ವಾಷಿಂಗ್ಟನ್: ನೂತನವಾಗಿ ಆಯ್ಕೆಯಾಗಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ತೈವಾನ್ ಅಧ್ಯಕ್ಷ ಟಿಸೈ ಇಂಗ್-ವೆನ್ ಜೊತೆಗೆ ನಡೆದಿರುವ ದೂರವಾಣಿ ಮಾತುಕತೆ ಚೈನಾವನ್ನು ಕುಪಿತಗೊಳಿಸಿದೆ ಎಂದಿವೆ ವರದಿಗಳು.
೧೯೭೯ ರಲ್ಲಿ ತೈಪೆ ಜೊತೆಗೆ ರಾಯಭಾರ ಸಂಬಂಧಗಳನ್ನು ರದ್ದು ಮಾಡಿದಾಗಲಿಂದಲೂ ಅಮೆರಿಕಾ ಮತ್ತು ತೈವಾನ್ ನಡುವಿನ ಮೊದಲ ದ್ವಿಪಕ್ಷೀಯ ಮಾತುಕತೆ ಇದು.
ಈ ಮಾತುಕತೆ ಚೈನಾಗೆ ಕಿರಿಕಿರಿಯನ್ನುಂಟುಮಾಡಿದ್ದು "ಅಮೆರಿಕಾ ಮತ್ತು ತೈವಾನ್ ನಡುವೆ ಯಾವುದೇ ಅಧಿಕೃತ ಮಾತುಕತೆ ಅಥವಾ ಮಿಲಿಟರಿ ಸಂಪರ್ಕವನ್ನು ನಾವು ವಿರೋಧಿಸುತ್ತೇವೆ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ತೈವಾನ್ ಜೊತೆಗೆ ನಡೆಸಿರುವ ಮಾತುಕತೆಯ ಬಗ್ಗೆ ಶ್ವೇತಭವನದಿಂದ ಸ್ಪಷ್ಟಿಕರಣವನ್ನು ಕೂಡ ಬೀಜಿಂಗ್ ಕೇಳಿದೆ.
'ಒಂದು ಚೈನಾ ನೀತಿ'ಯ ಬಗ್ಗೆ ಶ್ವೇತಭವನ ಬದ್ಧವಾಗಿದೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರ ನೆಡ್ ಪ್ರೈಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಟ್ವಿಟ್ಟರ್ ಮೊರೆ ಹೋದ ಟ್ರಂಪ್ "ತೈವಾನ್ ರಾಷ್ಟ್ರಾಧ್ಯಕ್ಷ ಇಂದು ನನಗೆ ಕರೆ ಮಾಡಿದ್ದರು, ಮತ್ತು ನಾನು ಅಧ್ಯಕ ಚುನಾವಣೆಯನ್ನು ಗೆದ್ದಿದ್ದಕ್ಕೆ ಅಭಿನಂದಿಸಿದರು. ಧನ್ಯವಾದಗಳು" ಎಂದು ಬರೆದಿದ್ದಾರೆ.
"ಅಮೆರಿಕಾ ತೈವಾನ್ ಗೆ ಬಿಲಿಯನ್ ಡಾಲರ್ ಮೊತ್ತದ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಮಾರುವುದು ಹೇಗೆ ಎಂಬುದು ಆಸಕ್ತಿದಾಯಕ ಆದರೆ ನಾನು ಅಭಿನಂದನಾ ಕರೆಯನ್ನು ಸ್ವೀಕರಿಸಬಾರದು" ಎಂದು ಕೂಡ ಅವರು ಬರೆದಿದ್ದಾರೆ.
೨೦೧೫ ರಲ್ಲಿ ಅಮೆರಿಕಾ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮಾ ಆಡಳಿತ ತೈವಾನ್ ಜೊತೆಗೆ ೧.೮೩ ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿತ್ತು. ಇದು ಕೂಡ ಚೈನಾವನು ಕುಪಿತಗೊಳಿಸಿತ್ತು. ಇದನ್ನು ನೇರವಾಗಿ ಹೇಳದೆ ಟ್ರಂಪ್ ಮೇಲಿನ ಪ್ರತಿಕ್ರಿಯೆ ನೀಡಿದ್ದಾರೆ.
ಮಾಜಿ ಅಮೆರಿಕಾ ಪ್ರಧಾನಿ ಜಿಮ್ಮಿ ಕಾರ್ಟರ್, ಬೀಜಿಂಗ್ ಮಾತ್ರ ಚೈನಾ ಸರ್ಕಾರ ಎಂದು ಘೋಷಿಸಿ, ೧೯೭೯ ರಲ್ಲಿ ಅಮೆರಿಕಾ ಮತ್ತು ತೈವಾನ್ ನಡುವೆ ಎಲ್ಲ ಅಧಿಕೃತ ರಾಯಭಾರ ಸಂಪರ್ಕವನ್ನು ಕಡಿತಗೊಳಿಸಿದ್ದರು.
೧೯೮೦ ರಲ್ಲಿ ತೈಪೆಯಲ್ಲಿದ್ದ ತನ್ನ ರಾಯಭಾರ ಕಚೇರಿಯನ್ನು ವಾಷಿಂಗ್ಟನ್ ಮುಚ್ಚಿತ್ತು.