

ಇಸ್ಲಾಮಾಬಾದ್: ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ಭಾರತದೊಂದಿಗೆ ಸೌಹಾರ್ದಯುತ ಮಾತುಕೆಗೆ ಸಿದ್ಧ ಎಂದು ಹೇಳಿದ್ದ ಪಾಕಿಸ್ತಾನ ಮತ್ತೊಮ್ಮೆ ಉಲ್ಟಾ ಹೊಡೆದಿದೆ.
ಮುಂಬೈ ದಾಳಿ ತನಿಖೆ ವಿಷಯದಲ್ಲಿ ಭರವಸೆ ನೀಡಿ ನಂತರ ಹೆಚ್ಚಿನ ಸಾಕ್ಷ್ಯಾಧಾರ ಕೇಳಿದ್ದ ಪಾಕಿಸ್ತಾನ ಈಗ ಕಾಶ್ಮೀರ ವಿಷಯ ಬದಿಗಿಟ್ಟು ಭಾರತದೊಂದಿಗೆ ಮಾತುಕತೆ ನಡೆಸಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಮಾತುಕತೆ ಅಂಶದಲ್ಲಿ ಕಾಶ್ಮೀರ ವಿಷಯವನ್ನು ಸೇರಿಸದೇ ಇದ್ದರೆ ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವುದಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಸರ್ತಾಜ್ ಅಜೀಜ್ ಹೇಳಿದ್ದಾರೆ. ಪಾಕಿಸ್ತಾನ ತನ್ನ ನಿಲುವಿಗೆ ಬದ್ಧವಾಗಿದ್ದು ಕಾಶ್ಮೀರ ವಿಷಯದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವುದಿಲ್ಲ ಎಂದಿ ಅಜೀಜ್ ಹೇಳಿದ್ದಾರೆ.
ರಷ್ಯಾದಲ್ಲಿ ನರೇಂದ್ರ ಮೋದಿ- ನವಾಜ್ ಷರೀಫ್ ನಡುವೆ ನಡೆದ ಮಾತುಕತೆ ವೇಳೆ ಪಾಕ್ ಪ್ರಧಾನಿ ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸದೇ ಇದ್ದದ್ದು ಅಚ್ಚರಿ ಮೂಡಿಸಿತ್ತು. ಆದರೆ ಕೆಲವೇ ದಿನಗಳಲ್ಲಿ ಪಾಕಿಸ್ತಾನ ತನ್ನ ಹಳೆಯ ವರಸೆ ಮುಂದುವರೆಸಿದ್ದು ಕಾಶ್ಮೀರ ವಿಷಯವನ್ನು ಬಿಟ್ಟು ಮಾತನಾಡುವುದಿಲ್ಲ ಎಂದು ಹೇಳಿದೆ.
ಮುಂಬೈ ದಾಳಿ ತನಿಖೆ ಚುರುಕುಗೊಳಿಸುವುದಕ್ಕಾಗಿ ಮತ್ತಷ್ಟು ಸಾಕ್ಷ್ಯಾಧಾರ ಅವಶ್ಯಕತೆಯಿದೆ ಎಂದಿರುವ ಪಾಕಿಸ್ತಾನ ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಒದಗಿಸುವಂತೆಯೂ ಭಾರತವನ್ನು ಕೇಳಿದೆ.