

ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುತ್ತಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪ್ರಚಾರ ಸಮಾರಂಭವೊಂದರಲ್ಲಿ ಹತಾಶೆ ವ್ಯಕ್ತಪಡಿಸಿದ್ದು, ಒಂದು ವೇಳೆ ಅಮೆರಿಕ ಮೇಲೆ ದಾಳಿ ನಡೆದರೆ ಜಪಾನ್ ಸೋನಿ ಟಿವಿ ವೀಕ್ಷಿಸುತ್ತದೆ ಎಂದು ಹೇಳಿದ್ದಾರೆ.
ಅಮೆರಿಕ ಜಪಾನ್ ನನ್ನ ರಕ್ಷಿಸುವ ಒಪ್ಪಂದಕ್ಕೆ ಬದ್ಧವಾಗಿದೆ. ಆದರೆ ಅಮೆರಿಕ ಮೇಲೆ ದಾಳಿ ನಡೆದರೆ, ಜಪಾನ್ ಗೆ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ ಎಂದು ಟ್ರಂಪ್ ಹತಾಶ ಭಾವನೆ ವ್ಯಕ್ತಪಡಿಸಿದ್ದಾರೆ. ಜಪಾನ್ ನ ಆರ್ಟಿಕಲ್ 9 ರ ಪ್ರಕಾರ ವಿದೇಶಗಳಿಗೆ ಜಪಾನ್ ನ ಸೇನೆಯನ್ನು ಕಲಿಸುವುದಕ್ಕೆ ಸಾಂವಿಧಾನಿಕವಾದ ನಿರ್ಬಂಧ ಇದೆ, ಈ ಹಿನ್ನೆಲೆಯಲ್ಲಿ ಅಮೆರಿಕ ಮೇಲೆ ದಾಳಿ ನಡೆದದ್ದೇ ಆದಲ್ಲಿ ಜಪಾನ್ ಗೆ ಸೋನಿ ಟಿವಿಯಲ್ಲಿ ಅದನ್ನು ವೀಕ್ಷಿಸಲಷ್ಟೇ ಸಾಧ್ಯ ಎಂದು ಟ್ರಂಪ್ ಹೇಳಿದ್ದಾರೆ.
ಜಪಾನ್ ಮೇಲೆ ದಾಳಿ ನಡೆದರೆ ಅಮೆರಿಕ ತಕ್ಷಣವೇ ಜಪಾನ್ ಗೆ ಸೇನಾ ನೆರವು ನೀಡುವ ಒಪ್ಪಂದ ಮಾಡಿಕೊಂಡಿದ್ದೇವೆ. ಆದರೆ ಅಮೆರಿಕಾ ಮೇಲೆ ದಾಳಿ ನಡೆದರೆ ಜಪಾನ್ ಇಂತಹ ಸಹಾಯ ಮಾಡಲು ಸಾಧ್ಯವಿಲ್ಲ, ಇದೆಲ್ಲಾ ಇಂತಹ ವ್ಯವಹಾರ ಎಂದು ಟ್ರಂಪ್ ಪ್ರಶ್ನಿಸಿದ್ದಾರೆ.