ಗೊಂಬೆಗೆ ಜೀವವಿದೆ..!

ಅಗಣಿತ ಕನಸುಗಳಿಗೆ ವಾರಸುದಾರಳಾದ ಹುಡುಗಿ ವೇದಿಕೆ ಮೇಲೆ ಮೈ ಕಾಣುವ ಬಟ್ಟೆ ತೊಟ್ಟು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಅಗಣಿತ ಕನಸುಗಳಿಗೆ ವಾರಸುದಾರಳಾದ ಹುಡುಗಿ ವೇದಿಕೆ ಮೇಲೆ ಮೈ ಕಾಣುವ ಬಟ್ಟೆ ತೊಟ್ಟು ನಿಂತಿದ್ದಳು. ಗಂಡಸರ ಕುಕ್ಕುವ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲವೆಂಬ ಅರಿವಾಗಿ, ಅರೆ ಬೆತ್ತಲಾಗಿ ನಿಂತರೂ ಮುಜುಗರ ಪಟ್ಟುಕೊಳ್ಳದ ಮನಸ್ಥಿತಿಗೆ ತನ್ನನ್ನು ಒಗ್ಗಿಸಿಕೊಂಡಿದ್ದಳು.

ಅವಳು ತನ್ನ ಹೆಸರಿನ ಮುಂದೆ ಜಗದ್ವಿಖ್ಯಾತ ಎಂಬ ಹೆಸರು ಪೋಣಿಸಿಕೊಂಡ ಜಾದೂಗಾರನಿಗೆ ಸಹಾಯಕಿ. ಅವನ ಹತ್ತು ಹಲವು ಜಾದೂಗಳಿಗೆ ಬಳಕೆಯಾಗುವ ಜೀವಂತ ಪರಿಕರ. ಜನರ ಕಣ್ಣುಗಳಿಗೆ ಜಾದೂಗಾರನ ಕಸರತ್ತುಗಳು ಅಚ್ಚರಿಯಾಗಿ ತೋರುತ್ತವೆ. ಅವನ ಕೈ ಕೆಳಗೆ ದುಡಿಯುವ ಇವಳ ನೋವುಗಳು ಯಾರ ನೋಟಕ್ಕೂ ಸಿಗದೆ ಅನಾಥವಾಗಿ ಉಳಿಯುತ್ತವೆ.

ಬದುಕಲೇಬೇಕೆಂಬ ಹಂಬಲ, ಬದುಕಲು ಬಿಡದ ಬಡತನ ಅವಳನ್ನು ಜಾದೂಗರನ ನಿರ್ಭಾವುಕ ಲೋಕಕ್ಕೆ ಎಳೆ ತಂದಿದೆ. ತನ್ನ ಕೈ ಚಳಕದ ಮೂಲಕ ಎಲ್ಲವನ್ನೂ ಮಾಯ ಮಾಡುವ, ಶೂನ್ಯದಿಂದ ಏನೇನನ್ನೋ ಸೃಷ್ಟಿಸುವ ಭ್ರಮೆ ಹುಟ್ಟಿಸುವ ಅವನಿಗೆ ಇವಳ ನೋವುಗಳನ್ನು ಕಾಣದ ಲೋಕಕ್ಕೆ ಕೊಂಡೊಯ್ಯುವ ಕನಸುಗಳಿಗೆ ರೆಕ್ಕೆ ಮೂಡಿಸಿ ಹಾರುವಂತೆ ಮಾಡುವ ಬಗೆ ಗೊತ್ತಿಲ್ಲ.

ಸಂವೇದನೆ ಕಳೆದುಕೊಂಡ ಅವನ ಸಹವಾಸದ ದೆಸೆಯಿಂದ ಇವಳಿಗೂ ನಿರ್ಭಾವುಕತೆಯ ಸೋಂಕು ತಗುಲಿದೆ. ಥೇಟು ಜೀವಂತ ಬೊಂಬೆಯಂತೆ ವೇದಿಕೆ ಮೇಲೆ ವರ್ತಿಸುವ ಪರಿ ಕರಗತವಾಗಿದೆ.

ವೇದಿಕೆ ಮೇಲೆ ನಿಂತು ಹಳೆ ಕನಸುಗಳಿಗೆ ಮಸಣದ ಹಾದಿ ತೋರಲು ಹೊರಡುವ ಅವಳ ಕಣ್ಣಿಗೆ ಆಗಾಗ ಪ್ರೇಕ್ಷಕರ ಗುಂಪಿನಲ್ಲಿ ಕನಸಿನ ಹುಡುಗ ಕಾಣಸಿಗುತ್ತಾನೆ. ಅವಳು ವೇದಿಕೆ ಮೇಲೆ ನಿಂತು ಜಾದೂಗಾರನ ತಾಳಕ್ಕೆ ತಕ್ಕಂತೆ ಕುಣಿಯುತ್ತಲೇ ಹಳೆ ಕನಸಿನ ಬೀದಿಯಲ್ಲಿ ನಿಂತು ಹೊಸ ಕನಸು ಹೆಣೆಯುತ್ತಾಳೆ.

ನೆನಪಿನ ಪುಟಗಳಲ್ಲಿ ಅಚ್ಚಾಗಿ ಉಳಿದಿರುವ ಅವಳ ಪುಟ್ಟ ಜಗತ್ತಿನ ಚಿತ್ರಗಳು ಕಣ್ಮುಂದೆ ಸುಳಿಯುತ್ತವೆ. ಬಡತನದ ಮಡುವಲ್ಲೂ ಚಿಮ್ಮುವ ಜೀವನ ಪ್ರೀತಿ ಅವಳನ್ನು ಆರ್ದ್ರವಾಗಿಸುತ್ತದೆ. ತನ್ನ ಮೊಟ್ಟ ಮೊದಲ ಕನಸಿನ ಹುಡುಗ ಒಳಗಿಳಿದು ಬಿಡುತ್ತಾನೆ. ಅವನ ತುಂಟಾಟಗಳು, ಪೋಲಿ ಗುಣಗಳು, ಬದುಕುವ ಹಸಿವು ಕರುಣಿಸಿದ ಮಾತುಗಳು ಅವಳನ್ನು ವರ್ತಮಾನದ ತೆಕ್ಕೆಯಿಂದ ಬಹುದೂರ ಕೊಂಡೊಯ್ದು ಹಳೆ ನಿಟ್ಟುಸಿರಿನ ಮರು ಪರಿಚಯ ಮಾಡಿಸುತ್ತವೆ.

ಪ್ರೇಕ್ಷಕರ ಸಾಲಿನಲ್ಲಿ ಕುಳಿತವರ ಕೈಗಳು ಚಪ್ಪಾಳೆ ತಟ್ಟುವುದರೊಂದಿಗೆ ಇವಳ ನೆನಪಿನ ಹಾದಿಯಲ್ಲಿನ ಪಯಣಕ್ಕೆ ಅರ್ಧ ವಿರಾಮ ಬೀಳುತ್ತದೆ. ಕೆಲವರಿಗೆ ಸಕಲೆಂಟು ನಲಿವುಗಳನ್ನು ದಯಪಾಲಿಸುವ ಕಾಣದ ದೇವರು, ತನ್ನನ್ನೇಕೆ ನೋವಿನ ಲೋಕದ ರಾಜಕುಮಾರಿಯ
ಪಟ್ಟಕ್ಕೇರಿಸಿದ್ದಾನೆ ಎಂದು ಅವಳು ಸಮಯ ಸಿಕ್ಕಾಗ, ಹಾಸಿಗೆಯ ಮೇಲೆ ಮಲಗಿಸಿಕೊಂಡು ಹೊಸ ಕನಸು ಹಡೆಯಲಾಗದೇ ಸೋತಾಗ ತನ್ನೊಳಗೇ ಪ್ರಶ್ನಿಸಿಕೊಳ್ಳುತ್ತಾಳೆ.

ವೇದಿಕೆ ಮೇಲೆ ನಿಂತ ಕೂಡಲೇ ತನ್ನನ್ನು ಆವರಿಸುವ ನಿರ್ಭಾವುಕತೆ ವೇದಿಕೆಯಿಂದ ಕೆಳಗಿಳಿದು ಬಂದ ಮೇಲೂ ತೊರೆಯದೇ ಹೋಗಿದ್ದರೆ ಬದುಕು ಒಂದಷ್ಟು ಸಹನೀಯವಾಗಿರುತ್ತಿತ್ತು ಎಂದು ಅವಳು ಎಷ್ಟೋ ಬಾರಿ ಅಂದುಕೊಂಡಿದ್ದಾಳೆ.

ಪ್ರತಿ ದಿನ ಮೈ ತುಂಬ ಬಣ್ಣ ಬಳಿದುಕೊಂಡು, ಕೃತಕ ನಗೆ ಕಾರಿಕೊಂಡು ಜಗದ ಜನರೆದುರು ನಿಲ್ಲುವುದೇ ನನ್ನ ಬದುಕಾಯಿತಲ್ಲ ಎಂಬ ಕೊರಗು ಅವಳನ್ನು ಕಾಡಿದ್ದಿದೆ. 'ಪಾಲಿಗೆ ಬಂದದ್ದು ಪಂಚಾಮೃತ' ಎಂಬ ವೇದಾಂತ ನುಡಿಯುವ ಮಂದಿಯ ಎಡೆಗೆ ಅವಳಲ್ಲಿ ಆಕ್ರೋಶ ಮಡುಗಟ್ಟಿದೆ. ಬದುಕು ದಿಕ್ಕಾಪಾಲಾದ ಮೇಲೆ ಪಾಲಿಗೆ ಬರುವುದಾದರೂ ಏನೆಂಬ ಜಿಜ್ಞಾಸೆ ಬೇರೂರಿದೆ.

ತನ್ನನ್ನು ಸುಮ್ಮನೆ ನೋಡಿ ಅನುಕಂಪ ತೋರುವವರ ಬಗೆಗೂ ಅವಳಲ್ಲಿ ಅಸಹನೆ ಮನೆ ಮಾಡಿದೆ. ಯಾರೂ ಸುಖಾಸುಮ್ಮನೆ ಕನಿಕರ ತೋರಲಾರರು ಎನ್ನುವುದು ಅವಳ ನಿಲುವು. ಮಾತು ಮಾತಿಗೂ ಬಣ್ಣ ಬದಲಿಸುವ ಮನಸು, ಎಲ್ಲಿಂದಲೋ ಬಂದು ಎದೆಯೊಳಗೆ ಬೇರೂರುವ ಕನಸು, ತಾನೆ ಹಡೆಯುವ ಅತಾರ್ಕಿಕ ಮುನಿಸು ಅವಳನ್ನು ಇನ್ನೂ ಜೀವಂತವಾಗಿರಿಸಿವೆ.

-ಎಚ್.ಕೆ.ಶರತ್ ಹಾಸನ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com