

ಸುಂದರವಾದ ತುಟಿ ಮುಖದಲ್ಲಿನ ಗ್ಲಾಮರಸ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸುಂದರ ತುಟಿ ನಗುತ್ತಿದ್ದರೆ ನೋಡುವುದೇ ಚೆಂದ. ಈಗ ಬಿಸಿಲು ದಿನದಿನಕ್ಕೂ ಹೆಚ್ಚುತ್ತಲೇ ಹೋಗುತ್ತಿದೆ. ಬಿಸಿಲಿನ ಬೇಗೆಗೆ ತುಟಿಯ ಅಂದ ಮಾಸುವುದು ಗ್ಯಾರಂಟಿ. ಇನ್ನು ಟೀ, ಕಾಫಿ ಸೇವನೆ, ಧೂಮಪಾನ ಮಾಡಿದರಂತೂ ತುಟಿ ಕಪ್ಪಾಗಿ ಅಂದಗೆಡುವುದು ಖಂಡಿತ. ಹಾಗಾದರೆ ತುಟಿಯ ಅಂದವನ್ನು ಕಾಪಾಡಿಕೊಳ್ಳುವುದು ಹೇಗೆ? ಲಿಪ್ ಸ್ಕ್ರಬ್ ಬಳಸುವುದರಿಂದ, ಪೀಲ್ಸ್ ಮಾಡುವುದರಿಂದ ತುಟಿ ಅಂದ ಹೆಚ್ಚಿಸಬಹುದು. ಆದರೆ ಅವೆಲ್ಲ ದುಬಾರಿ! ಹೆಚ್ಚಿನ ಖರ್ಚಿಲ್ಲದೆ ತಾಜಾ ತುಟಿಗಳನ್ನು ಪಡೆಯುವ ಬಗೆ ಹೇಗೆ? ಇಲ್ಲಿದೆ ಓದಿ..
- ನಿಂಬೆರಸ ಹಾಗೂ ಜೇನುತುಪ್ಪವನ್ನು ಸಮಪ್ರಮಾಣದಲ್ಲಿ ಬೆರೆಸಿ ಹದವಾಗಿ ತುಟಿಯ ಮೇಲೆ ಸವರಬೇಕು. ಒಂದು ಗಂಟೆಯ ನಂತರ ಮೃದುವಾದ ಒದ್ದೆ ಬಟ್ಟೆಯಿಂದ ಒರೆಸಬೇಕು. ಹೀಗೆ ಮಾಡುವುದರಿಂದ ಸಿಟ್ರಸ್ ರಸವು ತುಟಿಯ ತ್ವಚೆಯನ್ನು ಶುದ್ಧಗೊಳಿಸುವುದರೊಂದಿಗೆ ತುಟಿಯ ಬಣ್ಣವನ್ನು ಹೆಚ್ಚಿಸುತ್ತದೆ. ಜೇನುತುಪ್ಪ ತುಟಿಗೆ ಗುಲಾಬಿ ಬಣ್ಣ ಹೆಚ್ಚಲು ಸಹಕರಿಸುತ್ತದೆ. ದಿನಕ್ಕೆ 4-5 ಬಾರಿ ಈ ಮಿಶ್ರಣವನ್ನು ಹಚ್ಚುವುದು ಒಳಿತು. ಒಮ್ಮೆ ಮಾಡಿಟ್ಟುಕೊಂಡರೆ ಒಂದು ವಾರ ಬಳಸಬಹುದು.
ಪ್ರತಿದಿನ ರಾತ್ರಿ ಮಲಗುವ ಮುಂಚೆ ನೈಸರ್ಗಿಕ ಎಣ್ಣೆಯನ್ನು ಹತ್ತಿಯಿಂದ ಅದ್ದಿ ತುಟಿಗೆ ಲೇಪಿಸಿಕೊಳ್ಳುವ ಅಭ್ಯಾಸ ಒಳ್ಳೆಯದು. ಬಿಸಿಲಿನಿಂದ ಒಣಗಿದ ತುಟಿಗಳಿಗೆ ರಕ್ತಸಂಚಾರ ಹೆಚ್ಚಿಸಿ, ಬೆಳಗಾಗುವಷ್ಟರಲ್ಲಿ ರಸಭರಿತ ತುಟಿ ನಿಮ್ಮದಾಗಿರುತ್ತದೆ. ಇದಕ್ಕೆ ಬಾದಾಮಿ ತೈಲವನ್ನು ಬಳಸುವುದು ಸೂಕ್ತ.
ದಿನವೊಂದಕ್ಕೆ ಕಡಿಮೆ ಎಂದರೂ 8-10 ಗ್ಲಾಸ್ ನೀರು ಸೇವನೆ ಅಗತ್ಯ. ನೀರಿನಂಶ ದೇಹದಲ್ಲಿ ಹೆಚ್ಚಿದಷ್ಟೂ ತುಟಿಗಳು ತೇವಭರಿತವಾಗಿರುತ್ತವೆ. ಬಿಡುವಿರುವಾಗೆಲ್ಲ ಬೀಟ್ರೂಟ್ ತುಂಡುಗಳನ್ನು ತುಟಿ ಮೇಲೆ ಮೃದುವಾಗಿ ಸವರುತ್ತಿದ್ದರೆ ತುಟಿಯ ಗುಲಾಬಿ ಬಣ್ಣ ಇಮ್ಮಡಿಗೊಳ್ಳುತ್ತದೆ