

ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿ ಬಲೂಚಿಸ್ಥಾನದ ಸ್ವಾತಂತ್ರ್ಯದ ಬಗ್ಗೆ ಮಾತನಾಡಿರುವುದು ಪಾಕಿಸ್ತಾನಕ್ಕೆ ಮಾತ್ರ ತಲೆನೋವಾಗಿ ಪರಿಣಮಿಸದೇ ಚೀನಾಗೂ ಆತಂಕ ಮೂಡಿಸಿದೆ.
ಭಾರತದ ಕಾರ್ಯತಂತ್ರವೇನಾದರೂ ಬಲೂಚಿಸ್ಥಾನದಲ್ಲಿ ಚೀನಾ-ಪಾಕಿಸ್ತಾನ ಎಕೆನಾಮಿಕ್ ಕಾರಿಡಾರ್(ಸಿಪಿಇಸಿ)ಗೆ ಅಡ್ಡಿ ಪಡಿಸಿದಲ್ಲಿ, ಚೀನಾ ಮಧ್ಯಪ್ರವೇಶ ಮಾಡಬೇಕಾಗುತ್ತದೆ ಎಂದು ಅಲ್ಲಿನ ಚಿಂತಕರ ಚಾವಡಿ ಎಚ್ಚರಿಕೆ ನೀಡಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಬಲೂಚಿಸ್ಥಾನದ ವಿಮೋಚನೆ ಬಗ್ಗೆ ಸ್ವಾತಂತ್ರ್ಯ ದಿನಾಚರಣೆ ಭಾಷಣ ಉಲ್ಲೇಖ ಮಾಡಿರುವುದು ಚೀನಾಗೂ ಆತಂಕ ಮೂಡಿಸಿದೆ ಎಂಬುದು ಸ್ಪಷ್ಟವಾಗಿದೆ.
ಚೀನಾದ ರಾಷ್ಟ್ರೀಯ ಭದ್ರತಾ ಸಚಿವಾಲಯಕ್ಕೆ ಸಂಬಂಧಿಸಿದ ಚಿಂತಕರ ಚಾವಡಿಯ ಸಂಶೋಧಕರೊಬ್ಬರು ಬಲೂಚಿಸ್ಥಾನದ ವಿಮೋಚನೆ ಬಗ್ಗೆ ಭಾರತದ ಅಭಿಪ್ರಾಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಮೆರಿಕಾದೊಂದಿಗೆ ಭಾರತದ ಸೇನಾ ಒಪ್ಪಂದಗಳು ಬಲಗೊಳ್ಳುತ್ತಿದ್ದು, ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ನಿಲುವು ಬದಲಾಗಿರುವುದು ಚೀನಾಗೆ ಎಚ್ಚರಿಕೆಯ ಗಂಟೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆ ಮೇಲೆ ಮಾಡಿದ ಭಾಷಣದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಬಲೂಚಿಸ್ಥಾನದ ವಿಮೋಚನೆ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿರುವುದು ಚೀನಾದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಚೀನಾದ ಚಿಂತಕರ ಚಾವಡಿಯ ಸಂಶೋಧಕರೊಬ್ಬರು ತಿಳಿಸಿದ್ದಾರೆ.