

ಸದಾ ನಗುತ್ತಿರುವ ಅಮ್ಮನ ಮುಖದಲ್ಲ್ಲಿ, ಇಳಿ ವಯಸ್ಸಿನಲ್ಲಿ ತಲೆಯ ಕಪ್ಪು ಕೂದಲಿನ ಮಧ್ಯದಲ್ಲಿ ಅಲ್ಲೊಂದು ಇಲ್ಲೊಂದು ಇಣುಕುವ ಬಿಳಿ ಕೂದಲಿನಂತೆ ಇತ್ತೀಚೆಗೆ ಯಾಕೋ ಆತಂಕದ ಛಾಯೆ ಇಣುಕುತ್ತಿರುವುದು ಕಾಣಿಸುತ್ತಿದೆ.
ನಾನು ಅಂಬೆಗಾಲಿಡುತ್ತಿರುವಾಗ ಬಾಗಿಲ ಹಿಂಬದಿಗೆ ನಿಂತು ಇಣುಕಿ ನೋಡಿ ಖುಷಿಪಡುತ್ತಿದ್ದಳಂತೆ ಅಮ್ಮ. ನಂತರ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದಂದು ಪಾರಿತೋಷಕವನ್ನು ಹಿಡಿದೋಡಿ ಬಂದು ಅಮ್ಮನ ಅಪ್ಪಿದಾಗ ಆಕೆ ಸಂತೋಷದಿಂದ ಕಣ್ಣುತುಂಬಿ, 'ಮಗು, ಹೀಗೇ ಇನ್ನೂ ಉತ್ತಮ ಸ್ಥಾನವನ್ನು ಹೊಂದು' ಎಂದು ಆಶೀರ್ವದಿಸಿದ್ದಳು. ಅಮ್ಮನ ಆಸೆಯನ್ನು ಪೂರೈಸಬೇಕೆಂಬ ಇಚ್ಛೆಯಿಂದ ಆ ನಿಟ್ಟಿನಲ್ಲಿ ಸಫಲತೆಯ ಒಂದೊಂದೇ ಮೆಟ್ಟಿಲೇರುತ್ತಿದ್ದಂತೆ ಅದಾಗಲೇ ಪ್ರೌಢಾವಸ್ಥೆಗೆ ತಲುಪಿದ್ದೆ. ನಂತರ ನಾನು ಮದುವೆಯಾಗುವ ಹೊತ್ತಿಗೆ ಅಮ್ಮ ಮಧ್ಯವಯಸ್ಕಳಾಗಿಹೋಗಿದ್ದಳು.
ಇತ್ತ ಅಮ್ಮನನ್ನು ಹೆತ್ತೂರಲ್ಲೇ ಬಿಟ್ಟು, ಇನ್ನೂ ಉತ್ತಮ ಹುದ್ದೆಯನ್ನು ಹೊಂದಬೇಕೆಂಬ ಹಪಾಹಪಿಯಿಂದ ದೂರದೂರಿಗೆ ಹೋದದ್ದೇ ಅಮ್ಮನ ಮನಸ್ಸಿನ ಖುಷಿಯು ದೂರಾಗಿ ಮನಸ್ಸಿನ ಆತಂಕಕ್ಕೆ ಕಾರಣವಾಯಿತಾ? ಅಥವಾ 'ಇಳಿವಯಸ್ಸಿನಲ್ಲಿ ಹೆತ್ತವರಿಗೆ ಮಕ್ಕಳೇ ಊರುಗೋಲು' ಎಂದು ಅಂದು ಹೇಳಿದ ಮಾತು ಇಂದು ಮನಸ್ಸಿನ ಮೂಲೆಯಲ್ಲೆಲ್ಲೋ ಕುಳಿತು ಬಾಧಿಸುತ್ತಿದೆಯಾ? ಅಥವಾ ಅಪರೂಪಕ್ಕೆ ಅಲ್ಲಲ್ಲಿ ಕೇಳುತ್ತಿದ್ದ, ಕಾಣಿಸುತ್ತಿದ್ದ 'ಮಕ್ಕಳು ಹೆತ್ತವರಿಂದ ದೂರಾದರಂತೆ, ಮಕ್ಕಳು ಹೆತ್ತವರನ್ನು ಇಲ್ಲೇ ಬಿಟ್ಟು ಬೇರೆ ದೇಶಕ್ಕೆ ಹೊರಟುಹೋದರಂತೆ, ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸಿಬಿಟ್ಟರಂತೆ!' ಎಂಬ ಸುದ್ದಿಗಳಿಂದ, ಮುಂದೆ ಇಂಥ ಪರಿಸ್ಥಿತಿ ತನಗೂ ಬರಬಹುದೆಂಬ ಆತಂಕವಾ?
ಮೊದಲೆಲ್ಲಾ ಹತ್ತಾರು ಮಕ್ಕಳು ಇರುತ್ತಿದ್ದರು. ಒಬ್ಬರಲ್ಲದಿದ್ದರೆ ಇನ್ನೊಬ್ಬರು ಹೆತ್ತವರಿಗೆ ಆಸರೆಯಾಗುತ್ತಿದ್ದರು. ಹಾಗಾಗಿ ಆ ಕಾಲದಲ್ಲಿ ಅಭದ್ರತೆಯೇ ಕಾಡದೆ ಸಂಧ್ಯಾಕಾಲದ ಜೀವನ ನಡೆಯುತ್ತಿತ್ತು. ಆದರೆ ಇಂದು ಒಬ್ಬರೋ ಇಬ್ಬರೋ ಮಕ್ಕಳು. ಅವರವರ ಅವಶ್ಯಕತೆಯೋ, ಅನಿವಾರ್ಯತೆಯೋ ಊರಿಂದ ಊರಿಗೋ, ದೇಶದಿಂದ ವಿದೇಶಕ್ಕೋ ಹಾರಿಹೋಗುತ್ತಾರೆ. ಇಲ್ಲಿ ಸಂಧ್ಯಾಕಾಲದಲ್ಲಿ ನಮಗೆ ಊರುಗೋಲಾಗುವವರ್ಯಾರು ಎಂಬುದು ಅಮ್ಮನ ಮನದಲ್ಲಿ ಆತಂಕದ ಛಾಯೆ ಮೂಡಲು ಕಾರಣವಾಯಿತಾ...?
= ಪೂರ್ಣಿಮಾ ಎಸ್. ಭಟ್