

ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಅವರ ವಾಶಿಂಗ್ಟನ್ ಪ್ರವಾಸದ ವೇಳೆಯಲ್ಲಿ ರಕ್ಷಣೆ ಸಂಬಂಧಿಸಿದಂತೆ ಮಾತುಕತೆ ನಡೆಯುವುದಲ್ಲದೆ, ಅಮೆರಿಕಾದ ಜೊತೆಗೆ ಆರ್ಥಿಕ ಸಂಬಂಧ ವೃದ್ಧಿಯತ್ತ ಕೂಡ ಗಮನಾರ್ಹ ಮಾತುಕತೆಗಳು ನಡೆಯಲಿವೆ ಎಂದು ಪಾಕಿಸ್ತಾನ ತಿಳಿಸಿದೆ.
ಪ್ರಾದೇಶಿಕ ಮತ್ತು ಜಾಗತಿಕ ಹಿತಾಸಕ್ತಿಗಳಿಗೆ ಸಂಬಧಿಸಿದಂತೆ ಎರಡು ಪಕ್ಷಗಳು ಹಲವು ವಿಷಯಗಳ ಮೇಲೆ ಚರ್ಚೆ ನಡೆಸಲಿವೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಸಲಹೆಗಾರ ಸರ್ತಾಜ್ ಅಜೀಜ್ ಹೇಳಿದ್ದಾರೆ.
ಅಮೆರಿಕಾದ ಜೊತೆ ಮಾತುಕತೆ ನಡೆಸುವ ವೇಳೆಯಲ್ಲಿ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತಂದುಕೊಳ್ಳುವುದಿಲ್ಲ ಎಂದು ಅವರು ತಿಳಿಸಿರುವುದಾಗಿ ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ.
ಅಪ್ಘಾನಿಸ್ಥಾನದ ಪರಿಸ್ಥಿತಿಯ ಬಗ್ಗೆಯೂ ಚರ್ಚಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಸರ್ತಾಜ್ ಉತ್ತರಿಸಿದ್ದಾರೆ.
ಅಪ್ಘಾನಿಸ್ಥಾನ ಬಯಸಿದರೆ ಅಲ್ಲಿನ ಸರ್ಕಾರ ಮತ್ತು ತಾಲಿಬಾನ್ ಬಣಗಳ ನಡುವೆ ಶಾಂತಿ ಮಧ್ಯಸ್ಥಿಕೆ ವಹಿಸಲು ಪಾಕಿಸ್ತಾನ ಸಿದ್ಧ ಎಂದು ಕೂಡ ಅವರು ಹೇಳಿದ್ದಾರೆ.