

ಕರಾಚಿ: ಭಾರತದಿಂದ 4000 ಮೆಗಾವ್ಯಾಟ್ ವಿದ್ಯುತ್ ಆಮದು ಮಾಡಿಕೊಳ್ಳುವ ನಿರ್ಧಾರವನ್ನು ಪಾಕಿಸ್ತಾನ ಕೈಬಿಟ್ಟಿದೆ. ಭಾರತ ಪಾಕಿಸ್ತಾನ ವಿರೋಧಿ ಧೋರಣೆ ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಾಕ್ ನ ಜಲಸಂಪನ್ಮೂಲ ಹಾಗೂ ಇಂಧನ ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಡಾನ್ ಪತ್ರಿಕೆಗೆ ಹೇಳಿಕೆ ನೀಡಿರುವ ಸಚಿವ ಖವಾಜ್ ಅಸೀಫ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಪಾಕಿಸ್ತಾನದೊಂದಿಗೆ ಶಾಂತಿ ಮಾತುಕತೆಯ ವಿರುದ್ಧವಾಗಿದೆ. ಅಲ್ಲದೇ ತನ್ನ ದೇಶಕ್ಕೆ ಬರುವ ಪಾಕಿಸ್ತಾನಿ ಪ್ರಜೆಗಳ ವಿರುದ್ಧ ದಾಳಿ ನಡೆಸುವುದಕ್ಕೆ ತೀವ್ರವಾದಿಗಳ ಗುಂಪಿಗೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ಭಾರತ ಪಾಕಿಸ್ತಾನ ವಿರೋಧಿ ನಿಲುವು ಹೊಂದಿರುವಾಗ ವಿದ್ಯುತ್ ಆಮದು ಮಾಡಿಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದೆ. 500 -800 ಮೆಗಾವ್ಯಾಟ್ ವಿದ್ಯುತ್ ರಫ್ತು ಮಾಡಲು ಅದಾನಿ ಎಂಟರ್ ಪ್ರೈಸಸ್ ಸಂಸ್ಥೆ ಪ್ರಸ್ತಾವನೆ ಸಲ್ಲಿಸಿತ್ತಾದರೂ ಈ ವರೆಗೂ ಯಾವುದೇ ಬೆಳವಣಿಗೆಯಾಗಿಲ್ಲ, ಪ್ರಸ್ತುತ 1000 ಮೆಗಾವ್ಯಾಟ್ ವಿದ್ಯುತ್ ಆಮದಿಗೆ ಪಾಕಿಸ್ತಾನ ತೆಹ್ರಾನ್ ನೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಖವಾಜ್ ಅಸೀಫ್ ಹೇಳಿದ್ದಾರೆ.