

ಆಕೆಗಾಗ ಐದಾರು ವರ್ಷ ಆಗಿರಬಹುದಷ್ಟೆ. ಮನೆಮಂದಿ ಟಿ.ವಿ.ಯಲ್ಲಿ ಭರತನಾಟ್ಯವನ್ನು ನೋಡುತ್ತಾ ಕುಳಿತರೆ ಈ ಬಾಲೆಯೂ ಅಲ್ಲಿ ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತಾ ಕುಣಿಯಲಾರಂಭಿಸುತ್ತಿದ್ದಳು. ಭರತನಾಟ್ಯ ಕಾರ್ಯಕ್ರಮಕ್ಕೆ ಕರೆದೊಯ್ದರೆ ಎಷ್ಟು ತಾಸಾದರೂ ತದೇಕಚಿತ್ತಳಾಗಿ ವೀಕ್ಷಿಸುತ್ತಿದ್ದಳು. ಆ ಪುಟ್ಟ ಮಗುವೀಗ ಭರವಸೆಯ ಭರತನಾಟ್ಯ ಕಲಾವಿದೆ! ಹೆಸರು ನಯನಾ ರಾವ್. ವಯಸ್ಸು ಹದಿಮೂರು.
ಬಿಜೆಎಸ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಾಳೆ ನಯನಾ. ಚಿಕ್ಕಂದಿನಲ್ಲೇ ಈಕೆ ಮಾಡುತ್ತಿದ್ದ ನೃತ್ಯವನ್ನು ಗಮನಿಸಿದ ತಾತ ನಾರಾಯಣ ರಾವ್, ಮೊಮ್ಮಗಳನ್ನು ಮನೆ ಹತ್ತಿರದ ಭರತನಾಟ್ಯ ಕಲಿಸುವ ಗುರುಗಳ ಬಳಿ ಕರೆದೊಯ್ದರು. ನಯನಾಳ ಗುರು, ಹಿರಿಯ ಭರತನಾಟ್ಯ ಕಲಾವಿದೆ 'ಭರತದರ್ಶನ' ನಾಟ್ಯಶಾಲೆಯ ನಾಗಮಣಿ ಶ್ರೀನಿವಾಸ್ ರಾವ್. 10 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿ, 25ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭರತನಾಟ್ಯ ಕಲಿಸುತ್ತಾ ಬಂದಿದ್ದಾರೆ. ತುಂಬಾ ಆಸಕ್ತಿಯಿಂದ ಕಲಿಯುವ ನಯನಾ, ನಾಗಮಣಿ ಶ್ರೀನಿವಾಸ್ ರಾವ್‌ರ ಅಚ್ಚುಮೆಚ್ಚಿನ ಶಿಷ್ಯೆ.
ನಯನಾಳ ಕುಟುಂಬ ಕಲಾವಿದರ ಕುಟುಂಬವೇನೂ ಅಲ್ಲ. ತನ್ನ ಗೆಳತಿಯರು ಪ್ರದರ್ಶನ ನೀಡುತ್ತಿದ್ದ ನೃತ್ಯವನ್ನು, ಟಿ.ವಿ.ಯಲ್ಲಿ ಪ್ರಸಾರವಾಗುತ್ತಿದ್ದ ಭರತನಾಟ್ಯವನ್ನು ನೋಡಿ ಅದರ ಬಗ್ಗೆ ಆಸಕ್ತಿ ಮೂಡಿಸಿಕೊಂಡಳು. ಇದಕ್ಕೆ ಪೂರಕವಾಗಿ ನಯನಾಳ ತಾಯಿ ಪರಿಮಳಾ ರಾವ್, ಮನೆಯ ಸದಸ್ಯರು, ಶಾಲೆಯ ಗುರುಗಳು ಅಗತ್ಯ ಪ್ರೋತ್ಸಾಹ ನೀಡಿದರು. ಈಕೆಯ ತಾಯಿ ಪುರಾಣದ ಕಥೆಯನ್ನು ತನ್ನ ಮಗಳಿಗೆ ಅರ್ಥೈಸಿ ಹೇಳಿದ ನಂತರ ಭರತನಾಟ್ಯದ ಕಲಿಕೆಗೆ ಅನುವು ಮಾಡಿಕೊಡುತ್ತಾರೆ. 'ಮೊದಲೇ ಕಥೆ ಕೇಳುವುದರಿಂದ ಸನ್ನಿವೇಶಕ್ಕೆ ತಕ್ಕಂತೆ ಅಭಿನಯಿಸಲು ಸಹಾಯವಾಗುತ್ತದೆ' ಎನ್ನುತ್ತಾಳೆ ನಯನಾ. ವೈದ್ಯೆಯಾಗುವುದರ ಜತೆಗೆ ಭರತನಾಟ್ಯ ಹಾಗೂ ಕಥಕ್ ಕಲಾವಿದೆಯಾಗಬೇಕು ಎಂಬ ಕನಸು ನಯನಾಳದು.
ನಿಜವಾದ ನಾಟ್ಯದ ಸೊಗಡನ್ನು ಉಣಬಡಿಸುವ ಮಾಧ್ಯಮವೆಂದರೆ ಅದು ಭರತನಾಟ್ಯ ಮಾತ್ರ. ಅದು ನವರಸಗಳು ಒಂದಾಗುವ ವೇದಿಕೆಯೂ ಹೌದು. ನಾಟ್ಯರಸಿಕರ ಮನತಣಿಸುವ ಅತ್ಯದ್ಭುತ ಕಲಾಶಕ್ತಿ ಭರತನಾಟ್ಯಕ್ಕಿದೆ. ನಯನಾ ರಾವ್‌ಳ ತಾತ ನಾರಾಯಣ ರಾವ್‌ರ ನೆನಪಿನಲ್ಲಿ ಮೊನ್ನೆ ನಡೆದ ರಂಗಪ್ರವೇಶ ಕಾರ್ಯಕ್ರಮದಲ್ಲಿ ಈ ಕಿಶೋರಿ ಅದ್ಭುತ ನೃತ್ಯ ಪ್ರದರ್ಶಿಸಿ ಭವಿಷ್ಯದ ಭರತನಾಟ್ಯ ಕಲಾವಿದೆಯಾಗುವ ಎಲ್ಲ ಲಕ್ಷಣಗಳನ್ನೂ ತೋರಿದ್ದಾಳೆ, ಜನಮೆಚ್ಚುಗೆ ಗಳಿಸಿದ್ದಾಳೆ. 'ಆಲ್ ದಿ ಬೆಸ್ಟ್' ನಯನಾ ರಾವ್.
= ಶ್ರೀನಿಧಿ ಒಡಿಲ್ನಾಳ