

ವಾಷಿಂಗ್ಟನ್: ಕಳೆದ ವಾರ ಕ್ಯಾಲಿಫೋರ್ನಿಯಾದಲ್ಲಿ ಮುಸ್ಲಿಂ ದಂಪತಿ ಶೂಟೌಟ್ ಮಾಡಿ ಸಾಮೂಹಿಕ ಹತ್ಯೆಗೆ ಕಾರಣವಾದ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ಮುಸಲ್ಮಾನರು ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು ಎಂದು ಅಮೆರಿಕ ಅಧ್ಯಕ್ಷೀಯ ಪದವಿಯ ರಿಪಬ್ಲಿಕನ್ ಅಗ್ರಗಣ್ಯ ಸ್ಪರ್ಧಿಯಾಗಿರುವ ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದಾರೆ.
ನಮ್ಮ ದೇಶದ ಪ್ರತಿನಿಧಿಗಳು ಏನಾಗುತ್ತಿದೆ ಎಂದು ತಿಳಿದುಕೊಳ್ಳುವವರೆಗೆ ಮುಸಲ್ಮಾನರನ್ನು ದೇಶದೊಳಗೆ ಬಿಡಬಾರದು ಎಂದು ಟ್ರಂಪ್ ಅವರ ಪ್ರಚಾರ ತಂಡದಿಂದ ಹೇಳಿಕೆ ಬಿಡುಗಡೆ ಮಾಡಲಾಗಿದೆ. ಟ್ರಂಪ್ ಅವರ ಈ ಹೇಳಿಕೆ ವಲಸಿಗರ ಮತ್ತು ಪ್ರವಾಸಿಗರ ಮೇಲೆ ಪ್ರಭಾವ ಬೀರುತ್ತದೆಯೇ, ಅಥವಾ ವಿದೇಶಗಳಲ್ಲಿರುವ ಅಮೆರಿಕದ ಮುಸಲ್ಮಾನರನ್ನು ಈ ದಾಳಿ ಗುರಿಯಾಗಿರಿಸಿಕೊಂಡಿದೆಯೇ ಎಂದು ಸ್ಪಷ್ಟವಾಗಿ ತಿಳಿಸಿಲ್ಲ.
ಇದೀಗ ಅಮೆರಿಕದಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಟ್ರಂಪ್ ಅವರು ಸ್ಪರ್ಧಾ ಕಣದಲ್ಲಿ ಮುಂಚೂಣಿಯಲ್ಲಿದ್ದಾರೆ. ಕಳೆದ ತಿಂಗಳು ಪ್ಯಾರಿಸ್ ಮೇಲೆ ನಡೆದ ದಾಳಿ ಮತ್ತು ಕಳೆದ ವಾರ ಕ್ಯಾಲಿಫೋರ್ನಿಯಾದಲ್ಲಿ ನಡೆದ ದಾಳಿ ನಂತರ ಅವರು ತಮ್ಮ ಚುನಾವಣಾ ರ್ಯಾಲಿಯಲ್ಲಿ ಅಮೆರಿಕದ ಮುಸಲ್ಮಾನರನ್ನೇ ಗುರಿಯಾಗಿಟ್ಟುಕೊಂಡು ಮಾತನಾಡುತ್ತಿದ್ದಾರೆ.
ನಮ್ಮ ದೇಶಕ್ಕೆ ಒದಗಿಬರುತ್ತಿರುವ ಅಪಾಯದ ಬಗ್ಗೆ ನಾವು ಎಚ್ಚರಿಕೆಯಿಂದಿರಬೇಕು ಎಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ. ಅವರ ಈ ಹೇಳಿಕೆ ಬಿಡುಗಡೆ ನಂತರ ಎಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಡೊನಾಲ್ಡ್ ಅವರು ಫ್ಯಾಸಿಸ್ಟ್ ಜನನಾಯಕನಾಗಿ ಅಧ್ಯಕ್ಷೀಯ ಚುನಾವಣೆಗೆ ಇಳಿಯುತ್ತಿದ್ದಾರೆ ಎಂದು ಡೆಮಾಕ್ರಟಿಕ್ ಅಭ್ಯರ್ಥಿ ಮಾರ್ಟಿನ್ ಒ ಮಾಲ್ಲಿ ಹೇಳಿದ್ದಾರೆ.