

ವಾಷಿಂಗ್ಟನ್: ಕಳೆದ ವಾರ ಕ್ಯಾಲಿಫೋರ್ನಿಯಾದಲ್ಲಿ ನಡೆದ ಭಯೋತ್ಪಾದಕ ಕೃತ್ಯದ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದು, ಮುಸ್ಲಿಮರು ಅಮೆರಿಕ ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಹೇಳಿದ್ದಾರೆ.
ಡೊನಾಲ್ಡ್ ನೀಡಿರುವ ಹೇಳಿಕೆ ಅಮೆರಿಕ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದು, ವಿವಾದಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಅಮೇರಿಕಾದಲ್ಲಿ ಏನಾಗುತ್ತಿದೆ ಎಂಬುದನ್ನು ಸರ್ಕಾರ ತಿಳಿಯುವವರೆಗೂ ಯಾವುದೇ ಕಾರಣಕ್ಕೂ ಮುಸ್ಲಿಮರು ದೇಶವನ್ನು ಪ್ರವೇಶಿಸಲು ಬಿಡಬಾರದು ಎಂದು ಡೊನಾಲ್ಡ್ ಏಳಿದ್ದಾರೆ.
ಕ್ಯಾಲಿಫೋರ್ನಿಯಾ ದಾಳಿ ಬಗ್ಗೆ ದೇಶವನ್ನುದ್ದೇಶಿಸಿ ಮಾತನಾಡಿದ್ದ ಅಧ್ಯಕ್ಷ ಬರಾಕ್ ಒಬಾಮ ಇಸೀಸ್ ಉಗ್ರರ ನಿರ್ನಾಮ ಮಾಡುತ್ತೇವೆ, ಹಾಗೆಂದು ನಮ್ಮ ಯುದ್ಧ ಮುಸ್ಲಿಂ ಧರ್ಮದ ವಿರುದ್ಧ ಅಲ್ಲ, ಅಮೆರಿಕ ಪ್ರವೇಶಕ್ಕೆ ಧಾರ್ಮಿಕ ಪರೀಕ್ಷೆ ಅಗತ್ಯವಿಲ್ಲ ಎಂದು ಹೇಳಿದ ಬೆನ್ನಲ್ಲೇ ಡೊನಾಲ್ಡ್ ಮುಸ್ಲಿಮರು ದೇಶದೊಳಗೆ ಕಾಲಿಡಲು ಬಿಡಬಾರದು ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ.
ಬರಾಕ್ ಒಬಾಮ ಅವರ ಹೇಳಿಕೆಯನ್ನು ಲೇವಡಿ ಮಾಡಿರುವ ಡೊನಾಲ್ಡ್, ಭಯೋತ್ಪಾದನಾ ದಾಳಿಗೆ ದೇಶದ ನೂರಾರು ಅಮಾಯಕರು ಬಲಿಯಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಜಿಹಾದ್‌ನಲ್ಲಿ ಮಾತ್ರ ನಂಬಿಕೆ ಇರಿಸಿರುವ ವ್ಯಕ್ತಿಗಳಿಗೆ ಅಮೆರಿಕವನ್ನು ಬಲಿಪಶುವಾಗಿ ನೀಡಲು ನಾವು ಬಿಡುವುದಿಲ್ಲ. ಮನುಷ್ಯ ಜೀವಕ್ಕೆ ಯಾವುದೇ ಬೆಲೆ ನೀಡದ ಈ ಮನುಕುಲ ವಿರೋಧಿಗಳು ಇವರು’ ಎಂದು ಡೊನಾಲ್ಡ್ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹೇಳಿದ್ದಾರೆ.
ಡೊನಾಲ್ಡ್ ಹೇಳಿಕೆಗೆ ಅಮೆರಿಕದ ಕೆಲವು ಮುಖಂಡರು ವಿರೋಧ ವ್ಯಕ್ತಪಡಿಸಿದ್ದರೆ, ಸಾಮಾಜಿಕ ಜಾಲತಾಣಗಳಲ್ಲಿ ಡೋನಾಲ್ಡ್ ಬೆಂಬಲಿಗರಿಂದ ಬೆಂಬಲವ್ಯಕ್ತವಾಗಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ್ತೋರ್ವ ಅಭ್ಯರ್ಥಿ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಸಹ ಡೊನಾಲ್ಡ್ ಹೇಳಿಕೆಯನ್ನು ಖಂಡಿಸಿದ್ದಾರೆ.
ಈ ಹಿಂದೆಯೂ ಇಂಥದ್ದೇ ಹೇಳಿಕೆ ನೀಡಿದ್ದ ಡೊನಾಲ್ಡ್, ಅಮೆರಿಕದಲ್ಲಿರುವ ಮಸೀದಿಗಳ ಮೇಲೆ ಕಣ್ಗಾವಲು ಇಡಬೇಕು ಹಾಗೂ ಅಮೇರಿಕಾದ ವಾಸಿಸುವ ಎಲ್ಲಾ ಮುಸ್ಲಿಮರಿಗಾಗಿ ಡೇಟಾಬೇಸ್ ತೆರೆಯಬೇಕು ಎಂದು ಆಗ್ರಹಿಸಿದ್ದರು.