

ಧರ್ಮಶಾಲಾದಲ್ಲಿ ಏ.30 ಹಾಗೂ ಮೇ.1 ರಂದು ವಿಶ್ವ ಉಯ್ಫರ್ ಕಾಂಗ್ರೆಸ್ ಸಮ್ಮೇಳನ ನಡೆಯುತ್ತಿದ್ದು, ಸಂಘಟನೆಯ ಅಧ್ಯಕ್ಷ ದೋಲ್ಕುನ್ ಇಸಾ ಗೆ ವೀಸಾ ನೀಡುವ ವಿಚಾರ ಕಳೆದ ಕೆಲವು ದಿನಗಳಿಂದ ದಿನನಿತ್ಯದ ಸುದ್ದಿಗಳಲ್ಲಿ ಪ್ರಾಮುಖ್ಯತೆ ಪಡೆಯುತ್ತಿದೆ.
ದೋಲ್ಕುನ್ ಇಸಾ ಚೀನಾದ ವಶದಲ್ಲಿರುವ ಕ್ಸಿನ್‌ಜಿಯಾಂಗ್ ಉಯ್ಘರ್ ಎಂದು ಕರೆಯಲ್ಪಡುವ 'ಈಸ್ಟ್ ತುರ್ಕಿಸ್ತಾನ್' ನ ಸ್ವಾಯತ್ತತೆಯ ಹೋರಾಟಗಾರನಾಗಿದ್ದಾರೆ. ಕ್ಸಿನ್‌ಜಿಯಾಂಗ್ ನಲ್ಲಿ ಸುನ್ನಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದು ಕ್ಸಿನ್‌ಜಿಯಾಂಗ್ ಅಥವಾ ಈಸ್ಟ್ ತುರ್ಕಿಸ್ತಾನ್ ನ್ನು ಚೀನಾ ಅಕ್ರಮವಾಗಿ ವಶಪಡಿಸಿಕೊಂಡಿದ್ದು ಸ್ವಾಯತ್ತ ಪ್ರದೇಶವನ್ನಾಗಿ ಘೋಶಿಸಬೇಕೆಂದು ಹೋರಾಟ ನಡೆಸುತ್ತಿದ್ದಾರೆ.
ದೋಲ್ಕುನ್ ಇಸಾ, ರಾಜಕೀಯ ಹಕ್ಕುಗಳನ್ನು ಪಡೆಯಲು ಹಿಂಸಾತ್ಮಕ ಮಾರ್ಗವನ್ನು ಖಂಡಿಸುತ್ತಿದ್ದಾರಾದರೂ ಚೀನಾ ಮಾತ್ರ ಇಸಾ ನಡೆಸುತ್ತಿರುವ ಚಟುವಟಿಕೆಗಳು ಭಯೋತ್ಪಾದನೆಗೆ ಕಾರಣವಾಗಿದೆ ಎಂದು ಆರೋಪಿಸಿದೆ. ತಮ್ಮ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ 1997 ರಲ್ಲಿ ದೋಲ್ಕುನ್ ಇಸಾ ಚೀನಾ ತೊರೆದು 2006 ರಲ್ಲಿ ಯುರೋಪ್ ನಲ್ಲಿ ಆಶ್ರಯ ಪಡೆದಿದ್ದರು.
ಜರ್ಮನಿಯಲ್ಲಿ ಇಸಾ ಆಶ್ರಯ ಪಡೆದ ನಂತರ ಚೀನಾ ಇಸಾ ವಿರುದ್ಧ ಇಂಟರ್ ಪೋಲ್ ಮೂಲಕ ರೆಡ್ ನೋಟಿಸ್ ಜಾರಿಗೊಳಿಸಿತ್ತು. ಆದರೆ ಈ ವರೆಗೂ ದೋಲ್ಕುನ್ ಇಸಾ ಬಂಧನ ಸಾಧ್ಯವಾಗಿಲ್ಲ. 2009 ರಲ್ಲಿ ಚೀನಾದ ವಿವಾದಿತ ಪ್ರದೇಶ ಕ್ಸಿನ್‌ಜಿಯಾಂಗ್ ನಲ್ಲಿ ಸಂಭವಿಸಿದ್ದ ಗಲಭೆಗೆ ಚೀನಾ ವಿಶ್ವ ಉಯ್ಫರ್ ಕಾಂಗ್ರೆಸ್ ಸಂಘಟನೆಯನ್ನು ಹಾಗೂ ಅದರ ಮುಖ್ಯಸ್ಥ ದೋಲ್ಕುನ್ ಇಸಾ ಅವರನ್ನು ದೂಷಿಸಿತ್ತು. ಈ ಗಲಭೆಯಲ್ಲಿ 197 ಜನರು ಪ್ರಾಣಕಳೆದುಕೊಂಡಿದ್ದರು.
ಚೀನಾ ಈಸ್ಟ್ ತುರ್ಕಿಸ್ತಾನ್ ಹಾಗೂ ಟಿಬೆಟ್ ನ ಜನರ ನರಮೇಧ ನಡೆಸಿದ್ದಾರ ವಿರುದ್ಧ ಪ್ರತಿಭಟನೆ ಸೂಚಕವಾಗಿ 2008 ರಲ್ಲಿ ಬೀಜಿಂಗ್ ನಲ್ಲಿ ನಡೆದ ಸಮ್ಮರ್ ಒಲಂಪಿಕ್ಸ್ ನ್ನು ಬಹಿಷ್ಕರಿಸಬೇಕು ಎಂದು ದೋಲ್ಕುನ್ ಇಸಾ ಕರೆ ನೀಡಿದ್ದರು. ಇಷ್ಟೆಲ್ಲಾ ನಡೆದ ಬಳಿಕ ಧರ್ಮಶಾಲಾದಲ್ಲಿ ನಡೆಯುತ್ತಿರುವ ವಿಶ್ವ ಉಯ್ಫರ್ ಕಾಂಗ್ರೆಸ್ ಸಮ್ಮೇಳನದಲ್ಲಿ ಚೀನಾ ವಶದಲ್ಲಿರುವ ಟಿಬೆಟ್, ಈಸ್ಟ್ ತುರ್ಕಿಸ್ತಾನ್, /ಕ್ಸಿನ್‌ಜಿಯಾಂಗ್ ನ ಪ್ರತ್ಯೇಕತಾವಾದಿ, ಭಿನ್ನಮತೀಯ ನಾಯಕರು ಭಾಗವಹಿಸುತ್ತಿದ್ದಾರೆ. ಈ ಸಮ್ಮೇಳನದಲ್ಲಿ ಭಾಗವಹಿಸಬೇಕಿದ್ದ ದೋಲ್ಕುನ್ ಇಸಾ ಗೆ ಈಗ ವೀಸಾ ನಿರಾಕರಿಸಲಾಗಿದೆ.