ಹೆಣ್ಣಾಗಿ ಬಂದಿರುವೆ ನೀನಿಲ್ಲಿಗೆ...

ಹೆಣ್ಣಾಗಿ ಬಂದಿರುವೆ ನೀನಿಲ್ಲಿಗೆ...
Updated on: 

ತನ್ನನ್ನು ತಾನು ಸ್ತ್ರೀ ಎಂದು ಹೇಳಿಕೊಳ್ಳಲು ಮಹಿಳೆಯರು ಹೆಮ್ಮೆಪಡಬೇಕು. ದೇಹವನ್ನು ಹಿಗ್ಗಿಸುವ, ಕುಗ್ಗಿಸುವ, ಒಂದು ಜೀವವನ್ನು ಲೋಕಕ್ಕೆ ತರುವ ಸಾಮರ್ಥ್ಯವನ್ನು ಪಡೆದಿರುವ ಹೆಣ್ಣು ಗಂಡಿಗಿಂತ ಹೆಚ್ಚು ಸಮರ್ಥಳೂ, ಆದರಣೀಯಳೂ ಆಗಿದ್ದಾಳೆ ಎಂದು ಭಾಷಣ ಬಿಗಿಯುತ್ತಾ, ಈ ಕಾಲ ಮೊದಲಿನಂತಲ್ಲ ಯಾವುದೇ ಕ್ಷೇತ್ರದಲ್ಲಿ ಮಹಿಳೆ ಜಯ ಸಾಧಿಸಬಹುದು. ಸ್ವತಂತ್ರ ಮನೋಭಾವದಿಂದ, ಸ್ವಾಭಿಮಾನದಿಂದ ಯಾರಿಗೂ ತಲೆಬಾಗದೆ ಹೆಣ್ಣು ಬದುಕಬೇಕು. ಆತ್ಮಸ್ಥೈರ್ಯ ಪುಟಿದೇಳಬೇಕು, ಯಾರನ್ನೂ ಅವಲಂಬಿಸಬಾರದು. ಕಷ್ಟ ನಷ್ಟಗಳನ್ನು ಅನುಭವಿಸಿ ಮುಂದೆ ಬಂದಿರುವ ಹೆಣ್ಣುಮಕ್ಕಳ ಉದಾಹರಣೆ ಕೊಡುತ್ತಾ, ಸ್ತ್ರೀಯರನ್ನು ಜಾಗೃತಗೊಳಿಸಬೇಕೆಂಬ ಹಂಬಲ ನನ್ನದಾಗಿತ್ತು. ಆದರೆ ಇಂದು ಆಗಿರುವುದೇನು? ನನ್ನ ಗಂಟಲು ಉಡುಗಿಹೋಗಿದೆ. ಕೆಚ್ಚೆದೆಯ ಆದರ್ಶದ ಮಾತುಗಳು, ಗಂಡು, ಹೆಣ್ಣು ಸಮಾನರು ಎನ್ನುವ ಪದಗಳು ಹೊರಗೆ ಬರಲಾರದೆ ಗಂಟಲಲ್ಲೇ ಸಿಲುಕಿಕೊಂಡಿವೆ.
ನನ್ನಮ್ಮನಿಗೆ ಹೆಣ್ಣೆಂಬ ಕಾರಣಕ್ಕೆ ಆಗಿನ ಕಾಲದಲ್ಲಿ ಹೆಚ್ಚಿನ ಸ್ವಾತಂತ್ರ್ಯವಿರಲಿಲ್ಲ. ಆದರೆ ನಿರ್ಭಯತೆ ಇತ್ತು. ಈಗಿನಷ್ಟು ಭಯದ ವಾತಾವರಣದಲ್ಲಿ ಬದುಕಲಿಲ್ಲ ಅವಳು. ನೆಮ್ಮದಿಯ, ಆದರ್ಶಮಯ ಜೀವನ ನಡೆಸಿದಳು. ನನಗಿಂತ ನನ್ನ ಮಗಳು ಉತ್ತಮ ಜೀವನ ನಡೆಸಬೇಕೆಂಬ ಕನಸು ಮಾತ್ರ ಅವಳಿಗಿತ್ತು.
ನನಗೆ ಕಟ್ಟುಪಾಡಿನ ಸ್ವಾತಂತ್ರ್ಯವಿತ್ತು. ನನ್ನ ಮನೆಯ ವಾತಾವರಣ, ನಾನು ಬೆಳೆದ ಪರಿಸರ ಇವನ್ನೆಲ್ಲ ಅವಲಂಬಿಸಿ ನನಗೆ ನಾನೇ ಬೇಲಿಹಾಕಿಕೊಂಡಿದ್ದೆ. ಆದರೆ ಕಾಲೇಜಿಗೆ ನಿರ್ಭಯಳಾಗಿ ಹೋಗಿಬರುತ್ತಿದ್ದೆ. ಗಂಡುಮಕ್ಕಳು ಲೈಬ್ರರಿಯಲ್ಲಿ ಓದುತ್ತಿರುವಾಗ, ಆಸೆಯಿಂದ ಲೈಬ್ರರಿಯತ್ತ ನೋಡಿ ನಿಡುಸುಯ್ಯುತ್ತಾ, ಸಮಯಕ್ಕೆ ಸರಿಯಾಗಿ ಮನೆಗೆ ಹೋಗಬೇಕು. ಜತೆಯಲ್ಲಿರುವವರೆಲ್ಲ ಹೊರಟುಹೋದರೆ? ಎಂಬ ಚಿಂತೆಯಿಂದ ಓದುವ ಹಂಬಲವನ್ನೂ ಬದಿಗೊತ್ತಿ ಮನೆಯಕಡೆ ಹೆಜ್ಜೆ ಹಾಕುತ್ತಿದ್ದೆ. ಆಗ ಮಾತ್ರ 'ನಾನು ಹುಡುಗನಾಗಿರಬೇಕಾಗಿತ್ತು' ಎಂಬ ಯೋಚನೆ ಬರುತ್ತಿದ್ದುದು ಸತ್ಯ.
ಅಂದೇ ತೀರ್ಮಾನಿಸಿದ್ದೆ, ನನಗೆ ಮಗಳಾದರೆ ಅವಳಿಗೆ ಪೂರ್ತಿ ಸ್ವಾತಂತ್ರ್ಯ ಕೊಡುತ್ತೇನೆ. ಇನ್ನೊಬ್ಬರ ಅವಲಂಬನೆ ನನಗೆ ಬೇಡ. ನನ್ನ ಮನಸ್ಸಿನ ಆಸೆಯನ್ನು ಪೂರೈಸಿಕೊಳ್ಳುತ್ತೇನೆ. 'ಎಲ್ಲಿಗೆ ಬೇಕಾದರೂ ಹೋಗಿ, ಎಷ್ಟು ಬೇಕಾದರೂ ಓದುತ್ತೇನೆ' ಎನ್ನುವ ಮನಸ್ಥಿತಿ ಅವಳದಾಗಬೇಕು. ನನ್ನ ಹಾಗೆ ಬೇಲಿ ನಿರ್ಮಿಸಿಕೊಳ್ಳಬಾರದು ಎಂದುಕೊಂಡಿದ್ದೆ. ಏಕೆಂದರೆ, ನನ್ನ ಮನೆಯಲ್ಲಿ ಸ್ವಾತಂತ್ರ್ಯ ಕೊಟ್ಟಿದ್ದರೂ ಕಟ್ಟುಪಾಡನ್ನು ದಾಟಿ ಹೋಗುವ ಮನಸ್ಥಿತಿ ನಿರ್ಮಾಣವಾಗಿರಲಿಲ್ಲ. 'ನಾನು ಹೆಣ್ಣು. ಹೇಗಿರಬೇಕೋ ಹಾಗಿರಬೇಕು. ಅವರೆಲ್ಲ ಇರುವಂತೆ ನನಗಿರಲಾಗುವುದಿಲ್ಲ' ಎಂಬ ಕಾರಣ ಕೊಟ್ಟುಕೊಳ್ಳುತ್ತಾ ನನ್ನ ಆಸೆ-ಆಕಾಂಕ್ಷೆಗಳನ್ನು ನಿಯಂತ್ರಿಸುತ್ತಾ ಹೋದೆ. ಹಾಗಾಗಿ ನನ್ನ ಮಗಳಿಗೆ ಪ್ರಶಸ್ತವಾದ ವಾತಾವರಣ ಕಲ್ಪಿಸುತ್ತೇನೆ. ಅವಳನ್ನು ಹೆಣ್ಣೆಂಬ ಕಾರಣಕ್ಕೆ ಕುಗ್ಗಲು ಬಿಡುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದೆ.
ಆದರೆ ಈಗಾಗಿರುವುದೇನು!? ಹೆಚ್ಚಿನ ವಿದ್ಯಾಭ್ಯಾಸ ಹಾಗಿರಲಿ... ಶಾಲೆಗೆ ಕಳುಹಿಸುವುದು ಹೇಗೆ ಎಂಬ ಪರಿಸ್ಥಿತಿ ಬಂದೊದಗಿದೆ. ಶಾಲೆಗಿರಲಿ, ಹೊರಗಡೆ ಕಳುಹಿಸುವುದು ಹೇಗೆ? ಎಷ್ಟೋ ಮನೆಗಳಲ್ಲಿ ಮನೆಯಲ್ಲೇ ಸುರಕ್ಷಿತ ವಾತಾವರಣವಿಲ್ಲ. ಹೆಣ್ಣುಮಕ್ಕಳ ಸುರಕ್ಷತೆಯದೇ ಸಮಸ್ಯೆ. ಇದಕ್ಕೆ ಕಾರಣವಿಲ್ಲದಿಲ್ಲ. ನನ್ನಮ್ಮ ನಿರ್ಭಯವಾಗಿ, ಇರುವ ಅಲ್ಪ ಸ್ವಾತಂತ್ರ್ಯ ಬಳಸಿಕೊಂಡು ಆದರ್ಶ ಜೀವನ ನಡೆಸಿದಳು. ನಾನು ಹೆಚ್ಚು ಸ್ವಾತಂತ್ರ್ಯವಿದ್ದರೂ ಕಟ್ಟುಪಾಡಿನ ನೆಪ ಇಟ್ಟುಕೊಂಡು ಹೆಚ್ಚಿನದನ್ನು ಸಾಧಿಸದೇಹೋದೆ. ಆದರಿಂದು ನನ್ನ ಮಗಳು ಬಹಳಷ್ಟು ಹಿಂದೆ ಹೋಗಬೇಕಿದೆ! ಅರಳಬೇಕಾದ ಮೊಗ್ಗುಗಳು ಕಮರಿಹೋಗುತ್ತಿವೆ. ಈಗಾಗಲೇ ಕಮರಿಹೋದ ಮೊಗ್ಗುಗಳಿಗೆ ನ್ಯಾಯ ಸಿಕ್ಕಿಲ್ಲ.
ನಾನು ನಿತ್ಯ ನಿರ್ಭಯಳಾಗಿ ಶಾಲೆ-ಕಾಲೇಜಿಗೆ ಹೋಗಿ ಬರುತ್ತಿದ್ದ ಚಿರಪರಿಚಿತ ಗಲ್ಲಿಗಳು, ರಸ್ತೆಗಳು, ಅತಿ ಹೆಚ್ಚು ಪ್ರೀತಿಸುತ್ತಿದ್ದ ಜಾಗಗಳು ಈಗ ಭಯ ಹುಟ್ಟಿಸುತ್ತಿವೆ. ನಿತ್ಯ ಅತ್ಯಾಚಾರ, ಲೈಂಗಿಕ ಶೋಷಣೆಯ ವರದಿಗಳನ್ನು ಓದುತ್ತಾ ಓದುತ್ತಾ ಜನರಲ್ಲಿ ಅತಿ ಭಯಂಕರ ಪರಿಣಾಮ ಬೀರಬೇಕಾಗಿದ್ದ, ಆಕ್ರೋಶ ಹುಟ್ಟಿಸಬೇಕಾಗಿದ್ದ ವರದಿಗಳನ್ನು ಇಂದು ಸಾಮಾನ್ಯ ವರದಿಗಳಂತೆ ಓದಿ ಪತ್ರಿಕೆಯನ್ನು ಸಲೀಸಾಗಿ ಎತ್ತಿಟ್ಟುಬಿಡುತ್ತೇವೆ. ಆದರೆ ಆ ವರದಿಯನ್ನು ಓದಿದಾಗ, ಹೆಣ್ಣುಮಕ್ಕಳ ಬಗೆಗಿನ ತಾಯಂದಿರ ಕನಸು ನುಚ್ಚುನೂರಾಗುತ್ತಿರುವುದು ಯಾರ ಗಮನಕ್ಕೂ ಬರುತ್ತಿಲ್ಲ. ಬೆಚ್ಚಿಬೀಳಿಸುವ ವರದಿಗಳು ಅವಳನ್ನು ದುರ್ಬಲಳನ್ನಾಗಿಸುತ್ತಿದೆ. ಆದರ್ಶದ ಮಾತುಗಳೂ, ಸ್ತ್ರೀವಾದಗಳೂ ಕ್ಲೀಷೆ ಎನಿಸುತ್ತಿವೆ.

= ಬಿ. ತ್ರಿವೇಣಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com