಂಡೆ. ನನಗೆ ಡಿಗ್ರಿ ಪಡೆಯಬೇಕು, ಪುಸ್ತಕ ಬರೆಯಬೇಕು, ಸ್ಫೂರ್ತಿದಾಯಕ ಭಾಷಣ ಮಾಡಬೇಕೆಂಬ ಹಂಬಲ ಇತ್ತು. ಅದನ್ನು ನಾನಿವತ್ತು ಸಾಧಿಸಿದ್ದೇನೆ. ಅಂದರೆ ನಾನು ಬಯಸಿದ್ದನ್ನು ಪಡೆದಿದ್ದೇನೆ. ಜನರ ತೆಗಳಿಕೆ, ನಿಂದನೆ, ನಕಾರಾತ್ಮಕ ಮಾತುಗಳನ್ನೇ ನನ್ನ ಬೆಳವಣಿಗೆಯ ಮೆಟ್ಟಲುಗಳನ್ನಾಗಿಸಿದ್ದೇನೆ. ನಾನ್ಯಾರು ಎಂಬ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿದೆ'.
ನೀವೂ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಿ...
- ಕೆ. ರಜನಿ