ಅತ್ತೆ ಸೊಸೆ ಸೀರಿಯಲ್ಲು

ನಂದಿನಿ ಮದುವೆಯಾದ ಹೊಸತು, ಗಂಡನ ಮನೆಯ ಬಗ್ಗೆ ನೂರೆಂಟು ಕನಸುಗಳು, ಭ್ರಮೆಗಳು ಮತ್ತು ಭಯಗಳು. ಅತ್ತೆಯನ್ನು ಅಮ್ಮನಂತೆ ಕಾಣಬೇಕು, ಅವಳು ನನ್ನನ್ನು ಮಗಳಂತೆ ಮುದ್ದು ಮಾಡಬೇಕು ಎಂದೆಲ್ಲ ಮನಸ್ಸಿನಲ್ಲೇ ಮಂಡಿಗೆ ಮೆದ್ದ ಅವಳಿಗೆ ಅತ್ತೆಯ ಗಡಸು ಮಾತುಗಳು, ವ್ಯಕ್ತಿತ್ವ ಸ್ವಲ್ಪ ನೋವು ತರಿಸಿದ್ದವು. ಇರಲಿ ಬಿಡು, ಎಷ್ಟು ದಿನ ಇಲ್ಲಿರಬೇಕು? ಗಂಡ ನಾನು ಬೆಂಗಳೂರಿನಲ್ಲಿರುವುದು ತಾನೇ ನಾಲ್ಕು ದಿನ ಹೊಂದಿಕೊಂಡರಾಯಿತು ಎಂದು ಸುಮ್ಮನಾದಳು.
ಆ ನಾಲ್ಕು ದಿನಗಳು ನಾಲ್ಕು ವರ್ಷಗಳಂತೆ ಸಾಗಿದವು. ಮಾತು ಮಾತಿಗೆ ಅತ್ತೆ ನನ್ನ ಮಗನನ್ನು ನಿನಗೆ ಬಿಟ್ಟು ಕೊಡುತಿದ್ದೇನೆ, ಅವನು ಬಂಗಾರ, ವಜ್ರ ಎಂದೆಲ್ಲ ಆಡುತ್ತಿದ್ದ ಮಾತುಗಳು, ನಾನೇನು ಕಬ್ಬಿಣವೇ? ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುವಂತೆ ಮಾಡಿತ್ತು. ತನಗೆ ಓಡಾಡಲು ಒಂದು ಸೈಕಲ್ ಇಲ್ಲದಿದ್ದರೂ ಮನೆಯ ಅವಶ್ಯಗಳನ್ನು ಪೂರೈಸಿದ್ದ ಗಂಡ ವಿಶಾಖನನ್ನು ಕಂಡು ಹೆಮ್ಮೆ ಪಡಬೇಕೋ? ತನ್ನ ಅದೃಷ್ಟವ ಕಂಡು ಮರುಗಬೇಕೋ ತಿಳಿಯದಾಗಿತ್ತು.
ಬೆಂಗಳೂರಿಗೆ ಬಂದು ನೆಮ್ಮದಿಯ ಕಂಡ ಅವಳ ದಿನಗಳು ಸರಾಗವಾಗಿ ಸಾಗಿದ್ದವು ಎನ್ನುವಂತಿರಲಿಲ್ಲ. ತಡರಾತ್ರಿ ಫೋನ್ ಮಾಡುತ್ತಿದ್ದ ಅತ್ತೆ ಮಗನಿಂದ ನಿತ್ಯದ ಆಗುಹೋಗುಗಳ ಬಗ್ಗೆ ವಿಚಾರಿಸುತ್ತಿದ್ದಳು. ಇದನ್ನು ಕಾಳಜಿ ಎನ್ನಬೇಕೋ ತಾವಿಬ್ಬರು ಸೇರುವುದು ಇಷ್ಟವಿಲ್ಲ ಎನ್ನಬೇಕೋ ಎಂದು ತಿಳಿಯದ ನಂದಿನಿ ಮಗ್ಗಲು ಬದಲಿಸಿ ಮಲಗುತ್ತಿದ್ದ ದಿನಗಳಿಗೆ ಲೆಕ್ಕಗಳೇ ಇರಲಿಲ್ಲ. ಕೆಲವೊಮ್ಮೆ ಸುತ್ತಲಿನವರ ಕಂಡಾಗ ನಾವೂ ಎಲ್ಲರಂತೆ ಯಾಕಿಲ್ಲ? ಲಕ್ಷ ಸಂಪಾದಿಸುವ ಗಂಡನಾದರೂ ಸುತ್ತಾಡಲು ಒಂದು ಸ್ಕೂಟರ್ ಇಲ್ಲ. ಈ ಮಧ್ಯ ತಾನು ತಾಯಿಯಾಗುತ್ತಿರುವುದರಿಂದ ಪ್ರತಿರಾತ್ರಿ ಅತ್ತೆ ಫೋನಾಯಿಸಿ 'ಮೊದಲ ಮಗು ಗಂಡೇ ಆಗಬೇಕು. ಅದು ತನ್ನ ಮಗನ ಜವಾಬ್ದಾರಿಯನ್ನು ಕಡಿಮೆ ಮಾಡುತ್ತದೆ' ಎನ್ನುವುದನ್ನು ಕೇಳಿ ಕೇಳಿ ಖಿನ್ನಳಾಗಿದ್ದಳು. ಅಕಸ್ಮಾತ್ ಹೆಣ್ಣಾದರೆ ಏನಾಗುವುದೋ ಎನ್ನುವ ಭಯ ಅವಳನ್ನು ಅತ್ತೆಯ ಬಗ್ಗೆ ಕೆಟ್ಟ ಧೋರಣೆಯನ್ನು ತಳೆಯುವಂತೆ ಮಾಡಿತ್ತು. ಗಂಡು ಮಗುವೇ ಆದಾಗ ನಿಟ್ಟುಸಿರು ಬಿಟ್ಟಿದ್ದಳು ನಂದಿನಿ. ತಾನು ಕೆಲಸಕ್ಕೆ ಹೋಗಿ ಗಂಡನ ಕಷ್ಟದಲ್ಲಿ ತನ್ನದೂ ಕೈ ಸೇರಿಸಬೇಕಾದಾಗ ಅತ್ತೆ ಬಂದು ಮಗುವನ್ನು ನೋಡಿಕೊಳ್ಳುವುದೆಂದು ನಿರ್ಣಯವಾಯಿತು.
ಎರಡು ಮೂರು ತಿಂಗಳು ಕಳೆಯುವುದರೊಳಗೆ ನಂದಿನಿ ಅತ್ತೆಯ ವರ್ತನೆಗೆ ಬೇಸತ್ತಳು. ಯಾವ ಸಾಮಾನು, ಬಟ್ಟೆ ತಂದರೂ ಅದರ ಬೆಲೆಯನ್ನು ಪರಿಶೀಲಿಸುವುದು, ಮಗುವಿನ ಬಾಯಿಗೆ ಬಾಯಿಟ್ಟು ಮುತ್ತು ಕೊಡುವುದು, ಗಂಡ ಹೆಂಡತಿ ಎಲ್ಲಿಗೆ ಹೊರಟರೂ ಹಿಂಬಾಲಿಸುವುದು... ನಂದಿನಿ ಐದು ತಿಂಗಳಿಗೆ ಸುಸ್ತೆದ್ದು ಹೋದಳು. ಒಂದು ದಿನ ಕೆಲಸ ಬಿಟ್ಟು ಮನೆಯಲ್ಲಿ ಕೂರುವ ನಿರ್ಧಾರವನ್ನೂ ಮಾಡಿಬಿಟ್ಟಳು. ಅದಾದ ನಂತರ ಎರಡು ತಿಂಗಳಲ್ಲಿ ಅತ್ತೆಯೊಂದಿಗೆ ಜಗಳವಾಡಿ ಮನೆಗೆ ಕಳುಹಿಸಿದ್ದೂ ಆಯಿತು. ಅತ್ತೆ ಮನೆಯ ಕಡೆ ತಲೆ ಹಾಕದೆ ನೆಮ್ಮದಿಯಿಂದಿದ್ದಳು.
ಹೀಗಿರುವಾಗ ಇತ್ತೀಚೆಗೆ ಹಬ್ಬಕ್ಕೆಂದು ಹತ್ತು ದಿನ ಅತ್ತೆಯ ಮನೆಗೆ ಹೋಗಬೇಕಾಯಿತು. ಎಂದಿನಂತೆ ಇಷ್ಟವಿಲ್ಲದಿದ್ದರೂ ಗಂಡನ ಮುಖ ನೋಡಿ ಅವನಿಗೆ ಬೇಸರವಾಗಬಾರದೆಂದು ಹೊರಟಳು. ಅಲ್ಲಿಗೆ ಹೋದ ಎರಡೇ ದಿನದಲ್ಲಿ ಹುಷಾರು ತಪ್ಪಿ ಹಾಸಿಗೆ ಹಿಡಿದಳು ನಂದಿನಿ. ಆಗ ಅತ್ತೆ ಅವಳ ಪಕ್ಕದಲ್ಲಿಯೇ ಇದ್ದು ಮಗುವಿನಂತೆ ನೋಡಿಕೊಂಡಳು. ಅಲ್ಲಿದ್ದ ಅಷ್ಟೂ ದಿನ ಅವಳಿಗೆ ಈ ಸಾರಿ ತವರು ಮನೆಯನ್ನು ನೆನಪಿಸಿತು. ಅತ್ತೆಯ ಮಡಿಲಲ್ಲಿ ಅಮ್ಮನ ಕಾಣುತ್ತಿರುವಂತೆ ಭಾಸವಾಯಿತು. ಕಾರಣ ತಿಳಿಯದೆ ಮೂಕಳಾಗಿಯೇ ಇದ್ದ ಅವಳನ್ನು, ಬರುವ ದಿನ ಅತ್ತೆಯ ಕಣ್ಣುಗಳಲ್ಲಿನ ಮುತ್ತಿನ ಬಿಂದು ದಾರಿಯುದ್ದಕೂ ಕಾಡಿತ್ತು. ಮನದಲ್ಲಿ ತವರು ಬಿಟ್ಟು ಬರುವಾಗ ಇರುವ ದುಗುಡ ಮತ್ತೆ ಎದ್ದಂತೆ ಅನಿಸುತ್ತಲಿತ್ತು. ಮೌನಕ್ಕೆ ಶರಣಾಗಿದ್ದ ಕಣ್ಣುಗಳು ಅವಳಿಗರಿವಿಲ್ಲದೆಯೇ ನೀರಾಗಿದ್ದವು. ಅತ್ತೆಯ ಮಡಿಲ ನೆನಪಲ್ಲೇ ದಾರಿ ಸಾಗುತ್ತಲಿತ್ತು.
ಇದು ನಂದಿನಿಯೊಬ್ಬಳ ಕಥೆಯಲ್ಲ. ಹೆಚ್ಚಿನ ಅತ್ತೆಸೊಸೆಯರ ಸಂಬಂಧ ಹೀಗೆಯೇ ಅಲ್ಲವೇ?ಟಿ
-ಜಮುನಾ ರಾಣಿ ಎಚ್.ಎಸ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


