

ಸೀಮಾ ಬಿಸ್ವಾಸ್
ಇವಳು ತೆರೆಮೇಲಿನ ಫೂಲನ್‌ದೇವಿ. ಫೂಲನ್ ಜೀವನಕಥೆಯಾಧರಿಸಿದ 'ಬ್ಯಾಂಡಿಟ್ ಕ್ವೀನ್'ಗೆ ಈಕೆಯೇ ನಾಯಕಿ. ಫೂಲನ್‌ದೇವಿಯ ಪ್ರತಿರೂಪವಾಗಿ ವೀಕ್ಷಕನ ನರನಾಡಿ ಸೂರೆಗೊಂಡಳು. ಪಾತ್ರದ ಕುರಿತಾಗಿ ಹಲವು ವಿವಾದಗಳಿಗೆ ಗುರಿಯಾದರೂ, 1996ರಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಬಾಚಿಕೊಂಡಳು.
ಶಬಾನಾ ಅಜ್ಮಿ
ಗಂಡನ ಕೊಲೆಗೆ ಪ್ರತೀಕಾರ ತೀರಿಸಲು ಪಣತೊಡುವ ಈಕೆಯ ವೀರಾವೇಶ 'ಗಾಡ್‌ಮದರ್' ಚಿತ್ರದಲ್ಲಿ ಸಮರ್ಪಕ. ವಿಧವೆಯನ್ನು ದುರ್ಬಳಕೆ ಮಾಡುವ ಸನ್ನಿವೇಶದಲ್ಲಿ ಶಬಾನಾಳ ಹೋರಾಟ, ಸರ್ವಸ್ತ್ರೀಯರಿಗೂ ಮಾದರಿ. ಸ್ತ್ರೀ ಶಕ್ತಿಯನ್ನು ಸಮರ್ಪಕವಾಗಿ ತೋರಿಸಿದ ನಟಿಯರಲ್ಲಿ ಶಬಾನಾ ಪ್ರಮುಖಳು.
ನಂದಿತಾ ದಾಸ್
'ಸುಪಾರಿ' ಸಿನಿಮಾ ವೀಕ್ಷಿಸಿದ ಮೇಲೆ ನಂದಿತಾರ ಕಟ್ಟಾ ಅಭಿಮಾನಿಗಳ ಸಂಖ್ಯೆ ದೊಡ್ಡದಾಗಿದೆ. 2003ರಲ್ಲಿ ತೆರೆಕಂಡ 'ಸುಪಾರಿ'ಯಲ್ಲಿ ನಂದಿತಾಳದ್ದು ಲೇಡಿ ಡಾನ್ ಪಾತ್ರ.
ಇಶಾ ಕೊಪ್ಪಿಕರ್
'ಖಲ್ಲಾಸ್ ಗರ್ಲ್' ಇಶಾ ಕೊಪ್ಪಿಕರ್ ಎಂದರಷ್ಟೇ ಆಕೆಯ ಅಭಿಮಾನಿಗಳಿಗೆ ಸಮಾಧಾನ. ಅಷ್ಟರಮಟ್ಟಿಗೆ 'ಶಬ್ರಿ' ಸಿನಿಮಾದಲ್ಲಿ ಮೋಡಿ ಮಾಡಿದ್ದಾಳೆ ಈಕೆ. ಸಾಮಾನ್ಯೆಯೊಬ್ಬಳು ಫೀಮೇಲ್ ಕ್ರೈಂ ಲಾರ್ಡ್ ಆಗುವುದು ಸಾಮಾನ್ಯದ ಮಾತಲ್ಲ!
ಶ್ರೀ ದೇವಿ
'ಶೆರ್ನಿ'ಯನ್ನು ಮರೆಯುವುದುಂಟೆ? 1988ರಲ್ಲಿ ತೆರೆ ಕಂಡಿದ್ದ ಈ ಚಿತ್ರದಲ್ಲಿ ಶ್ರೀದೇವಿಗೆ ಡಕಾಯಿತೆ ಪಾತ್ರ. ಆ ಕಾಲದಲ್ಲಿ ಇಂಥ ಪಾತ್ರಗಳಲ್ಲಿ ನಟಿಸುವ ಧೈರ್ಯ ಮಾಡಿದ ಏಕೈಕ ನಾಯಕಿ ಎಂದರೆ ಶ್ರೀದೇವಿಯೇ.
ನೇಹಾ ಧೂಪಿಯಾ
2010ರಲ್ಲಿ ತೆರೆಕಂಡ 'ಪಾಸ್ ಗಯೇ ರೇ ಒಬಾಮ'ದಲ್ಲಿ ನೇಹಾ ಗ್ಯಾಂಗ್‌ಸ್ಟಾರ್ ರೋಲ್‌ನಲ್ಲಿ ಅಬ್ಬರಿಸಿದ್ದಳು. ಪುರುಷರನ್ನು ದ್ವೇಷಿಸುತ್ತಾ ಅವರ ವಿರುದ್ಧ ತಿರುಗಿ ಬೀಳುವ ಪಾತ್ರ. ತನ್ನಿಂದ ಪ್ರೇರಿತಗೊಂಡ ಯುವತಿಯರನ್ನು ಕಟ್ಟಿಕೊಂಡು ಹೋರಾಡುವ ಆಕೆಯ ಪಾತ್ರ ಅನೇಕರಿಗೆ ಸ್ಫೂರ್ತಿ ತಂದುಕೊಟ್ಟಿದ್ದು ಸುಳ್ಳಲ್ಲ.
ಪ್ರತಿಮಾ ಕಾಜ್ಮಿ
'ಏಕ್ ಹಸೀನಾ ತಿ'ಯಲ್ಲಿ ಶಕ್ತಿಶಾಲಿ ಪಾತ್ರ ನಿರ್ವಹಿಸಿದ್ದು ಪ್ರತಿಮಾ ಕಾಜ್ಮಿ. ಜೈಲಿನಲ್ಲಿ ಊರ್ಮಿಳಾ ಮಾತೊಂಡ್ಕರ್‌ರನ್ನು ಭೇಟಿ ಮಾಡುವ ಪಾತ್ರ ಪ್ರಭಾವಶಾಲಿಯಾಗಿದೆ.
ಮಧು ಶಾಲಿನಿ
ರಾಮ್‌ಗೋಪಾಲ್ ವರ್ಮಾ ಟೀಮಿನಿಂದ ತೆರೆಕಂಡ 'ಡಿಪಾರ್ಟ್‌ಮೆಂಟ್'ನಲ್ಲಿ ಗ್ಯಾಂಗ್‌ಸ್ಟಾರ್ ಆಗಿ ಅವತಾರ ತಾಳಿದವಳು ಮಧು. ಆ ಪಾತ್ರವೂ ಹಾಗಿತ್ತು. ಈಕೆಯ ಆ್ಯಕ್ಟಿಂಗ್ ಕಂಡು ಸ್ವತಃ ರಾಮ್‌ಗೋಪಾಲ್ ವರ್ಮಾರೇ ದಂಗಾಗಿ ಹೋಗಿದ್ದರು.
= ಮಂಜುನಾಥ ಎಲ್.ಕೆ.