ನಂಗೆ ಆ ಹುಡ್ಗ ಬೇಡ

ನಂಗೆ ಆ ಹುಡ್ಗ ಬೇಡ
Updated on: 

ಗೆಳತಿ ಹೇಳಿದ್ದು...
ಮದುವೆ ಇಷ್ಟೆಲ್ಲ ವಿಚಾರಗಳನ್ನು ನನಗೆ ತಿಳಿಸಿಕೊಡುತ್ತದೆ ಎಂದು ನಾನು ಭಾವಿಸಿರಲಿಲ್ಲ. ನನ್ನ ಕಲ್ಪನೆಗೆ ನಿಲುಕದ ಹಲವು ತುಡಿತಗಳು ಇದರೊಂದಿಗೆ ಐಕ್ಯವಾಗಿವೆ ಎಂಬ ಸಂಗತಿ ತಿಳಿದಿದ್ದು ಇದೀಗಷ್ಟೆ. ಇಷ್ಟು ದಿನ ನನ್ನದೇ ಭ್ರಮಾಲೋಕದಲ್ಲಿ ನಾನು ವಿಹರಿಸುತ್ತಿದ್ದೆ. ಇದನ್ನು ನೀವು ಮುಗ್ಧತೆ ಎನ್ನುವಿರೋ, ಮೂರ್ಖತನವೆನ್ನುವಿರೋ ನನಗೆ ತಿಳಿದಿಲ್ಲ. ಅದನ್ನೆಲ್ಲ ಈಗ ನೆನೆಸಿಕೊಂಡರೆ ನನ್ನ ಬಗ್ಗೆ ನನಗೇ ಸಿಟ್ಟು ಬರುತ್ತದೆ. ಅದನ್ನು ಹುಸಿ ನಗೆಯ ಮೂಲಕ ಹೊರಹಾಕುತ್ತಿದ್ದೇನೆ. ನೂರಾರು ಪ್ರಶ್ನೆಗಳು, ಹತ್ತು ಹಲವು ಸಂಶಯಗಳು ಕ್ಷಣ ಕ್ಷಣಕ್ಕೂ ಜನ್ಮ ತಳೆಯುತ್ತಲೇ ಇವೆ. ಇರಲಿ, ಇದೆಲ್ಲ ನನ್ನ ಬದುಕಿನ ಅನಿವಾರ್ಯ ಕರ್ಮ. ಆದರೂ ಹೇಳಿಕೊಳ್ಳಲೇಬೇಕು.
ಯಾರೋ ಬರ್ತಾರೆ. 'ನಿಮ್ಮ ಹುಡುಗಿಗೆ ಒಂದು ಗಂಡು ತೋರ್ಸೋಣ' ಅಂತ ಅಪ್ಪ-ಅಮ್ಮನ ಬಳಿ ಕೇಳ್ತಾರೆ. ಮೊದಮೊದಲು ನನಗೂ ಇದು ಸಂಭ್ರಮದ ವಿಚಾರ. ಆದರೆ ಈಗ ಇದನ್ನು ನೆನೆದರೆ ವಾಕರಿಕೆ ಬರುತ್ತೆ. ನನ್ನ ಅಸಮಾಧಾನ ಹೊರಹಾಕಲು ಯಾವ ವೇದಿಕೆಯೂ ದೊರೆಯುತ್ತಿಲ್ಲ. ನನ್ನವರೆಂದು ಇರುವವರೆಲ್ಲರದ್ದೂ ಒಂದೇ ಗೊಣಗಾಟ, 'ಮೊದಲು ಇವಳನ್ನು ಮದುವೆ ಮಾಡಿ ನಮ್ಮ ಹೆಗಲ ಮೇಲಿನ ಭಾರ ಇಳಿಸಿಕೊಳ್ಳಬೇಕು'. ನನ್ನ ಭವಿಷ್ಯ ಅವರಿಗೆ ಸಂಬಂಧಿಸದ ವಿಷಯ.
ಅಬ್ಬಾ, ಅದೆಷ್ಟು ಮುಖಗಳು, ಅದೆಷ್ಟು ಬೇಡಿಕೆಗಳು. ಕೇಳಿದರೆ ಸಾಕು ಬೆಚ್ಚಿ ಬೀಳುತ್ತೇನೆ. ಇನ್ನು ಅವುಗಳನ್ನು ಪೂರೈಸುವವರ ಪೀಕಲಾಟ ಹೇಗಿರಬಹುದೆಂಬ ಅರಿವು ನನಗಿದೆ. ನಾನೇನೂ ಕಡಿಮೆ ಇಲ್ಲ. ನನ್ನದೂ ನಿರೀಕ್ಷೆಗಳ ಮೇಲಿನ ಪಯಣವೇ. ಕಾಲದ ಕ್ರೌರ್ಯಕ್ಕೆ ಸಿಕ್ಕು ನಿರೀಕ್ಷೆಗಳು ಕೋಮಾ ತಲುಪಿವೆ ಅಷ್ಟೆ.
ನನ್ನನ್ನು ಒಂದು ವಿಚಾರ ಗಂಭೀರವಾಗಿ ಕಾಡುತ್ತಿದೆ. ಅದು 'ನಾನೂ ಲವ್ ಮಾಡ್ಬೇಕಿತು'್ತ. ಹೌದು ನಿಜವಾಗಿಯೂ ನನಗೀಗ ಹಾಗನಿಸುತ್ತಿದೆ. ಅಂದು 'ನನ್ನನ್ನು ಲವ್ ಮಾಡ್ತೀಯಾ?' ಅಂತ ಒಂದಿಬ್ಬರು ಹುಡುಗರು ಬಂದು ಕೇಳಿದ್ದರು. ನಾನೇನೂ ಸುಂದರಿಯಲ್ಲ, ಬುದ್ಧಿವಂತೆಯೂ ಅಲ್ಲ. ಆದರೂ ಅವರು ನನ್ನನ್ನೇಕೆ ಇಷ್ಟಪಟ್ಟರೆಂಬುದು ತಿಳಿದಿಲ್ಲ. ನಾನು ಆಚಾರ-ವಿಚಾರ, ಮನೆತನದ ಮಾನ-ಮರ್ಯಾದೆ, ಅದು-ಇದು ಅಂತ ಅವರ ಆಫರ್ ತಿರಸ್ಕರಿಸಿಬಿಟ್ಟೆ. ಆದರೆ ನನಗೆ ಗೊತ್ತು, ಲವ್ ಮಾಡಿ ಮದುವೆಯಾದವರೆಲ್ಲರೂ ಸುಖವಾಗಿ ಸಂಸಾರ ಸಾಗಿಸುವುದಿಲ್ಲವೆಂದು. ಆದರೂ...
ಬೇರೆ ಯಾರೋ ಮಾಡಿದ ಆಯ್ಕೆಯು ತಪ್ಪಾಗಿ ನಾನು ಪರಿತಪಿಸುವುದಕ್ಕಿಂತ ಸ್ವತಃ ನಾನೇ ತೀರ್ಮಾನ ಕೈಗೊಳ್ಳುವುದು ಸೂಕ್ತವಲ್ಲವೇ? ಒಂದು ವೇಳೆ ಆಯ್ಕೆ ತಪ್ಪಾದರೂ ಬೇರೆಯವರನ್ನು ದೂಷಿಸುವ ಪ್ರಮೇಯವೇ ಉದ್ಭವಿಸದು. ಎಲ್ಲದಕ್ಕೂ ನಾನೇ ಹೊಣೆಯಾಗಿರುತ್ತೇನೆ.
ಇದನ್ನೆಲ್ಲ ಹೇಳಬೇಕೆಂದು ಎಷ್ಟೋ ದಿನಗಳಿಂದ ಹಪಹಪಿಸುತ್ತಿದ್ದ ನನಗೆ ಇದುವರೆಗೂ ಕೇಳುವ ಕಿವಿ ಸಿಕ್ಕಿರಲಿಲ್ಲ. ಸಹನೆಯಿಂದ ಆಲಿಸಿದ್ದಕ್ಕೆ ಥ್ಯಾಂಕ್ಸ್.

= ಎಚ್.ಕೆ. ಶರತ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com